ಸರ್ಕಾರ VS ಗೌರ್ನರ್‌ ಸಂಘರ್ಷ! ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್‌ ನೋಟಿಸ್

KannadaprabhaNewsNetwork | Updated : Aug 02 2024, 04:39 AM IST

ಸಾರಾಂಶ

‘ಮುಡಾ ಪ್ರಕರಣದಲ್ಲಿ ದಾಖಲೆ ಹಾಗೂ ಸತ್ಯಾಸತ್ಯತೆ ಪರಿಶೀಲಿಸದೆ ವಿವೇಚನಾರಹಿತವಾಗಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್‌ ನೋಟಿಸ್ ನೀಡಿದ್ದಾರೆ. ಅದನ್ನು ಹಿಂಪಡೆಯಬೇಕು. ಜತೆಗೆ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಕೋರಿ ಟಿ.ಜೆ.ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು.’

 ಬೆಂಗಳೂರು : ‘ಮುಡಾ ಪ್ರಕರಣದಲ್ಲಿ ದಾಖಲೆ ಹಾಗೂ ಸತ್ಯಾಸತ್ಯತೆ ಪರಿಶೀಲಿಸದೆ ವಿವೇಚನಾರಹಿತವಾಗಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್‌ ನೋಟಿಸ್ ನೀಡಿದ್ದಾರೆ. ಅದನ್ನು ಹಿಂಪಡೆಯಬೇಕು. ಜತೆಗೆ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಕೋರಿ ಟಿ.ಜೆ.ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು.’

ಹೀಗೆಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರಿಗೆ ಬಲವಾಗಿ ಸಲಹೆ ನೀಡುವ ಮಹತ್ವದ ನಿರ್ಧಾರವನ್ನು ಗುರುವಾರ ನಡೆದ ಸಚಿವರ ಪರಿಷತ್‌ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಜತೆಗೆ, ರಾಜ್ಯಪಾಲರು ಸಚಿವರ ಪರಿಷತ್‌ ಸಲಹೆ ಅಥವಾ ಸಚಿವ ಸಂಪುಟ ಸಭೆಯ ಸೂಚನೆ ಮೇರೆಗೆ ನಡೆದುಕೊಳ್ಳಬೇಕೇ ಹೊರತು ತಮ್ಮ ವಿವೇಚನೆಯ ಆಧಾರದಲ್ಲಿ ಅಲ್ಲ ಎಂದೂ ನಿರ್ಣಯ ಕೈಗೊಳ್ಳಲಾಗಿದೆ.

ಅಲ್ಲದೆ, ‘ರಾಜ್ಯಪಾಲರು ವಿವೇಚನಾರಹಿತವಾಗಿ ನಡೆದುಕೊಂಡಿರುವ ಬಗ್ಗೆ ಹಾಗೂ ರಾಜಕೀಯ ಕಾರಣಗಳಿಗಾಗಿ ಜನಾದೇಶ ಹಾಗೂ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಘಟಿತ ಪ್ರಯತ್ನಕ್ಕೆ ಸಾಂವಿಧಾನಿಕ ಕಚೇರಿ (ರಾಜ್ಯಪಾಲರ) ದುರ್ಬಳಕೆ ಆಗಿದೆ’ ಎಂಬುದನ್ನು ನಿರ್ಣಯದ ಅಂಶವಾಗಿ ದಾಖಲಿಸಲಾಗಿದೆ. ತನ್ಮೂಲಕ ರಾಜ್ಯ ಸರ್ಕಾರ ಹಾಗೂ ರಾಜಭವನದ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಚಿವರ ಪರಿಷತ್‌ ಸಭೆಯಲ್ಲಿ ಐದು ಗಂಟೆಗಳ ಕಾಲ ಸುದೀರ್ಘವಾಗಿ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ನೀಡಿರುವ ಶೋಕಾಸ್‌ ನೋಟಿಸ್‌ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶೋಕಾಸ್‌ ನೋಟಿಸ್‌ ನೀಡುವ ಹಾಗೂ ವಿವರಣೆ ಕೇಳುವ ಸಂದರ್ಭದಲ್ಲಿ ಹೇಗೆ ಸರಣಿ ಲೋಪಗಳನ್ನು ಎಸಗಿದ್ದಾರೆ ಎಂಬುದನ್ನು ಗಮನಿಸಲಾಯಿತು. ಅನಂತರ ರಾಜ್ಯಪಾಲರ ನಿರ್ಧಾರ ತರಾತುರಿಯಿಂದ ಕೂಡಿದೆ ಹಾಗೂ ರಾಜಕೀಯ ಕಾರಣ ಹೊಂದಿದೆ ಎಂಬ ಸಂಶಯ ಮೂಡುವಂತೆ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ನಿರ್ಣಯ ಕೈಗೊಂಡು, ಅದರಲ್ಲಿ ಸಭೆಯು ಈ ನಿರ್ಧಾರಕ್ಕೆ ಬರಲು ಕಾರಣವಾದ ಒಂಬತ್ತು ಅಂಶಗಳನ್ನು ವಿವರಿಸಲಾಗಿದೆ.

