ಕರ್ನಾಟಕ ಲೋಕಸೇವಾ ಆಯೋಗ ಪಶುವೈದ್ಯಾಧಿಕಾರಿಗಳ ನೇಮಕಾತಿ ಸಂಬಂಧ ಬೆಂಗಳೂರು ಹಾಗೂ ಹೊರರಾಜ್ಯದ ಮೂರು ರೆಸಾರ್ಟ್‌ಗಳಲ್ಲಿ ಅಭ್ಯರ್ಥಿಗಳಿಗೆ ‘ಪರೀಕ್ಷಾ ಸಿದ್ಧತಾ ತರಬೇತಿ ಶಿಬಿರ’ ನಡೆದಿತ್ತು ಎಂಬ ಮಾಹಿತಿ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಪತ್ತೆದಾರಿಕೆಯ ವೇಳೆ ಲಭಿಸಿದೆ ಎಂದು ತಿಳಿದು ಬಂದಿದೆ.

 ಗಿರೀಶ್ ಮಾದೇನಹಳ್ಳಿ

 ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಸಂಬಂಧ ಬೆಂಗಳೂರು ಹಾಗೂ ಹೊರರಾಜ್ಯದ ಮೂರು ರೆಸಾರ್ಟ್‌ಗಳಲ್ಲಿ ಅಭ್ಯರ್ಥಿಗಳಿಗೆ ‘ಪರೀಕ್ಷಾ ಸಿದ್ಧತಾ ತರಬೇತಿ ಶಿಬಿರ’ ನಡೆದಿತ್ತು ಎಂಬ ಮಾಹಿತಿ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಪತ್ತೆದಾರಿಕೆಯ ವೇಳೆ ಲಭಿಸಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ, ತುಮಕೂರು ಜಿಲ್ಲೆಯ ಸುಪ್ರಸಿದ್ಧ ದೇವರಾಯನದುರ್ಗ ಅರಣ್ಯದಂಚಿನ ಹಾಗೂ ಆಂಧ್ರಪ್ರದೇಶದ ಅನಂತಪುರದ ರೆಸಾರ್ಟ್‌ಗಳಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಲಿಖಿತ ಪರೀಕ್ಷೆಗೂ ಮುನ್ನ ಎರಡು ದಿನಗಳ ಕಾಲ ತಮ್ಮ‘ಸಿಂಡಿಕೇಟ್‌’ ಅಭ್ಯರ್ಥಿಗಳಿಗೆ ಆರೋಪಿಗಳು ತರಬೇತಿ ನೀಡಿದ್ದರು. ಅಲ್ಲದೆ ಬೆಂಗಳೂರಿನ ರಾಜಾಜಿನಗರ ಹತ್ತಿರವಿರುವ, ಆಯೋಗದ ಪ್ರಭಾವಿ ವ್ಯಕ್ತಿಯೊಬ್ಬರಿಗೆ ಸೇರಿದ ‘ಖಾಸಗಿ ಕಚೇರಿ’ಯಲ್ಲಿ ಕೆಲ ಅಭ್ಯರ್ಥಿಗಳ ಜತೆ ಡೀಲ್ ಮಾತುಕತೆ ನಡೆದಿತ್ತು ಎಂಬ ಮಾಹಿತಿ ಸಿಕ್ಕಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಈ ಶಿಬಿರದ ಮಾಹಿತಿ ಹಿನ್ನೆಲೆಯಲ್ಲಿ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಇದು ಅಂದು ಪರೀಕ್ಷಾ ನಿಯಂತ್ರಕರಾಗಿದ್ದ ಹಗರಣದ ಬಂಧಿತ ಆರೋಪಿ ಜ್ಞಾನೇಂದ್ರ ಗಂಗ್ವಾರ್ ಅವರಿಗೆ ಮತ್ತಷ್ಟು ಸಂಕಷ್ಟ ತಂದಿದೆ ಎನ್ನಲಾಗಿದೆ.

ಅಲ್ಲದೆ ತರಬೇತಿ ಶಿಬಿರದ ಆಯೋಜನೆಯಲ್ಲಿ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬಿಜೆಪಿ ಮುಖಂಡ ಬಸವರಾಜ್‌ ಕನ್ನಾಳೆ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿದು ಬಂದಿದೆ.

