6 ಮಸೂದೆಗಳಿಗೆ ರಾಜ್ಯಪಾಲರಿಂದ ಅಂಕಿತ - ಗ್ರಾಮೀಣ ಭಾಗದ ರೆವಿನ್ಯೂ ಸೈಟ್‌ಗಳಿಗೆ ಇ-ಖಾತಾ

ಸಾರಾಂಶ

  ಅನಧಿಕೃತ ಆಸ್ತಿಗಳಿಗೆ ಪ್ರತ್ಯೇಕ ಖಾತಾ ನೀಡಿ ದಂಡ ವಿಧಿಸಿ ತೆರಿಗೆ ವ್ಯಾಪ್ತಿಗೆ ತರಲು ಅವಕಾಶ ಮಾಡಿಕೊಡುವ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕ -2025ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರವು ಕಾಯಿದೆ ಜಾರಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

 ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕಂದಾಯ ನಿವೇಶನದಂತಹ ಅನಧಿಕೃತ ಆಸ್ತಿಗಳಿಗೆ ಪ್ರತ್ಯೇಕ ಖಾತಾ ನೀಡಿ ದಂಡ ವಿಧಿಸಿ ತೆರಿಗೆ ವ್ಯಾಪ್ತಿಗೆ ತರಲು ಅವಕಾಶ ಮಾಡಿಕೊಡುವ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕ -2025ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರವು ಕಾಯಿದೆ ಜಾರಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ವಿಧೇಯಕ ಸೇರಿ ಒಟ್ಟು ಆರು ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ ವ್ಯಾಪ್ತಿಯ ಆಸ್ತಿಗಳು ನಕ್ಷೆ ಮಂಜೂರಾತಿ ಪಡೆಯದೇ ಕಂದಾಯ ನಿವೇಶನದಲ್ಲಿ ಹಾಗೂ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನು ಬಿ ರಿಜಿಸ್ಟರ್‌ ಅಡಿ ಇ-ಖಾತಾ ನೀಡಲು ತೀರ್ಮಾನಿಸಲಾಗಿತ್ತು.

ಇದೇ ಮಾದರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಖಾತಾ ನೀಡಿ ತೆರಿಗೆ ವ್ಯಾಪ್ತಿಗೆ ತರುವುದಕ್ಕಾಗಿ ವಿಧೇಯಕದಲ್ಲಿ 199ಬಿ ಮತ್ತು 199ಸಿಗೆ ತಿದ್ದುಪಡಿ ತರಲಾಗಿದ್ದು, ಇದರಡಿ ಗ್ರಾಮೀಣ ಭಾಗದ ಕಂದಾಯ ನಿವೇಶನಗಳಿಗೂ ಇ-ಖಾತಾ ನೀಡಲು ಸರ್ಕಾರ ಅವಕಾಶ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

199ಬಿನಲ್ಲಿ ಯಾವುದೇ ಬಡಾವಣೆ ನಿರ್ಮಾಣಕ್ಕೂ ಮುನ್ನ ಗ್ರಾಮ ಪಂಚಾಯತಿ ಅಥವಾ ಸರ್ಕಾರದ ಅಧಿಸೂಚನೆ ಮೂಲಕ ನಿಗದಿ ಮಾಡಲಾದ ಪ್ರಾಧಿಕಾರ ಅಥವಾ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕಿದೆ. ಆದರೆ, ಅನುಮೋದನೆ ಪಡೆಯದೇ ನಿರ್ಮಿಸಲಾದ ನಿವೇಶನ, ಕಟ್ಟಡಗಳಿಗೆ ಅಧಿಕಾರಿಗಳು ಪಿಐಡಿ ಅಥವಾ ಖಾತಾ ನೀಡಬಾರದು. ಒಂದು ವೇಳೆ ನೀಡಿದರೆ ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿ ದಂಡನೆ ಅಥವಾ ಶಿಕ್ಷೆಗೆ ಗುರಿಯಾಗುತ್ತಾನೆ ಎಂದು ತಿಳಿಸಲಾಗಿದೆ.

ಅದೇ ರೀತಿ 119ಸಿಗೆ ತಿದ್ದುಪಡಿ ತಂದಿದ್ದು, ಕಾಯಿದೆ ಅನುಷ್ಠಾನಕ್ಕೆ ಬರುವ ಮೊದಲು ಸೃಜಿಸಿರುವ ಅನಧಿಕೃತ ಕಟ್ಟಡ, ಪರಿವರ್ತನೆಯಾಗದಿರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿಗಳಿಗೆ ತೆರಿಗೆ ವಿಧಿಸುವುದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆ ಸ್ವತ್ತುಗಳು ಮೊದಲ ವರ್ಷದ ತೆರಿಗೆಯು ಎರಡು ಪಟ್ಟು ಪಾವತಿಸಬೇಕಿದೆ. ಆನಂತರ ವಾರ್ಷಿಕ ತೆರಿಗೆಯನ್ನು ಪಾವತಿಸುವಂತೆ ಸೂಚಿಸಲಾಗುತ್ತಿದೆ. ಈ ತೆರಿಗೆ ಸಂಗ್ರಹಕ್ಕೆ ಪ್ರತ್ಯೇಕ ರಿಜಿಸ್ಟರ್‌ (ವಹಿ) ನಿರ್ವಹಣೆ ಮಾಡಿ ಖಾತಾ ನೀಡಬೇಕು. ಈ ಖಾತಾ ಆಸ್ತಿಯನ್ನು ಕಾನೂನುಬದ್ಧವಾಗಿ ಸಕ್ರಮಗೊಳಿಸುವುದಿಲ್ಲ ಎಂದೂ ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಹಾಗೆಯೇ, ಅಧಿಸೂಚನೆ ಪ್ರಕಟಗೊಂಡ 2 ವರ್ಷಗಳಲ್ಲಿ ಅನಧಿಕೃತ ಆಸ್ತಿಗಳನ್ನು ತೆರಿಗೆ ಪಾವತಿ ವ್ಯವಸ್ಥೆಯೊಳಗೆ ತರುವಂತಾಗಬೇಕು ಎಂದೂ ಸ್ಪಷ್ಟಪಡಿಸಲಾಗಿದೆ.

ಒಟ್ಟು ಆರು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ:

ಗ್ರಾಮೀಣಾಭಿವೃದ್ಧಿ ತಿದ್ದುಪಡಿ ವಿಧೇಯಕ ಸೇರಿ ಒಟ್ಟು ಆರು ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಪಶು ಆಹಾರ ಉತ್ಪಾದನೆ ಮತ್ತು ಮಾರಾಟ ನಿಯಂತ್ರಣ ವಿಧೇಯಕ, ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ, ಕರ್ನಾಟಕ ಭೂ ಕಬಳಿಕೆ ನಿಷೇಧ ವಿಧೇಯಕ, ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ, ಡಾ.ಎಚ್‌.ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಸರ್ಕಾರವು ಅಧಿಸೂಚನೆ ಪ್ರಕಟಿಸಿದೆ.

Share this article