ಅಧ್ಯಯನ ಪ್ರವಾಸ ವೇಳೆ ಸರ್ಕಾರಿ ಖರ್ಚಲ್ಲಿ ಶಾಸಕರು ಪ್ರಯಾಗ್‌ರಾಜ್‌, ಕಾಶಿಗೆ ಭೇಟಿ: ವಿವಾದ

ಸಾರಾಂಶ

ವಿಧಾನಸಭೆ ಅರ್ಜಿ ಸಮಿತಿ ಹಾಗೂ ವಸತಿ ಸೌಕರ್ಯಗಳ ಸಮಿತಿ ಅಧ್ಯಕ್ಷರೂ ಆಗಿರುವ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ಶಾಸಕರು ಉತ್ತರಪ್ರದೇಶದ ಅಧ್ಯಯನ ಪ್ರವಾಸದ ವೇಳೆ ಕುಂಭಮೇಳ ನಡೆಯುವ ಪ್ರಯಾಗ್‌ರಾಜ್‌ ಸೇರಿ ಕಾಶಿ ಮತ್ತಿತರ ಕಡೆ ಭೇಟಿ ಮಾಡಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ.

  ಬೆಂಗಳೂರು : ವಿಧಾನಸಭೆ ಅರ್ಜಿ ಸಮಿತಿ ಹಾಗೂ ವಸತಿ ಸೌಕರ್ಯಗಳ ಸಮಿತಿ ಅಧ್ಯಕ್ಷರೂ ಆಗಿರುವ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ಶಾಸಕರು ಉತ್ತರಪ್ರದೇಶದ ಅಧ್ಯಯನ ಪ್ರವಾಸದ ವೇಳೆ ಕುಂಭಮೇಳ ನಡೆಯುವ ಪ್ರಯಾಗ್‌ರಾಜ್‌ ಸೇರಿ ಕಾಶಿ ಮತ್ತಿತರ ಕಡೆ ಭೇಟಿ ಮಾಡಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ.

ರುದ್ರಪ್ಪ ಲಮಾಣಿ ಅವರು ಅಧ್ಯಯನ ಪ್ರವಾಸ ಕೈಗೊಳ್ಳುವ ಸಂಬಂಧ ಸಭಾಧ್ಯಕ್ಷರ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದು, ಒಪ್ಪಿಗೆ ನೀಡುವುದು ಬಾಕಿ ಇದೆ. ಒಪ್ಪಿಗೆ ನೀಡಿದರೆ ಎರಡು ಸಮಿತಿಗಳ ಸದಸ್ಯರು ಮೂರ್ನಾಲ್ಕು ದಿನ ಅಧ್ಯಯನ ಪ್ರವಾಸ ಮಾಡಲಿದ್ದಾರೆ. ಯಾವಾಗ, ಎಷ್ಟು ಸದಸ್ಯರು ಪ್ರವಾಸ ಮಾಡಲಿದ್ದಾರೆ ಎಂಬುದು ಅಂತಿಮವಾಗಿಲ್ಲ ಎಂದು ತಿಳಿದು ಬಂದಿದೆ.

ಅಧ್ಯಯನ ನೆಪದಲ್ಲಿ ಕುಂಭಮೇಳಕ್ಕೆ-ಆರೋಪ: ವಿಧಾನಸಭೆಯ ವಿವಿಧ ಸಮಿತಿಗಳು ಅಧ್ಯಯನ ಪ್ರವಾಸ ಮಾಡುವುದು ಹೊಸತೇನೂ ಅಲ್ಲ. ಎಲ್ಲ ಸರ್ಕಾರಗಳ ಕಾಲದಲ್ಲೂ ಪ್ರವಾಸ ಮಾಡುತ್ತಾ ಬಂದಿವೆ. ಮೂಲಗಳ ಪ್ರಕಾರ ಈ ಎರಡು ಸಮಿತಿಗಳು ಉತ್ತರಪ್ರದೇಶ ವಿಧಾನಸಭೆಯಲ್ಲಿನ ಅರ್ಜಿ ಸಮಿತಿ ಹಾಗೂ ವಸತಿ ಸೌಕರ್ಯಗಳ ಸಮಿತಿಯ ಕಾರ್ಯನಿರ್ವಹಣೆ ಸೇರಿ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ನಿರ್ಧರಿಸಿವೆ.

ಆದರೆ ಎರಡು ಸಮಿತಿಗಳು ಅಧ್ಯಯನ ಪ್ರವಾಸ ಜೊತೆ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳ, ಕಾಶಿ ಮತ್ತಿತರ ಕಡೆ ಹೋಗಲು ಮುಂದಾಗಿರುವುದು ಟೀಕೆಗೆ ಕಾರಣವಾಗಿದೆ. ಅಧ್ಯಯನ ಪ್ರವಾಸದ ನಡುವೆ ಕುಂಭಮೇಳ ಮತ್ತಿತರ ಕಡೆ ಸರ್ಕಾರದ ವೆಚ್ಚದಲ್ಲಿ ಹೋಗುವುದು ಎಷ್ಟರ ಮಟ್ಟಿಗೆ ಸರಿ ಎಂಬ ಮಾತು ಕೇಳಿ ಬಂದಿವೆ. ಎರಡು ಸಮಿತಿಗಳಲ್ಲಿ ಒಟ್ಟು 28 ಸದಸ್ಯರಿದ್ದಾರೆ. ಮೂರ್ನಾಲ್ಕು ದಿನಗಳ ಪ್ರವಾಸಕ್ಕೆ ಹೆಚ್ಚುವರಿಯಾಗಿ ಲಕ್ಷಾಂತರ ರು. ವೆಚ್ಚ ಸರ್ಕಾರದ ಬೊಕ್ಕಸದ ಮೇಲೆ ಹೊರೆ ಬೀಳಲಿದೆ ಎಂಬ ಟೀಕೆಗಳು ವ್ಯಕ್ತವಾಗಿದೆ.

Share this article