ಸದನದಲ್ಲಿ ಗವರ್ನರ್‌ ಗದ್ದಲ

KannadaprabhaNewsNetwork |  
Published : Jan 24, 2026, 02:45 AM IST
ಕಲಾಪ | Kannada Prabha

ಸಾರಾಂಶ

ಗುರುವಾರ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣ ಕ್ರಮ, ನಿರ್ಗಮಿಸುವಾಗ ನಡೆದ ಘಟನೆ ಶುಕ್ರವಾರ ಉಭಯ ಸದನಗಳಲ್ಲಿ ವಾದ-ಪ್ರತಿವಾದ, ಆರೋಪ-ಪ್ರತ್ಯಾರೋಪಗಳಿಂದ ಪ್ರತಿಧ್ವನಿಸಿತು. ಪರಿಷತ್ತಿನ ಇಡೀ ದಿನದ ಸದನ ಇದೇ ವಿಚಾರಕ್ಕೆ ಬಲಿಯಾದರೆ, ವಿಧಾನಸಭೆಯಲ್ಲಿ ಅರ್ಧ ದಿನದ ಕಲಾಪವನ್ನು ನುಂಗಿಹಾಕಿತು.

ಸರ್ಕಾರದ ಭಾಷಣ ಮಾಡಲು ಗೆಹಲೋತ್‌ ಒಪ್ಪದ ವಿವಾದ

ವಿಧಾನಮಂಡಲದಲ್ಲಿ ಗವರ್ನರ್‌ ಭಾಷಣ ಗದ್ದಲ---

ಗೌರ್ನರ್‌ಗೆ ಅಡ್ಡಿ ಮಾಡಿದ ಎಚ್ಕೆ, ಹರಿ, ರವಿ ಸಸ್ಪೆಂಡ್‌ ಮಾಡಿ: ಬಿಜೆಪಿ

- ರಾಷ್ಟ್ರಗೀತೆವರೆಗೆ ಕಾಯದೆ ನಿರ್ಗಮಿಸಿದ ರಾಜ್ಯಪಾಲ ಕ್ಷಮೆ ಕೇಳಲಿ: ಎಚ್ಕೆ

====

- ಬಹುತೇಕ ಕಲಾಪ ನುಂಗಿದ ‘ರಾಷ್ಟ್ರಪತಿ ಭಾಷಣ’

