ಕೇಂದ್ರದಿಂದ 25 ರು.ಗೆ ರಿಯಾಯ್ತಿ ದರದಲ್ಲಿ ಈರುಳ್ಳಿ ಮಾರಾಟ

KannadaprabhaNewsNetwork | Published : Oct 28, 2023 1:15 AM

ಸಾರಾಂಶ

ಕೆಜಿಗೆ 250 ರು. ತಲುಪಿದ್ದ ಟೊಮೆಟೋ ದರ 5-10 ರು.ಗೆ ಇಳಿದ ಬೆನ್ನಲ್ಲೇ ಇತ್ತ ಈರುಳ್ಳಿ ಬೆಲೆ ಗಗನಮುಖಿಯಾಗಿದೆ.
65 ರು.ಗೆ ಏರಿರುವ ಈರುಳ್ಳಿ ಬೆಲೆ ಇಳಿಕೆಗೆ ಕ್ರಮ ದಾಸ್ತಾನು ಸಂಗ್ರಹ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ನವದೆಹಲಿ: ಕೆಜಿಗೆ 250 ರು. ತಲುಪಿದ್ದ ಟೊಮೆಟೋ ದರ 5-10 ರು.ಗೆ ಇಳಿದ ಬೆನ್ನಲ್ಲೇ ಇತ್ತ ಈರುಳ್ಳಿ ಬೆಲೆ ಗಗನಮುಖಿಯಾಗಿದೆ. ದೇಶಾದ್ಯಂತ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 65 ರು.ವರೆಗೂ ತಲುಪಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಸಂಗ್ರಹದಲ್ಲಿದ್ದ ಈರುಳ್ಳಿಯನ್ನು ಕೆಜಿಗೆ 25 ರು. ನಂತೆ ಮಾರಾಟ ಮಾಡಲು ಆರಂಭಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶದಲ್ಲಿ ಈರುಳ್ಳಿ ಬೆಲೆ ಕೆಜಿಗೆ 30 ರು. ಇತ್ತು. ಆದರೆ ಈ ವರ್ಷ ಮಳೆ ಕೊರತೆ, ಕೆಲವೆಡೆ ಅನಾವೃಷ್ಟಿಯಿಂದ ಈರುಳ್ಳಿ ಉತ್ಪಾದನೆ ಕುಸಿತವಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಹೀಗಾಗಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದರದಲ್ಲಿ ಶೆ.57ರಷ್ಟು ಭಾರೀ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆ ತಡೆಯಲು ಕಳೆದ ಆಗಸ್ಟ್‌ ತಿಂಗಳಿನಿಂದಲೂ ಹಂತಹಂತವಾಗಿ ತನ್ನ ದಾಸ್ತಾನಿನಲ್ಲಿದ್ದ ಈರುಳ್ಳಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾ ಬಂದಿದ್ದ ಕೇಂದ್ರ ಸರ್ಕಾರ, ಇದೀಗ ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿದೆ. ಸಗಟು ಮತ್ತು ಚಿಲ್ಲರೆ ಎರಡೂ ಮಾರುಕಟ್ಟೆಗೆ ಈರುಳ್ಳಿ ಬಿಡುಗಡೆ ಮಾಡುತ್ತಿದೆ. ಈ ಪೈಕಿ ಚಿಲ್ಲರೆ ಮಾರುಕಟ್ಟೆಗೆ ಕೆಜಿಗೆ 25 ರು.ನಂತೆ ಮಾರಾಟ ಮಾಡಲಾಗುತ್ತಿದೆ. ಕಳೆದ ಆಗಸ್ಟ್‌ ಬಳಿಕ ಕೇಂದ್ರ ಸರ್ಕಾರ ಇದೇ ರೀತಿಯಲ್ಲಿ 22 ರಾಜ್ಯಗಳಿಗೆ ಒಟ್ಟಾರೆ 1.7 ಲಕ್ಷ ಟನ್‌ಗಳಷ್ಟು ಈರುಳ್ಳಿಯನ್ನು ಪೂರೈಸಿದ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ಪ್ರಸಕ್ತ ವರ್ಷದ 5 ಲಕ್ಷ ಟನ್‌ಗಳಷ್ಟು ಈರುಳ್ಳಿಯನ್ನು ತುರ್ತು ಸಮಯಕ್ಕೆಂದು ಖರೀದಿಸಿದೆ. ಜೊತೆಗೆ ಇನ್ನೂ 2 ಲಕ್ಷ ಟನ್‌ ಖರೀದಿ ಸಂಗ್ರಹಿಸುವ ಉದ್ದೇಶ ಹೊಂದಿದೆ.

Share this article