ಮೂರು ಹಂತದಲ್ಲಿ ಅಭ್ಯರ್ಥಿಗಳ ಸಂಪರ್ಕ:

400 ಪಶುವೈದ್ಯಾಧಿಕಾರಿಗಳ ನೇಮಕಾತಿ ಸಂಬಂಧ ಇದೇ ವರ್ಷದ ಜನವರಿ 8 ಮತ್ತು 9 ರಂದು ಲಿಖಿತ ಪರೀಕ್ಷೆಗಳನ್ನು ಕೆಪಿಎಸ್‌ಸಿ ನಡೆಸಿತ್ತು. ಈ ಹುದ್ದೆಗಳು ಮೂರು ಹಂತಗಳಲ್ಲಿ ಅಕ್ರಮವಾಗಿ ಮಾರಾಟವಾಗಿವೆ. ಈ ಹುದ್ದೆ ಆಕಾಂಕ್ಷಿತರ ಸೆಳೆಯಲು ಕೆಪಿಎಸ್‌ಸಿಯ ಪ್ರಭಾವಿ ವ್ಯಕ್ತಿ ಹಾಗೂ ಆತನ ಸಹಚರರು ಪ್ರತ್ಯೇಕವಾಗಿ ‘ಡೀಲ್’ ನಡೆಸಿದ್ದಾರೆ. ಈಗಾಗಲೇ ಬಂಧಿತನಾಗಿರುವ ಸಿಕಂದರ್ ಹಾಗೂ ಆತನ ಸಹಚರರು ಮೊದಲ ಹಂತದಲ್ಲಿದ್ದರೆ, ಎರಡನೇ ಹಂತದಲ್ಲಿ ಬಸವರಾಜು ಹಾಗೂ ಅಂತಿಮ ಹಂತದ ಮಾತುಕತೆಯಲ್ಲಿ ಕೆಪಿಎಸ್‌ಸಿಯ ಪ್ರಭಾವಿ ವ್ಯಕ್ತಿ ಸಂದರ್ಶಿಸುತ್ತಿದ್ದರು ಎಂದು ಹೇಳಲಾಗಿದೆ.

ತಮ್ಮ ಡೀಲ್‌ಗೆ ಒಪ್ಪಿದ ಬಳಿಕ ಆ ಅಭ್ಯರ್ಥಿಗಳಿಂದ ಮುಂಗಡ ಹಣ ಪಡೆಯಲಾಗಿದೆ. ಆನಂತರ ಲಿಖಿತ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂದು ಅಭ್ಯರ್ಥಿಗಳನ್ನು ಪ್ರತ್ಯೇಕ ಮೂರು ತಂಡಗಳನ್ನಾಗಿ ವಿಭಾಗಿಸಿ ಆರೋಪಿಗಳು ತರಬೇತಿ ನೀಡಿದ್ದಾರೆ. ಅಂತೆಯೇ ಜನವರಿ ಮೊದಲ ವಾರದಲ್ಲಿ ಬೆಂಗಳೂರಿನ ಆರ್‌.ಆರ್.ನಗರ, ತುಮಕೂರಿನ ದೇವರಾಯನ ದುರ್ಗ ಹಾಗೂ ಆಂಧ್ರಪ್ರದೇಶದ ಅನಂತಪುರಕ್ಕೆ ಬಸ್‌ಗಳಲ್ಲಿ ಅಭ್ಯರ್ಥಿಗಳನ್ನು ಆರೋಪಿಗಳು ಕರೆದೊಯ್ದಿದ್ದಾರೆ. ಅಲ್ಲಿ ಎರಡು ದಿನಗಳು ಲಿಖಿತ ಪರೀಕ್ಷೆಗೆ ಅಣಿಗೊಳಿಸಿದ್ದಾರೆ.

ತರುವಾಯ ಪರೀಕ್ಷೆ ದಿನ ಪರೀಕ್ಷೆಗೆ ಕೆಲವೇ ತಾಸುಗಳಿವೆ ಎನ್ನುವಾಗ ಅಭ್ಯರ್ಥಿಗಳನ್ನು ಮರಳಿ ನಗರಕ್ಕೆ ಕರೆತಂದಿದ್ದಾರೆ. ತಮ್ಮ ಮೇಲೆ ಅನುಮಾನ ಬಾರದಂತೆ ಪರೀಕ್ಷಾ ಕೇಂದ್ರ ಸಮೀಪ ಹುದ್ದೆ ಆಕಾಂಕ್ಷಿಗಳನ್ನು ಕರೆತಂದು ಬಿಟ್ಟು ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.

