ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ (ಕೇರಳ) ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸುವ ಐತಿಹಾಸಿಕ ನಿರ್ಧಾರ ಕೇವಲ ಆಡಳಿತಾತ್ಮಕ ಬದಲಾವಣೆಯಷ್ಟೇ ಅಲ್ಲ, ಹೊಸ ಶಕೆಯ ಆರಂಭ
ಮಂಗಳೂರು : ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ (ಕೇರಳ) ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸುವ ಐತಿಹಾಸಿಕ ನಿರ್ಧಾರ ಕೇವಲ ಆಡಳಿತಾತ್ಮಕ ಬದಲಾವಣೆಯಷ್ಟೇ ಅಲ್ಲ, ಮಂಗಳೂರು ಮತ್ತು ಕರಾವಳಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಬಹುಕಾಲದಿಂದ ಕಾಯುತ್ತಿದ್ದ ‘ಹೊಸ ಶಕೆಯ ಆರಂಭ’ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಸ್ತೃತ ಮಾಹಿತಿ ಹಂಚಿಕೊಂಡಿದೆ.
ಈ ಭಾಗದಿಂದ ಅಗಾಧ ಪ್ರಮಾಣದ ಆದಾಯ ಸಂಗ್ರಹವಾಗುತ್ತಿದ್ದರೂ ಪಾಲಕ್ಕಾಡ್ ವಿಭಾಗ ಮಂಗಳೂರು ಪ್ರದೇಶವನ್ನು ಕಡೆಗಣಿಸುತ್ತಲೇ ಬಂದಿದೆ. ರೈಲ್ವೆ ಅಭಿವೃದ್ಧಿಯ ವಿಚಾರಕ್ಕೆ ಬಂದಾಗ ಮಂಗಳೂರಿಗೆ ನಿರಂತರವಾಗಿ ಮಲತಾಯಿ ಧೋರಣೆ ಮತ್ತು ನಿರ್ಲಕ್ಷ್ಯ ಎದುರಾಗಿದೆ.
ಇದಕ್ಕೊಂದು ಸ್ಪಷ್ಟ ಉದಾಹರಣೆಯೆಂದರೆ ರೈಲು ಸಂಖ್ಯೆ 12133/34 ಮುಂಬೈ-ಮಂಗಳೂರು ಜಂಕ್ಷನ್ (ನಗರದ ಹೊರಭಾಗ) ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್. ಈ ರೈಲು ಸೇವೆಯನ್ನು ಕಾರವಾರ ಬದಲು ಮಂಗಳೂರು ತನಕ ಓಡಿಸಬೇಕೆಂಬ ಬೇಡಿಕೆ ಬಂದಾಗ, ಅದನ್ನು ಮುಂಬೈ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಓಡಿಸಬೇಕೆಂಬುದು ಬೇಡಿಕೆಯಾಗಿತ್ತು. ಆದರೆ ಪಾಲಕ್ಕಾಡ್ ವಿಭಾಗ ಮಂಗಳೂರು ಸೆಂಟ್ರಲ್‌ನಲ್ಲಿ ಪ್ಲಾಟ್‌ಫಾರ್ಮ್ ಕೊರತೆಯನ್ನು ನೆಪವಾಗಿಟ್ಟು ಈ ಪ್ರಸ್ತಾವನೆಯನ್ನು ತಿರಸ್ಕರಿಸಿ ರೈಲನ್ನು ಮಂಗಳೂರು ಜಂಕ್ಷನ್‌ಗೆ ಸೀಮಿತಗೊಳಿಸಿತು.
