ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಎರಡು ದಿನಗಳ ಸುದೀರ್ಘ ವಿಚಾರಣೆ ಬಳಿಕ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಅವರನ್ನು ಸಿಐಡಿ ಶನಿವಾರ ಬಂಧಿಸಿದೆ.

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಎರಡು ದಿನಗಳ ಸುದೀರ್ಘ ವಿಚಾರಣೆ ಬಳಿಕ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಅವರನ್ನು ಸಿಐಡಿ ಶನಿವಾರ ಬಂಧಿಸಿದೆ.

ಐಎಎಸ್‌ ಅಧಿಕಾರಿ ಬಂಧನ ಬೆನ್ನಲ್ಲೇ ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಕೆಲ ಸದಸ್ಯರು ಮತ್ತು ಅಧಿಕಾರಿ-ಸಿಬ್ಬಂದಿ ಎದೆಯಲ್ಲಿ ಭೀತಿ ಶುರುವಾಗಿದೆ ಎನ್ನಲಾಗಿದೆ.

ನೋಟಿಸ್ ಹಿನ್ನೆಲೆಯಲ್ಲಿ ಅರಮನೆ ರಸ್ತೆಯಲ್ಲಿರುವ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಕೇಂದ್ರ ಕಚೇರಿಯಲ್ಲಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಜ್ಞಾನೇಂದ್ರ ಹಾಜರಾಗಿದ್ದರು. ಹಗರಣದ ಕುರಿತು ಹಲವು ಸುತ್ತು ಪ್ರಶ್ನಿಸಿದ ಸಿಐಡಿ ಅಧಿಕಾರಿಗಳು, ಅಂತಿಮವಾಗಿ ಶನಿವಾರ ರಾತ್ರಿ ಅವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ನಗರದಲ್ಲಿ ಭಾನುವಾರ ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಪುರಾವೆ ಸಿಕ್ಕ ಹಿನ್ನೆಲೆ ಬಂಧನ?:

ಕೆಪಿಎಸ್‌ಸಿ ನೇಮಕಾತಿ ಹಗರಣ ಬೆಳಕಿಗೆ ಬಂದ ನಂತರ ಎರಡು ವಾರಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ನಿಗೂಢವಾಗಿ ಅಜ್ಞಾತವಾಸಿಯಾಗಿದ್ದ ಜ್ಞಾನೇಂದ್ರ ಅವರು, ಕೊನೆಗೆ ಶುಕ್ರವಾರ ಸಿಐಡಿ ಮುಂದೆ ಪ್ರತ್ಯಕ್ಷವಾಗಿದ್ದರು. ಹಗರಣದಲ್ಲಿ ಅವರ ಪಾತ್ರಕ್ಕೆ ಪುರಾವೆ ಲಭಿಸಿದ ಹಿನ್ನೆಲೆಯಲ್ಲಿ ಸಿಐಡಿ ಬಂಧಿಸಿದೆ ಎಂದು ಮೂಲಗಳು ಹೇಳಿವೆ.

400 ಪಶುವೈದ್ಯಾಧಿಕಾರಿಗಳ ಹುದ್ದೆಗೆ ಕೆಪಿಎಸ್‌ಸಿ ನಡೆಸಿದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ನೇಮಕಾತಿ ನಡೆದಾಗ ಕೆಪಿಎಸ್‌ಸಿಯಲ್ಲಿ ಜ್ಞಾನೇಂದ್ರ ಅವರು ಪರೀಕ್ಷಾ ನಿಯಂತ್ರಕರಾಗಿದ್ದರು. ಹೀಗಾಗಿ ಇಡೀ ಪರೀಕ್ಷೆಯ ಹೊಣೆಗಾರಿಕೆ ನಿರ್ವಹಿಸಿದ್ದ ಅವರು, ಅಕ್ರಮ ನೇಮಕಾತಿಯಲ್ಲಿ ಪಾತ್ರವಹಿಸಿದ್ದಾರೆ. ಇದಕ್ಕೆ ಸೂಕ್ತ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ.

ಏನಿದು ಆರೋಪ?:

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 (342+58 ಬ್ಯಾಕ್‌ಲಾಗ್‌) ಪಶುವೈದ್ಯಾಧಿಕಾರಿಗಳ ಹುದ್ದೆಗಳಿಗೆ ಕೆಪಿಎಸ್‌ಸಿ ನೇಮಕಾತಿ ನಡೆಸಿತ್ತು. 2024ರ ಜು.29ರಂದು ಅಧಿಸೂಚನೆ ಹೊರಡಿಸಿದ್ದ ಆಯೋಗವು, 2026ರ ಜನವರಿ 8 ಮತ್ತು 9 ರಂದು ಲಿಖಿತ ಪರೀಕ್ಷೆ ನಡೆಸಿತ್ತು. ಜುಲೈನಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು.