ತರಬೇತಿ ಶಿಬಿರದ ವಿಡಿಯೋ ಪತ್ತೆ?:

ಆದರೆ ಈ ಪರೀಕ್ಷೆಗೂ ಮುನ್ನ ಕೆಲ ಅಭ್ಯರ್ಥಿಗಳು ಅವರ ಸ್ನೇಹಿತರ ‘ಸಂಪರ್ಕ’ಕ್ಕೆ ಸಿಗದೆ ಅಜ್ಞಾತವಾಗಿದ್ದರು. ಆಗಲೇ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಗುಮಾನಿ ಸರ್ಕಾರಿ ನೌಕರಿ ಕನಸು ಕಂಡಿದ್ದ ಕೆಲ ನೈಜ ಅಭ್ಯರ್ಥಿಗಳಲ್ಲಿ ಮೂಡಿತು. ಆನಂತರ ಫಲಿತಾಂಶವು ಆ ಅನುಮಾನವನ್ನು ರುಜುವಾತು ಮಾಡಿದೆ. ಈ ಶಂಕೆ ಮೇರೆಗೆ ತಮ್ಮ ಸ್ನೇಹಿತರನ್ನು ವಿಚಾರಿಸಿದಾಗ ತರಬೇತಿ ಕಾರ್ಯಾಗಾರದ ಸಂಗತಿ ಗೊತ್ತಾಗಿದೆ. ಅಲ್ಲದೆ ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಸಮೀಪ ಬಸ್ಸಿನಲ್ಲಿ ಬಂದಿಳಿಯುವ ವಿಡಿಯೋಗಳನ್ನು ಸಿಐಡಿಗೆ ಕೆಲವರು ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.

ರಾಜಾಜಿನಗರದ ‘ಡೀಲ್’ ಆಫೀಸ್

ರಾಜಾಜಿನಗರ-ಬಸವೇಶ್ವರ ನಗರದ ಮಧ್ಯೆ ಲೋಕಸೇವಾ ಆಯೋಗದ ಪ್ರಮುಖ ವ್ಯಕ್ತಿಯೊಬ್ಬರಿಗೆ ಸೇರಿದ ಖಾಸಗಿ ಕಚೇರಿ ಇದೆ. ಈ ಕಚೇರಿಯಲ್ಲೇ ನೇಮಕಾತಿ ವ್ಯವಹಾರದ ರಹಸ್ಯ ಮಾತುಕತೆಯನ್ನು ಅವರು ನಡೆಸುತ್ತಿದ್ದರು. ಹೊರನೋಟಕ್ಕೆ ಸಾಧಾರಣ ಕಚೇರಿಯಂತೆ ಕಂಡರೂ ಒಳಗೆ ಐಷಾರಾಮಿ ಶೈಲಿಯ ವಿನ್ಯಾಸದಿಂದ ಕಚೇರಿ ಕಂಗೊಳಿಸುತ್ತದೆ. ಕೆಪಿಎಸ್‌ಸಿ ಕಚೇರಿ ಅಥವಾ ತಮ್ಮ ಮನೆಯಲ್ಲಿ ಅಭ್ಯರ್ಥಿಗಳ ಭೇಟಿಯಾದರೆ ತೊಂದರೆಯಾಗಲಿದೆ ಎಂದು ಭಾವಿಸಿಯೇ ‘ರಹಸ್ಯ’ ಅಡ್ಡೆಯನ್ನು ಅವರು ಹೊಂದಿದ್ದರು. ಇಲ್ಲಿ ಅಂತಿಮ ಹಂತದ ಮಾತುಕತೆ ಬಳಿಕ ರೆಸಾರ್ಟ್‌ಗಳಿಗೆ ಅಭ್ಯರ್ಥಿಗಳಿಗೆ ಗ್ರೀನ್ ಕಾರ್ಡ್ ಸಿಕ್ಕಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿಗೆ ಸಮೀಪದ ರೆಸಾರ್ಟ್‌ಗಳು:

ಪರೀಕ್ಷೆಗೆ ಕೆಲ ತಾಸುಗಳಿರುವಾಗ ಪರೀಕ್ಷಾ ಕೇಂದ್ರಗಳ ತಲುವಂತೆ ರೆಸಾರ್ಟ್‌ಗಳನ್ನು ಆರೋಪಿಗಳು ಆಯ್ಕೆ ಮಾಡಿದ್ದರು. ಸಂಚಾರ ದಟ್ಟಣೆಯಲ್ಲಿ ಸಿಲುಕಿ ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು ಎನ್ನುವುದು ಅವರ ಯೋಜನೆಯಾಗಿತ್ತು. ಅಲ್ಲದೆ ಎಲ್ಲಾ ಅಭ್ಯರ್ಥಿಗಳನ್ನು ಒಂದೆಡೆ ಸೇರಿಸಿದರೆ ಮಾಹಿತಿ ಸೋರಿಕೆಯಾಗಬಹುದು ಎಂದು ಊಹಿಸಿದ್ದರು. ಹೀಗಾಗಿ ಬಿಗಿ ಭದ್ರತೆಯಲ್ಲಿ ಪರೀಕ್ಷಾ ಸಿದ್ಧತಾ ತರಬೇತಿ ಶಿಬಿರಗಳನ್ನು ಆರೋಪಿಗಳು ಆಯೋಜಿಸಿದ್ದರು ಎಂದು ಮೂಲಗಳು ಹೇಳಿವೆ.

