;Resize=(412,232))
ಬೆಂಗಳೂರು : ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಪಿಡಿಒ ಸೇರಿದಂತೆ ಸರ್ಕಾರ ನಿಗದಿಪಡಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರೊಂದಿಗೆ ಮನೆ ಮನೆಗೆ ತೆರಳಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆ ನಡೆಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
‘ಗೃಹ ಜ್ಯೋತಿ’ ಮತ್ತು ‘ಗೃಹ ಲಕ್ಷ್ಮಿ’ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮರು ಪರಿಶೀಲನೆ ಕುರಿತಂತೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಜೊತೆ ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಅವರು ಚರ್ಚೆ ನಡೆಸಿದರು.
ಈ ವೇಳೆ, ಎರಡೂ ಯೋಜನೆಗಳ ಮರು ಪರಿಶೀಲನೆ ಕುರಿತು ಹಲವು ಮಾಹಿತಿ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಕಾರ್ಯದರ್ಶಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನಗರಾಭಿವೃದ್ಧಿ ಮತ್ತು ಆಹಾರ ಇಲಾಖೆಯ ಇತರೆ ಅಧಿಕಾರಿಗಳು ಗ್ಯಾರಂಟಿ ಸಮಿತಿ ಸದಸ್ಯರೊಂದಿಗೆ ಮನೆ ಮನೆಗೆ ತೆರಳಿ ಮಾಹಿತಿ ಪಡೆಯಬೇಕು. ಈ ವೇಳೆ, ಫಲಾನುಭವಿಗಳ ಮುಖಚಹರೆ (ಫೋಟೋ), ಬೆರಳಚ್ಚು(ಬಯೋಮೆಟ್ರಿಕ್) ಪಡೆಯುವ ಮೂಲಕ ದೃಢೀಕರಣ ಮಾಡಬೇಕು. ಜೊತೆಗೆ ಫಲಾನುಭವಿಗಳ ಆಧಾರ್ ಮತ್ತು ವೋಟರ್ ಐಡಿಯನ್ನು ಲಿಂಕ್ ಮಾಡಬೇಕು. ಎರಡೂ ಲಿಂಕ್ ಆದ ಫಲಾನುಭವಿಗಳಿಗೆ ಮಾತ್ರ ಮುಂದಿನ ದಿನಗಳಲ್ಲಿ ಯೋಜನೆಯ ಹಣ ನೀಡಬೇಕು ಎಂದು ಸೂಚಿಸಿದ್ದಾರೆ ಎಂದು ಸಭೆಯಲ್ಲಿದ್ದ ಅಧಿಕೃತ ಮೂಲಗಳು ಖಚಿತಪಡಿಸಿವೆ.
ಇನ್ನು, ಈಗಾಗಲೇ ನಡೆಯುತ್ತಿರುವ ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಮರು ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಲು ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ವಿಸ್ತರಿಸುವುದಾಗಿ ಇದೇ ವೇಳೆ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.
‘1.67 ಕೋಟಿ ಗೃಹ ಜ್ಯೋತಿ ಫಲಾನುಭವಿಗಳಿದ್ದು, ಕಳೆದ ಒಂದು ತಿಂಗಳಲ್ಲಿ 1.17 ಕೋಟಿ (ಶೇ.70) ರಷ್ಟು ಫಲಾನುಭವಿಗಳ ಮರು ಪರಿಶೀಲನೆ ಪೂರ್ಣಗೊಂಡಿದೆ. ಉಳಿದ ಶೇ.30ರಷ್ಟು ಫಲಾನುಭವಿಗಳ ಮರು ಪರಿಶೀಲನೆ ನಡೆಸಲು ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಆಶಾ ಕಾರ್ಯಕರ್ತೆಯರು, ಅಂಗವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ಯಾರಂಟಿ ಸಮಿತಿಗಳ ಸದಸ್ಯರು ಸೇರಿಕೊಂಡು ಮುಂದಿನ ಒಂದು ತಿಂಗಳು ಗೃಹ ಲಕ್ಷ್ಮಿ ಯೋಜನೆಯ 1.24 ಕೋಟಿ ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಮುಖ ಚಹರೆ ದೃಢೀಕರಣ ಮೂಲಕ ಮರು ಪರಿಶೀಲನೆ ನಡೆಸಬೇಕು’ ಎಂದೂ ಅವರು ಹೇಳಿದ್ದಾರೆ.
ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಟ್ಟು 4,500 ಗ್ಯಾರಂಟಿ ಸಮಿತಿಯ ಸದಸ್ಯರಿದ್ದು, ಅವರನ್ನು ಮುಂದಿನ ವಾರ ಬೆಂಗಳೂರಿಗೆ ಆಹ್ವಾನಿಸಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗುವುದು. ಇವರ ಜೊತೆಗೆ ಇನ್ನು ಹತ್ತು ಹನ್ನೆರಡು ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲಿ ಹೊಸದಾಗಿ ಆರು ಸದಸ್ಯರನ್ನು ನೇಮಿಸಲು ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಸೂಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ, ಪಿ.ಟಿ. ಪರಮೇಶ್ವರ ನಾಯ್ಕ್, ಪುಷ್ಪಾ ಅಮರನಾಥ್, ಮಹರೂಜ್ ಖಾನ್ ಇದ್ದರು.