ಆದರೆ ಹೀಗೆ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಬಹುತೇಕರು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗದ ಸಂಬಂಧಿ ಅಭ್ಯರ್ಥಿಗಳಾಗಿದ್ದಾರೆ ಎಂದು ಆರೋಪ ಬಂದಿತ್ತು.

ಕೆಪಿಎಸ್‌ಸಿ ನಡೆಸಿದ್ದ ಈ ಪರೀಕ್ಷೆ ತುಂಬಾ ಕಠಿಣವಾಗಿತ್ತು. ಬೇರೆ ಪರೀಕ್ಷೆಗಳಲ್ಲಿ ಚಿನ್ನದ ಪದಕ ಪಡೆದವರು, ರಾಷ್ಟ್ರದ ಪ್ರತಿಷ್ಠಿತ ಯುಪಿಎಸ್‌ಸಿ ನಡೆಸುವ ಐಎಫ್‌ಎಸ್‌ ಪರೀಕ್ಷೆಯಲ್ಲಿ ಉತೀರ್ಣರಾದ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಕೇವಲ 350 ಅಂಕ ಪಡೆಯಲು ವಿಫಲರಾಗಿದ್ದರು. ಆದರೆ ಪಶುವೈದ್ಯ ಪದವಿಯಲ್ಲಿ ಸಾಧಾರಣ ಸಾಧನೆ ಮಾಡಿರುವ ಅಭ್ಯರ್ಥಿಗಳೇ 400ಕ್ಕಿಂತ ಹೆಚ್ಚು ಅಂಕ ಪಡೆದಿರುವುದು ಅನುಮಾನ ಮೂಡಿಸುವಂತಿದೆ ಎಂದು ನೊಂದ ಅಭ್ಯರ್ಥಿ ಡಾ.ಮಂಜುನಾಥ್ ನೀಡಿದ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದರು.

ಈ ಅನುಮಾನ ಪುಷ್ಟೀಕರಿಸುವಂತೆ ಆಗಿನ ಕೆಪಿಎಸ್‌ಸಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪನವರ ಸಂಬಂಧಿ, ಅಭ್ಯರ್ಥಿ ಸೂಗುರೇಶ್ ಜಾಕ ಎಂಬುವರು ಪದವಿಯಲ್ಲಿ 2 ಪರೀಕ್ಷೆಯಲ್ಲಿ ಅನುತೀರ್ಣಗೊಂಡು ಕಂಪಾರ್ಟ್ ಮೆಂಟ್ ಪರೀಕ್ಷೆಯಲ್ಲಿ ಉತೀರ್ಣಗೊಂಡು ಕನಿಷ್ಠ ಸಿಜಿಪಿಎ ಜತೆ ಪದವಿ ಮುಗಿಸಿದ್ದರು. ಆದರೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಭರ್ಜರಿ 450 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತೀರ್ಣರಾಗಿದ್ದರು. ಇದು ಭಾರೀ ಅನುಮಾನಕ್ಕೆ ಗ್ರಾಸವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು.

ಓಎಂಆರ್‌ ತಿದ್ದುಪಡಿಯಲ್ಲಿ

ಐಎಎಸ್ ಕೈವಾಡ ಶಂಕೆ?

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಕೆಲವರ ಓಎಂಆರ್‌ ತಿದ್ದುಪಡಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಅವರ ಕೈವಾಡವಿದೆ. ಇದಕ್ಕೆ ಸಿಐಡಿ ತನಿಖೆಯಲ್ಲಿ ಪುರಾವೆ ಲಭಿಸಿದೆ ಎಂದು ತಿಳಿದು ಬಂದಿದೆ.

ಪರೀಕ್ಷೆಯ ಹಿಂದಿನ ಎರಡು ದಿನಗಳು ಕೆಲ ಅಭ್ಯರ್ಥಿಗಳ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದವು. ಪರೀಕ್ಷಾ ಕೇಂದ್ರಗಳಿಗೆ ತಮ್ಮ ವಾಹನಗಳಲ್ಲಿ ಅಭ್ಯರ್ಥಿಗಳನ್ನು ಮಧ್ಯವರ್ತಿಗಳು ಕರೆತಂದಿದ್ದರು. ಹೊರರಾಜ್ಯ ಹಾಗೂ ಇತರೆ ಸ್ಥಳದಲ್ಲಿನ ಹೋಟೆಲ್ ಅಥವಾ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಮಾಡಿಸಿದ್ದರು. ಆ ಸ್ಥಳಗಳಲ್ಲಿ ಉತ್ತರ ಸಹಿತ ಪ್ರಶ್ನೆ ಪತ್ರಿಕೆ ನೀಡಿ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಸಿದ್ಧಗೊಳಿಸಿದ್ದರು. ನಂತರ ಪರೀಕ್ಷಾ ಕೇಂದ್ರದ ಸಮೀಪಕ್ಕೆ ಆ ಅಭ್ಯರ್ಥಿಗಳನ್ನು ಮಧ್ಯವರ್ತಿಗಳು ತಂದು ಬಿಟ್ಟಿದ್ದರು ಎಂದು ದೂರಿನಲ್ಲಿ ನೊಂದ ಅಭ್ಯರ್ಥಿ ಆಪಾದಿಸಿದ್ದರು.