ದಾವಣಗೆರೆ ರೆಸಾರ್ಟಲ್ಲಿ ಇ.ಡಿ. ಶೋಧ

ಇದೇ ಹಗರಣ ಸಂಬಂಧ ದಾವಣಗೆರೆಯಲ್ಲಿ ರೆಸಾರ್ಟ್‌ ಅನ್ನು ಇ.ಡಿ. ಪರಿಶೀಲನೆ ನಡೆಸಿತ್ತು. ಆ ರೆಸಾರ್ಟ್‌ನಲ್ಲಿ ಹಣದ ಮಾತುಕತೆ ನಡೆದಿರಬಹುದು. ಆದರೆ ಅಭ್ಯರ್ಥಿಗಳಿಗೆ ತರಬೇತಿ ಶಿಬಿರ ಆಯೋಜನೆ ಕುರಿತು ಖಚಿತವಾಗಿಲ್ಲ ಎಂದು ಮೂಲಗಳು ಹೇಳಿವೆ.

2 ದಿನಗಳ ರಹಸ್ಯ ತರಬೇತಿ

- 400 ಪಶುವೈದ್ಯಾಧಿಕಾರಿಗಳ ನೇಮಕಕ್ಕೆ ಕಳೆದ ಜ.8-9ಕ್ಕೆ ಕೆಪಿಎಸ್ಸಿ ಲಿಖಿತ ಪರೀಕ್ಷೆಗಳನ್ನು ನಡೆಸಿತ್ತು

- ಪರೀಕ್ಷೆಗೂ ಮುನ್ನ ಡೀಲ್‌ಗೆ ಒಪ್ಪಿದ್ದ ಹುದ್ದೆ ಆಕಾಂಕ್ಷಿಗಳ ರೆಸಾರ್ಟ್‌ಗೆ ಕರೆದೊಯ್ದು ಪರೀಕ್ಷೆಗೆ ತರಬೇತಿ

- 2 ದಿನದ ತರಬೇತಿ ಬಳಿಕ ಎಲ್ಲರನ್ನೂ ಸೀದಾ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಬಿಟ್ಟಿದ್ದ ವಂಚಕರ ತಂಡ

3 ಹಂತದಲ್ಲಿ ಡೀಲ್‌ಗೆ ಯತ್ನ

ಪಶುವೈದ್ಯಾಧಿಕಾರಿ ಹುದ್ದೆಗಳ ಮೇಲೆ ಕಣ್ಣಿಟ್ಟವರನ್ನು 3 ಹಂತದಲ್ಲಿ ಸೆಳೆಯಲಾಗಿತ್ತು. ಮೊದಲ ಹಂತದಲ್ಲಿ ಕೆಪಿಎಸ್‌ಸಿಯ ಪ್ರಭಾವಿ ವ್ಯಕ್ತಿ, ಆತನ ಸಹಚರರು ‘ಡೀಲ್’ ನಡೆಸಿದ್ದಾರೆ. 2ನೇ ಹಂತದಲ್ಲಿ ಬಸವರಾಜು ಹಾಗೂ ಅಂತಿಮ ಹಂತದ ಮಾತುಕತೆಯಲ್ಲಿ ಕೆಪಿಎಸ್‌ಸಿಯ ಪ್ರಭಾವಿ ವ್ಯಕ್ತಿ ಸಂದರ್ಶಿಸುತ್ತಿದ್ದರು. ಡೀಲ್‌ಗೆ ಒಪ್ಪಿದ ಬಳಿಕ ಆ ಅಭ್ಯರ್ಥಿಗಳಿಂದ ಮುಂಗಡ ಹಣ ಪಡೆಯಲಾಗಿದೆ. ಆನಂತರ ಲಿಖಿತ ಪರೀಕ್ಷೆಯ ಎದುರಿಸುವ ಕುರಿತು ಅಭ್ಯರ್ಥಿಗಳನ್ನು ಪ್ರತ್ಯೇಕ 3 ತಂಡವಾಗಿ ವಿಭಾಗಿಸಿ ತರಬೇತಿ ನೀಡಲಾಗಿತ್ತು.