ರಾಜ್ಯಪಾಲರ ವಿವೇಚನಾರಹಿತ ನಡೆ: ಜು.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಶೋಕಾಸ್‌ ನೋಟಿಸ್‌ ವಿಚಾರದಲ್ಲಿ ರಾಜ್ಯಪಾಲರು ತಮ್ಮ ವಿವೇಚನೆ ಬಳಸುವಲ್ಲಿ ವಿಫಲರಾಗಿದ್ದಾರೆ. ಹೇಗೆಂದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಜು.15ರಂದು ವಿವರಣೆ ಕೋರಿದ್ದರು. ಪ್ರಕರಣ ಸಂಬಂಧ ಜು.14ರಂದೇ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ಅಧ್ಯಕ್ಷತೆಯಲ್ಲಿ ನ್ಯಾಯಾಂಗ ಆಯೋಗ ರಚಿಸಲಾಗಿತ್ತು. ಜತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್‌ ಅವರು ಜು.26ರಂದು ಸುದೀರ್ಘವಾಗಿ ದಾಖಲೆಗಳ ಸಹಿತ ರಾಜ್ಯಪಾಲರಿಗೆ ವಿವರಣೆ ನೀಡಿದ್ದಾರೆ.

ಈ ದಾಖಲೆ ಹಾಗೂ ವಿವರಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ವಿವೇಚನಾರಹಿತವಾಗಿ ರಾಜ್ಯಪಾಲರು ಜು.26ರಂದೇ ಮುಖ್ಯಮಂತ್ರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿದ್ದಾರೆ ಎಂದು ನಿರ್ಣಯದಲ್ಲಿ ಆಕ್ಷೇಪಿಸಲಾಗಿದೆ. 

ಅರ್ಜಿಯಲ್ಲೇ ಕಾನೂನಾತ್ಮಕ ದೋಷಗಳಿವೆ:

ಜತೆಗೆ ಶೋಕಾಸ್‌ ನೋಟಿಸ್‌ನಲ್ಲಿ ಟಿ.ಜೆ.ಅಬ್ರಹಾಂ ಅವರ ಅರ್ಜಿ ಉಲ್ಲೇಖಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಹಾಗೂ ಭಾರತೀಯ ನ್ಯಾಯ ಸಂಹಿತೆ -2023ರ (ಬಿಎನ್‌ಎಸ್‌-2023) ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ಯಾಕೆ ನೀಡಬಾರದು ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.

ಆದರೆ, ಅರ್ಜಿ ಹಾಗೂ ನೋಟಿಸ್‌ನಲ್ಲೇ ಕಾನೂನಾತ್ಮಕ ದೋಷಗಳಿವೆ. ಪ್ರಕರಣವು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 17-ಎ, 19 ಅಡಿ ಮಾನ್ಯತೆ ಹೊಂದಿಲ್ಲ. ಇನ್ನು ಬಿಎನ್‌ಎಸ್‌ -2023ರ ಅಡಿ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಕೋರಿ ರಾಜ್ಯಪಾಲರಿಗೆ ಪೊಲೀಸ್‌ ಅಥವಾ ತನಿಖಾಧಿಕಾರಿಯೇ ಅರ್ಜಿ ಸಲ್ಲಿಸಬೇಕೇ ಹೊರತು ಬೇರೆ ಯಾರೂ ಸಲ್ಲಿಸುವಂತಿಲ್ಲ ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ.