- ವಿಪಕ್ಷ-ಕಾಂಗ್ರೆಸ್‌ ಶಾಸಕರ ಮಧ್ಯೆ ತೀವ್ರ ವಾಕ್ಸಮರ

- ಭಾರೀ ಗದ್ದಲಕ್ಕೆ ಮೇಲ್ಮನೆ ಇಡೀ ದಿನದ ಕಲಾಪ ಬಲಿ

- ಗವರ್ನರ್‌ಗೆ ಹರಿಪ್ರಸಾದ್‌, ಇತರರು ಅಡ್ಡಗಟ್ಟಿದ್ದಾರೆ

- ಈ ಮೂಲಕ ಗವರ್ನರ್‌ಗೆ ಅವಮಾನ ಮಾಡಿದ್ದಾರೆ

- ಹೀಗಾಗಿ ಇಬ್ಬರು ಸದಸ್ಯರ ಸಸ್ಪೆಂಡ್‌ಗೆ ಬಿಜೆಪಿಗರ ಪಟ್ಟು

- ಈ ಬಗ್ಗೆ ಮೇಲ್ಮನೆಯಲ್ಲಿ ಸಭಾಪತಿಗೆ ಬಿಜೆಪಿ ಪ್ರಸ್ತಾವನೆ

- ಇದನ್ನು ನೀತಿ ನಿರೂಪಣಾ ಸಮಿತಿಗೆ ವಹಿಸಿದ ಹೊರಟ್ಟಿ

- ಈ ರೂಲಿಂಗ್‌ ಬಗ್ಗೆ ಮರುಪರಿಶೀಲಿಸುವಂತೆ ‘ಕೈ’ ಮನವಿ

- ಸಾಧಕ-ಬಾಧಕ ಪರಿಶೀಲಿಸಿ ತೀರ್ಪು ನೀಡ್ತೇನೆಂದ ಹೊರಟ್ಟಿ

- ವಿಧಾನಸಭೆಯಲ್ಲೂ ರಾಷ್ಟ್ರಪತಿ ಭಾಷಣ ವಿಚಾರ ಪ್ರಸ್ತಾಪ

- ರಾಷ್ಟ್ರಪತಿ, ರಾಷ್ಟ್ರಗೀತೆಗೆ ಅಗೌರವ ಬಗ್ಗೆ ಚರ್ಚೆಗೆ ಬೇಡಿಕೆ

====

ಕನ್ನಡಪ್ರಭ ವಾರ್ತೆ ವಿಧಾನ ಮಂಡಲ

ಗುರುವಾರ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣ ಕ್ರಮ, ನಿರ್ಗಮಿಸುವಾಗ ನಡೆದ ಘಟನೆ ಶುಕ್ರವಾರ ಉಭಯ ಸದನಗಳಲ್ಲಿ ವಾದ-ಪ್ರತಿವಾದ, ಆರೋಪ-ಪ್ರತ್ಯಾರೋಪಗಳಿಂದ ಪ್ರತಿಧ್ವನಿಸಿತು. ಪರಿಷತ್ತಿನ ಇಡೀ ದಿನದ ಸದನ ಇದೇ ವಿಚಾರಕ್ಕೆ ಬಲಿಯಾದರೆ, ವಿಧಾನಸಭೆಯಲ್ಲಿ ಅರ್ಧ ದಿನದ ಕಲಾಪವನ್ನು ನುಂಗಿಹಾಕಿತು.

ಪ್ರಮುಖವಾಗಿ ರಾಜ್ಯಪಾಲರು ಭಾಷಣ ಮಾಡಿ ನಿರ್ಗಮಿಸುವಾಗ ಅಡ್ಡಗಟ್ಟಿದ ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್‌ ಹಾಗೂ ಎಸ್‌.ರವಿ ಅವರನ್ನು ಅಮಾನತು ಮಾಡಬೇಕೆಂಬ ಬಿಜೆಪಿಯ ಆಗ್ರಹ ಹಾಗೂ ರಾಷ್ಟ್ರಗೀತೆಗೂ ಮುನ್ನ ರಾಜ್ಯಪಾಲರು ನಿರ್ಗಮಿಸುವ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಿರುವ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂಬ ಕಾಂಗ್ರೆಸ್‌ ಶಾಸಕರು ಪಟ್ಟು ಹಿಡಿದದ್ದು ವಿಧಾನಮಂಡಲದ ಉಭಯ ಸದನಗಳ ಕಲಾಪ ಹಳಿ ತಪ್ಪಲು ಕಾರಣವಾಯಿತು.

ವಿಶೇಷವಾಗಿ ವಿಧಾನ ಪರಿಷತ್ತಿನಲ್ಲಿ ಇದೇ ವಿಷಯದ ಬಗ್ಗೆ ದಿನವಿಡೀ ತೀವ್ರ ವಾಗ್ವಾದ, ಧಿಕ್ಕಾರದ ಘೋಷಣೆಗಳ ವಿನಿಯಮ, ಆರೋಪ-ಪ್ರತ್ಯಾರೋಪಗಳಿಂದ ಗದ್ದಲದ ವಾತಾವರಣದಿಂದಾಗಿ ಕಲಾಪ ನಡೆಸಲಾಗದೇ ಸಭಾಪತಿ ಹೊರಟ್ಟಿ ಅವರು ಸದನವನ್ನು ಮೂರು ಬಾರಿ ಮುಂದೂಡಿದ ಘಟನೆ ನಡೆಯಿತು.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಆರ್‌.ಅಶೋಕ್‌, ರಾಜ್ಯಪಾಲರಿಗೆ ಅಗೌರವ ತೋರಿದವರನ್ನು ಅಮಾನತು ಮಾಡಬೇಕು. ಈ ವಿಚಾರದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಅದಕ್ಕೆ ಬಿಜೆಪಿ ಶಾಸಕರು ಧ್ವನಿಗೂಡಿಸಿ, ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿರುವುದು ಸದನಕ್ಕೆ, ರಾಜ್ಯಕ್ಕೆ ಮಾಡಿದ ಅವಮಾನ. ವಿಧಾನಸಭಾ ನಿಯಮಾವಳಿಯಂತೆ ರಾಜ್ಯಪಾಲರು ಬಂದಾಗ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಅಗೌರವ ತೋರಿದವರ ವಿರುದ್ಧ ಸ್ಪೀಕರ್‌ ಕ್ರಮ ಕೈಗೊಳ್ಳಬೇಕು. ಹೀಗಾಗಿ ಸಚಿವ ಎಚ್‌.ಕೆ.ಪಾಟೀಲ್‌ ಸೇರಿ ಕಾಂಗ್ರೆಸ್‌ ಶಾಸಕರು, ವಿಧಾನಪರಿಷತ್‌ ಸದಸ್ಯರನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.