ಅದೇ ಪಾಲಕ್ಕಾಡ್ ವಿಭಾಗ, ನಂತರ ರೈಲು ಸಂಖ್ಯೆ 22609/10 ಮಂಗಳೂರು ಸೆಂಟ್ರಲ್-ಕೊಯಮತ್ತೂರು ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸಿ ಅದಕ್ಕೆ ಪ್ಲಾಟ್‌ಫಾರ್ಮ್ ಮಂಜೂರು ಮಾಡಿತು. ಹಾಗಾದರೆ ಸಹಜವಾಗಿಯೇ ಉದ್ಭವಿಸುವ ಪ್ರಶ್ನೆಯೆಂದರೆ: ಗೋಮಟೇಶ್ವರ ಎಕ್ಸ್‌ಪ್ರೆಸ್‌ಗೆ ಪ್ಲಾಟ್‌ಫಾರ್ಮ್ ಲಭ್ಯವಿಲ್ಲದಿದ್ದರೆ, ಕೊಯಮತ್ತೂರು ಇಂಟರ್‌ಸಿಟಿಗೆ ಹೇಗೆ ಲಭ್ಯವಾಯಿತು? ಎಂದು!
ಅದೇ ರೀತಿ 2017ರಲ್ಲಿ ಆರಂಭಗೊಂಡ ರೈಲು ಸಂಖ್ಯೆ 16575/76 ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ಓಡಿಸಬೇಕೆಂಬುದು ಬೇಡಿಕೆಯಾಗಿದ್ದರೂ ಪಾಲಕ್ಕಾಡ್ ವಿಭಾಗ ಅದನ್ನು ಮಂಗಳೂರು ಜಂಕ್ಷನ್‌ಗೆ ಸೀಮಿತಗೊಳಿಸಿತು. ಈಗಲೂ ಈ ಎರಡು ರೈಲುಗಳನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಲು ಹೋರಾಟ ಮಾಡಲಾಗುತ್ತಿದೆ. ಹೀಗಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಕೇರಳ ರೈಲುಗಳಿಗೆ ಸಿಗುವ ಆದ್ಯತೆ ಕರ್ನಾಟಕ, ಕೊಂಕಣ್ ಭಾಗದ ರೈಲುಗಳಿಗೆ ಏಕೆ ಸಿಗುವುದಿಲ್ಲ ಎಂಬ ಪ್ರಶ್ನೆ ಖಂಡಿತವಾಗಿಯೂ ಮೂಡುತ್ತದೆ.
ಅಭಿವೃದ್ಧಿ ಕಾಣದ ಸೆಂಟ್ರಲ್ ನಿಲ್ದಾಣ:
ಮಂಗಳೂರು ಸೆಂಟ್ರಲ್ ನಗರದ ಪ್ರಮುಖ ರೈಲ್ವೆ ನಿಲ್ದಾಣವಾಗಿದ್ದು, ಭಾರತದ ಐದು ಸೆಂಟ್ರಲ್ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿದೆ. ಆದರೂ ಅಭಿವೃದ್ಧಿಯ ವಿಷಯದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ದುರದೃಷ್ಟಕರ. ಭಾರತದಲ್ಲಿರುವ ಎಲ್ಲ ಐದು ಸೆಂಟ್ರಲ್ ರೈಲು ನಿಲ್ದಾಣಗಳ ಪೈಕಿ ಏನೂ ಅಭಿವೃದ್ಧಿ ಕಾಣದೆ ಇರುವ ಸೆಂಟ್ರಲ್ ರೈಲು ನಿಲ್ದಾಣವೆಂದರೆ ಅದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ. ವರ್ಷಗಳು ಕಳೆದರೂ ಮಂಗಳೂರಿನಂತಹ ಪ್ರಮುಖ ನಗರಕ್ಕೆ ಸಿಗಬೇಕಾದ ಕಾಯಕಲ್ಪ ಇನ್ನೂ ಸಿಕ್ಕಿಲ್ಲ.