ಸುಪ್ರೀಂಕೋರ್ಟ್‌ ಸೂಚನೆಗೆ ವಿರುದ್ಧ: ಇನ್ನು ಅರ್ಜಿದಾರ ಜುಲೈ 18ರಂದು ಲೋಕಾಯುಕ್ತಕ್ಕೆ ಪ್ರಕರಣದ ಬಗ್ಗೆ ದೂರು ನೀಡಿದ್ದಾರೆ. ಈ ವಿಚಾರದಲ್ಲಿ ಅಂತಿಮ ತನಿಖೆ ನಡೆಯುವ ಮೊದಲೇ ರಾಜ್ಯಪಾಲರು ಅಪಕ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಸುಪ್ರೀಂಕೋರ್ಟ್‌ 2015ರಲ್ಲಿ ಪ್ರಿಯಾಂಕ ಶ್ರೀವಾಸ್ತವ ಹಾಗೂ 2014ರಲ್ಲಿ ಲಲಿತಾ ಕುಮಾರಿ ಪ್ರಕರಣದಲ್ಲಿ ಸೂಚಿಸಿರುವ ಮಾರ್ಗಸೂಚಿ ಪ್ರಕ್ರಿಯೆಯನ್ನು ಅರ್ಜಿದಾರ ಪಾಲಿಸಿಲ್ಲ ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ.

ಅಗತ್ಯ ಪ್ರಕ್ರಿಯೆ ಗಾಳಿಗೆ ತೂರಿ ನೋಟಿಸ್:

ಇನ್ನು ಅರ್ಜಿದಾರ ಮುಖ್ಯಮಂತ್ರಿಗಳ ವಿರುದ್ಧದ ತನ್ನ ಅರ್ಜಿಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿ ಯಾವುದೇ ಅಪರಾಧವನ್ನು ಉಲ್ಲೇಖ ಮಾಡಿಲ್ಲ.

ಟಿ.ಜೆ.ಅಬ್ರಹಾಂ ಬ್ಲಾಕ್‌ಮೇಲ್‌ ಹಾಗೂ ಬಲವಂತದ ವಸೂಲಿಯಂತಹ ಪುನರಾವರ್ತಿತ ಕ್ರಿಮಿನಲ್‌ ಪ್ರಕರಣಗಳ ಹಿನ್ನೆಲೆ ಹೊಂದಿದ್ದಾರೆ. ನ್ಯಾಯಾಂಗದ ಸಾರ್ವಜನಿಕ ಹಿತಾಸಕ್ತಿಯನ್ನು ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಕೂಡ ದಂಡ ವಿಧಿಸಿದೆ. ಇಂತಹ ಕ್ರಿಮಿನಲ್‌ ಹಿನ್ನೆಲೆ ಹೊಂದಿರುವ ವ್ಯಕ್ತಿ ಸಲ್ಲಿಸಿರುವ ಅರ್ಜಿ ಆಧಾರದ ಮೇಲೆ ರಾಜ್ಯಪಾಲರು ಅಗತ್ಯ ಪ್ರಕ್ರಿಯೆಗಳನ್ನು ಗಾಳಿಗೆ ತೂರಿ ಅನಗತ್ಯ ತರಾತುರಿಯಲ್ಲಿ ಶೋಕಾಸ್‌ ನೋಟಿಸ್‌ ನೀಡಿದ್ದಾರೆ ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ.

ಜೊಲ್ಲೆ, ನಿರಾಣಿ ವಿರುದ್ಧದ ಅರ್ಜಿ ಯಾಕೆ ಬಾಕಿ?:  ಮುಖ್ಯಕಾರ್ಯದರ್ಶಿಗಳ ಜು.26ರ ಸುದೀರ್ಘ ಉತ್ತರವನ್ನು ರಾಜ್ಯಪಾಲರು ಪರಿಶೀಲಿಸಿ ಪರಿಗಣಿಸಿಲ್ಲ. ಬದಲಿಗೆ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಕೋರಿ ಜು.26ರಂದು ಸಲ್ಲಿಸಿರುವ ಅರ್ಜಿಯನ್ನು ಅಂದೇ ಪರಿಗಣಿಸಿ ಶೋಕಾಸ್‌ ನೋಟಿಸ್‌ ನೀಡಲಾಗಿದೆ.ಆದರೆ ಇಂತಹದ್ದೇ ಪ್ರಕರಣಗಳಲ್ಲಿ 2021ರ ಡಿ.9ರಂದು ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ ವಿರುದ್ಧ, 2024ರ ಫೆ.26ರಂದು ಮಾಜಿ ಸಚಿವ ಮುರುಗೇಶ್‌ ನಿರಾಣಿ ವಿರುದ್ಧ, 2024ರ ಮೇ 13ರಂದು ಶಾಸಕ ಜನಾರ್ದನರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಈವರೆಗೂ ಬಾಕಿ ಉಳಿಸಿಕೊಂಡಿದ್ದೀರಿ. ಸುಪ್ರೀಂಕೋರ್ಟ್‌ ನೀಡಿರುವ ತೀರ್ಪುಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿರುವ ಅರ್ಜಿಗಳನ್ನು ದೀರ್ಘಕಾಲ ಬಾಕಿ ಉಳಿಸಿಕೊಳ್ಳಬಾರದು ಎಂದು ಹೇಳಿದ್ದರೂ ಅವುಗಳನ್ನು ಇತ್ಯರ್ಥಪಡಿಸಿಲ್ಲ. ಆದರೆ ಈ ಪ್ರಕರಣದಲ್ಲಿ (ಸಿದ್ದರಾಮಯ್ಯ ವಿರುದ್ಧ) ಅರ್ಜಿ ಸಲ್ಲಿಸಿದ ದಿನವೇ ಶೋಕಾಸ್ ನೋಟಿಸ್‌ ಜಾರಿ ಮಾಡಿದ್ದೀರಿ ಎಂದು ಕಟುವಾಗಿ ವಿಮರ್ಶಿಸಲಾಗಿದೆ.