ಅದಕ್ಕೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಶಾಸಕರು, ರಾಜ್ಯಪಾಲರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದರ ಬಗ್ಗೆ ಮೊದಲು ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ರಾಜ್ಯಪಾಲರು ಸಂವಿಧಾನದ ರಕ್ಷಣೆಗೆ ಕೆಲಸ ಮಾಡಬೇಕು. ಆದರೆ, ರಾಜ್ಯಪಾಲರು ಸರ್ಕಾರ ನೀಡಿದ ಭಾಷಣ ಓದದೆ ಸಂವಿಧಾನದ ಕಲಂ 176 (1)ನ್ನು ಉಲ್ಲಂಘಿಸಿದ್ದಾರೆ. ಜತೆಗೆ ರಾಷ್ಟ್ರಗೀತೆ ಬಿತ್ತರಿಸುವವರೆಗೆ ಕಾಯದೆ ತರಾತುರಿಯಲ್ಲಿ ಸದನದಿಂದ ಹೊರಡುವ ಮೂಲಕ ರಾಷ್ಟ್ರಗೀತೆಗೂ ಅಪಮಾನ ಮಾಡಿದ್ದಾರೆ. ಅವರು ರಾಜ್ಯದ ಜನ ಮತ್ತು ಸದನಕ್ಕೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಅಂತಿಮವಾಗಿ ಸ್ಪೀಕರ್‌ ಯು.ಟಿ. ಖಾದರ್‌ ಎರಡೂ ಮನವಿಗಳನ್ನು ಪುರಸ್ಕರಿಸದೆ, ಪರಿಶೀಲಿಸಿ ತಮ್ಮ ಆದೇಶ ಪ್ರಕಟಿಸುವುದಾಗಿ ಚರ್ಚೆಗೆ ಅಂತ್ಯ ಹಾಡಿದರು.

ನೀತಿ ನಿರೂಪಣಾ ಸಮಿತಿಗೆ ನೀಡಿಕೆ:

ಮೇಲ್ಮನೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು, ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಬಗ್ಗೆ ಚರ್ಚಿಸಲು ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು ಕಾಂಗ್ರೆಸ್‌ ಮಾಡಿದ್ದ ಪ್ರಸ್ತಾವನೆ ತಿರಸ್ಕರಿಸಿದರೆ, ಬಿ.ಕೆ.ಹರಿಪ್ರಸಾದ್‌ ಹಾಗೂ ಎಸ್‌.ರವಿ ಅವರನ್ನು ಅಮಾನತು ಮಾಡಬೇಕೆಂಬ ಬಿಜೆಪಿ ಪ್ರಸ್ತಾವನೆ ವಿಷಯವನ್ನು ನೀತಿ ನಿರೂಪಣಾ ಸಮಿತಿಗೆ ವಹಿಸುವುದಾಗಿ ರೂಲಿಂಗ್‌ ನೀಡಿದರು.

ಆದರೆ ಕಾಂಗ್ರೆಸ್‌ ಸದಸ್ಯರು ಬಿಜೆಪಿ ಪ್ರಸ್ತಾವನೆಯನ್ನು ನೀತಿ ನಿರೂಪಣಾ ಸಮಿತಿಗೆ ವಹಿಸುವ ರೂಲಿಂಗ್‌ ಮರು ಪರಿಶೀಲಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮರು ಪರಿಶೀಲಿಸಬಾರದೆಂದು ಆಗ್ರಹಿಸಿದರು. ಅದಕ್ಕೆ ಸಭಾಪತಿ ಅವರು ಮನವಿ ಕೊಡುವ ಹಕ್ಕು ಕಾಂಗ್ರೆಸ್‌ಗಿದೆ. ಹಾಗಾಗಿ ನೀಡಿರುವ ಮನವಿಯ ಸಾಧಕ-ಬಾಧಕ ಪರಿಶೀಲಿಸಿ ನೀಡುವ ತೀರ್ಪನ್ನು ಕಾಯ್ದಿರಿಸಿದ್ದೇನೆ ಎಂದು ತಿಳಿಸಿದರು.

ತೀವ್ರ ವಾಗ್ವಾದ:

ಅದಕ್ಕೂ ಮುನ್ನ ಆಡಳಿತ-ವಿರೋಧ ಪಕ್ಷಗಳ ನಡುವೆ ವಾಗ್ವಾದ, ಆರೋಪ-ಪ್ರತ್ಯಾರೋಪ, ಧಿಕ್ಕಾರದ ಘೋಷಣೆ ಜೋರಾಗಿತ್ತು. ಪದೇ ಪದೆ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಸಭಾನಾಯಕ ಎನ್‌.ಎಸ್‌. ಬೋಸರಾಜು, ಮುಖ್ಯಸಚೇತಕ ಸಲೀಂ ಅಹಮದ್‌, ಬಿ.ಕೆ. ಹರಿಪ್ರಸಾದ್ ಮತ್ತಿತರ ಸದಸ್ಯರು ರಾಜ್ಯಪಾಲರ ನಡವಳಿಕೆ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