ಕೆಲವೇ ಕೆಲ ಪ್ರಶ್ನೆಗಳಿಗೆ ಉತ್ತರಿಸಿ ಬಹುಪಾಲು ಪ್ರಶ್ನೆಗಳಿಗೆ ಉತ್ತರಿಸದೆ ಖಾಲಿ ಓಎಂಆರ್ ಪ್ರತಿಯನ್ನು ಕೆಲ ಅಭ್ಯರ್ಥಿಗಳು ನೀಡಿದ್ದರು. ಈ ಖಾಲಿ ಉತ್ತರ ಪತ್ರಿಕೆಗಳನ್ನು ನಂತರ ಭರ್ತಿ ಮಾಡಲಾಗಿದೆ. ಹೀಗೆ ಓಎಂಆರ್ ತಿದ್ದುಪಡಿಕೆಯಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಪಾತ್ರವಹಿಸಿದ್ದಾರೆ ಎನ್ನಲಾಗಿದೆ.

ಏನಿದು ಕೇಸ್‌?

- 400 ಪಶುವೈದ್ಯಾಧಿಕಾರಿಗಳ ಹುದ್ದೆಗೆ ಕೆಪಿಎಸ್ಸಿ ನೇಮಕಾತಿ ಪರೀಕ್ಷೆ ನಡೆಸಿತ್ತು. ಅದರಲ್ಲಿ ಅಕ್ರಮ ನಡೆದಿರುವ ಆರೋಪ ಬಂದಿತ್ತು

- ಈ ಪರೀಕ್ಷೆ ಅತ್ಯಂತ ಕಠಿಣವಾಗಿತ್ತು. ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್‌ ಆದವರು 350 ಅಂಕಗಳನ್ನು ಪಡೆಯಲೂ ತಿಣುಕಾಡಿದ್ದರು

- ಆದರೆ ಪದವಿಯಲ್ಲಿ ಸಾಧಾರಣ ಸಾಧನೆ ಮಾಡಿದ್ದ ಅಭ್ಯರ್ಥಿಗಳು 400ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದು ಶಂಕಾಸ್ಪದವಾಗಿತ್ತು

- ಈ ರೀತಿ ‘ ಅಸಾಧಾರಣ ಸಾಧನೆ’ ಮಾಡಿದವರೆಲ್ಲಾ ಕೆಪಿಎಸ್ಸಿಯ ಉನ್ನತ ಹುದ್ದೆಯಲ್ಲಿರುವವರ ಜತೆ ನಂಟು ಹೊಂದಿದವರಾಗಿದ್ದರು

- ಈ ಸಂಬಂಧ ನೊಂದ ಅಭ್ಯರ್ಥಿ ಮಂಜುನಾಥ್‌ ಎಂಬುವರು ದೂರು ನೀಡಿ ಗಂಭಿರ ಆರೋಪ ಮಾಡಿದ್ದರು. ಬಳಿಕ ತನಿಖೆ ಶುರುವಾಗಿತ್ತು

ಒಎಂಆರ್‌ ತಿದ್ದುಪಡಿಯಲ್ಲಿ ಜ್ಞಾನೇಂದ್ರ ಕೈವಾಡ ಶಂಕೆ?

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಕೆಲವರ ಒಎಂಆರ್‌ ತಿದ್ದುಪಡಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಅವರ ಕೈವಾಡವಿದೆ. ಇದಕ್ಕೆ ಸಿಐಡಿ ತನಿಖೆಯಲ್ಲಿ ಪುರಾವೆ ಲಭಿಸಿದೆ ಎಂದು ತಿಳಿದು ಬಂದಿದೆ. ಕೆಲವು ಅಭ್ಯರ್ಥಿಗಳನ್ನು ಹೋಟೆಲ್‌ ಅಥವಾ ರೆಸಾರ್ಟ್‌ಗೆ ಮಧ್ಯವರ್ತಿಗಳು ಕರೆದೊಯ್ದು ಉತ್ತರಸಹಿತ ಪ್ರಶ್ನೆಪತ್ರಿಕೆ ನೀಡಿ ಪರೀಕ್ಷೆಗೆ ಸಜ್ಜುಗೊಳಿಸಿದ್ದರು. ಬಳಿಕ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಬಿಟ್ಟಿದ್ದರು. ಬಹುಪಾಲು ಪ್ರಶ್ನೆಗಳಿಗೆ ಉತ್ತರಿಸದೆ ಖಾಲಿ ಒಎಂಆರ್‌ ನೀಡಿದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಬಳಿಕ ಭರ್ತಿ ಮಾಡಲಾಗಿತ್ತು. ಇದರ ಹಿಂದೆ ಜ್ಞಾನೇಂದ್ರ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.