ಪರಿಶೀಲನೆಗೆ ಮೊದಲೇ ರಾಜ್ಯಪಾಲರ ತೀರ್ಪು : ಶೋಕಾಸ್‌ ನೋಟಿಸ್‌ನಲ್ಲಿ ‘ನಿಮ್ಮ ಮೇಲಿನ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ’ ಎಂದು ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಹೇಳಿದ್ದೀರಿ. ಇದು ಪರಿಶೀಲನೆಗೆ ಮೊದಲೇ ತೀರ್ಪು ನೀಡಿದಂತೆ.

ಜು.26ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೀಡಿರುವ ವರದಿಯನ್ನು ಪರಿಗಣಿಸದೆ ಆರೋಪ ದೃಢಪಡುವ ಮೊದಲೇ ಗಂಭೀರ ಸ್ವರೂಪ ಎಂದು ಹೇಳಿರುವುದು ಪೂರ್ವನಿರ್ಧರಿತ ಆದಂತಾಗಿದೆ ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ.

ಸರ್ಕಾರ ಕೆಡವಲು ಸಾಂವಿಧಾನಿಕ ಕಚೇರಿ ದುರ್ಬಳಕೆ:

ಲಭ್ಯವಿರುವ ದಾಖಲೆ, ಸತ್ಯಾಸತ್ಯತೆ, ಸಂದರ್ಭಗಳನ್ನು ಪರಿಗಣಿಸದೆ ಪೂರ್ವ ನಿರ್ಧಾರಕ್ಕೆ ಬಂದಿರುವ ರಾಜ್ಯಪಾಲರ ನಡೆಯು ಸಾಂವಿಧಾನಿಕ ಕಚೇರಿಯ ದುರ್ಬಳಕೆ ಆಗಿದೆ. ರಾಜಕೀಯ ಕಾರಣಗಳಿಗಾಗಿ ಜನಾದೇಶ ಹಾಗೂ ಬಹುಮತದ ಮೇಲೆ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವಾಗಿದೆ ಎಂದೂ ಟೀಕಿಸಲಾಗಿದೆ.

ನೋಟಿಸ್ ಹಿಂಪಡೆದು, ಅರ್ಜಿ ತಿರಸ್ಕರಿಸಿ:

ಹಾಗಾಗಿ, ಮುಖ್ಯಮಂತ್ರಿ ಅವರಿಗೆ 2024ರ ಜು.26ರಂದು ನೀಡಿರುವ ಶೋಕಾಸ್‌ ನೋಟಿಸ್‌ ಅನ್ನು ರಾಜ್ಯಪಾಲರು ಹಿಂಡೆಯಬೇಕು. ಜತೆಗೆ ಅನುಮತಿ ಕೋರಿ ಸಲ್ಲಿಕೆಯಾಗಿರುವ ಟಿ.ಜೆ.ಅಬ್ರಹಾಂ ಅವರ ಅರ್ಜಿ ತಿರಸ್ಕೃತಗೊಳಿಸಬೇಕು ಎಂದು ಸಲಹೆ ನೀಡಲು ತೀರ್ಮಾನಿಸಲಾಗಿದೆ.

Share this article