---

ಪರಿಶೀಲಿಸಿ ರೂಲಿಂಗ್‌

ನೀಡುವೆ: ಖಾದರ್

ವಿಧಶನಸಭೆ: ಗವರ್ನರ್‌ ಭಾಷಣ ಕುರಿತ ಆಡಳಿತ ಹಾಗೂ ವಿಪಕ್ಷಗಳ ಚರ್ಚೆ ಆಲಿಸಿದ ಸ್ಪೀಕರ್‌ ಯು.ಟಿ. ಖಾದರ್‌, ‘ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ನೀಡಿರುವ ನಿಲುವಳಿ ಸೂಚನೆಯ ಹೊರತಾಗಿ ಸಾಕಷ್ಟು ವಿಷಯಗಳು ಚರ್ಚೆಯಾಗಿವೆ. ಇನ್ನು ಮತ್ತೆ ಚರ್ಚೆಗೆ ಅವಕಾಶ ನೀಡಲಾಗದು. ಸದಸ್ಯರ ಬೇಡಿಕೆ ಬಗ್ಗೆ ಪರಿಶೀಲಿಸಿ ನನ್ನ ಆದೇಶ ಪ್ರಕಟಿಸುವೆ’ ಎಂದು ಹೇಳಿ ಚರ್ಚೆಗೆ ಅಂತ್ಯ ಹಾಡಿದರು.

--

ರಾಜ್ಯಪಾಲರ ಬಗ್ಗೆ ಚರ್ಚೆಗೆ

ಅವಕಾಶವಿಲ್ಲ: ಹೊರಟ್ಟಿ ರೂಲಿಂಗ್‌

ವಿಧಾನಪರಿಷತ್ತು: ಮೇಲ್ಮನೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು, ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಬಗ್ಗೆ ಚರ್ಚಿಸಲು ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು ಕಾಂಗ್ರೆಸ್‌ ಮಾಡಿದ್ದ ಪ್ರಸ್ತಾವನೆ ತಿರಸ್ಕರಿಸಿದರು.

--

ಹರಿ, ರವಿ ಅಮಾನತು ಬೇಡಿಕೆ

ನಿರೂಪಣಾ ಸಮಿತಿಗೆ: ಹೊರಟ್ಟಿ

ವಿಧಾನಪರಿಷತ್ತು: ರಾಜ್ಯಪಾಲರು ವಿಧಾನಮಂಡಲದಿಂದ ಹೊರಹೋಗುವಾಗ ಅಡ್ಡಿಪಡಿಸಿದರು ಎನ್ನಲಾದ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹಾಗೂ ಎಸ್‌.ರವಿ ಅವರನ್ನು ಅಮಾನತು ಮಾಡಬೇಕೆಂಬ ಬಿಜೆಪಿ ಪ್ರಸ್ತಾವನೆ ವಿಷಯವನ್ನು ನೀತಿ ನಿರೂಪಣಾ ಸಮಿತಿಗೆ ವಹಿಸುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್‌ ನೀಡಿದರು.

---

ಗೌರ್ನರ್‌ ನಡೆ

ಖಂಡನೀಯ

ಅಧಿವೇಶನದಲ್ಲಿ ರಾಜ್ಯಪಾಲರು ರಾಷ್ಟ್ರಗೀತೆ ಬಿತ್ತರಿಸುವುದಕ್ಕೂ ಮುನ್ನ ಆತುರಾತುರಿಂದ ಹೊರಟಿದ್ದು ಸರಿಯಲ್ಲ. ಅವರು ರಾಜ್ಯದ ರಾಜ್ಯಪಾಲರು, ಈ ಸರ್ಕಾರದ ಮುಖ್ಯಸ್ಥರು. ಅವರು ಎಷ್ಟಾದರೂ ಭಾಷಣ ಓದಲಿ, ಆದರೆ, ರಾಷ್ಟ್ರಗೀತೆಗೆ ಅವಮಾನ ಮಾಡಿದ್ದು ಖಂಡನೀಯ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ತಿಮ್ಮಾಪುರ ರಾಜೀನಾಮೆಗೆ ವಿಪಕ್ಷ ಪಟ್ಟು, ಕಲಾಪ ಬಲಿ!
ರಾಜ್ಯಪಾಲರು, ಸಂವಿಧಾನಕ್ಕೆ ಕೈನಿಂದ ಅಪಮಾನ: ಅಶೋಕ್‌