ಕರ್ನಾಟಕದಿಂದಲೇ ಮಂಗಳೂರು ದೂರ!:
ಮಂಗಳೂರು ಕರ್ನಾಟಕದಲ್ಲಿದ್ದರೂ, ರಾಜ್ಯದ ಇತರ ನಗರಗಳೊಂದಿಗೆ ಸೂಕ್ತ ರೈಲ್ವೆ ಸಂಪರ್ಕ ಇಲ್ಲವಾಗಿದೆ. ಮಂಗಳೂರು ಸೆಂಟ್ರಲ್‌ನಿಂದ ಸಂಚರಿಸುವ ಸುಮಾರು 35 ರೈಲುಗಳಲ್ಲಿ, ಸರಿಸುಮಾರು 23 ರೈಲುಗಳು ಕೇರಳದ ಕಡೆಗೆ ಓಡುತ್ತಿದ್ದರೆ, ಕರ್ನಾಟಕ ಮತ್ತು ಕೊಂಕಣ ಭಾಗದ ಕಡೆಗೆ ಕೇವಲ ಆರರಷ್ಟು ಮಾತ್ರ ಇವೆ. ಇದು ಮಂಗಳೂರಿನ ದುಸ್ಥಿತಿ!
ದಕ್ಷಿಣ ರೈಲ್ವೆ ವಲಯ ಕೊರೋನಾ ಲಾಕ್ಡೌನ್ ಸಮಯದಲ್ಲಿ ರದ್ದುಗೊಂಡ ರೈಲು ಸಂಖ್ಯೆ 16687/88 ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ನವಯುಗ್ ಎಕ್ಸ್‌ಪ್ರೆಸ್ ಅನ್ನು ಇನ್ನು ಮರು ಪ್ರಾರಂಭಿಸಲಿಲ್ಲ. ಮಂಗಳೂರು ಸೆಂಟ್ರಲ್ ಅನ್ನು ಉತ್ತರ ಭಾರತದೊಂದಿಗೆ ಸಂಪರ್ಕಿಸುತ್ತಿದ್ದ ಇಂತಹ ಪ್ರತಿಷ್ಠಿತ ದೂರದ ರೈಲು ಸೇವೆ ಮಂಗಳೂರಿನಿಂದ ಕಣ್ಮರೆಯಾಗಬಾರದಿತ್ತು. ಈ ಪ್ರಮುಖ ಸಂಪರ್ಕವನ್ನು ಮತ್ತೆ ಆರಂಭಿಸಬೇಕೆಂಬ ಬೇಡಿಕೆ ಹಾಗೆಯೇ ಉಳಿದಿದೆ.
ಮಲಯಾಳಂ ಭಾಷಾ ಸಿಬ್ಬಂದಿ:
ಮಂಗಳೂರು ರೈಲು ನಿಲ್ದಾಣಗಳಲ್ಲಿ ಅದರಲ್ಲೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ, ಈ ನೆಲದ ಭಾಷೆಗಳಾದ ಕನ್ನಡ ಮತ್ತು ತುಳು ಭಾಷೆಗಳಿಗೆ ತಕ್ಕ ಪ್ರಾಮುಖ್ಯತೆ ನೀಡದಿರುವುದು. ಇಂದಿಗೂ ಕ್ಯಾಟರಿಂಗ್ ಮಳಿಗೆಗಳು, ಉಪಹಾರ ಗೃಹಗಳು ಮತ್ತು ಟಿಕೆಟ್ ಕೌಂಟರ್‌ಗಳಲ್ಲಿ ನಿಯೋಜಿಸಲಾದ ಸಿಬ್ಬಂದಿಗೆ ಕನ್ನಡ ಅಥವಾ ತುಳು ತಿಳಿದಿರುವುದಿಲ್ಲ. ನಾಮಫಲಕಗಳು, ಜಾಹಿರಾತುಗಳು, ಬೋರ್ಡ್‌ಗಳು ಮತ್ತು ಸೂಚನಾ ಫಲಕಗಳಲ್ಲಿ ಸ್ಥಳೀಯ ಭಾಷೆಗಳಿಗಿಂತ ಮಲಯಾಳಂಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ.
ಕೈಗೂಡದ ಹಳಿ ಡಬ್ಲಿಂಗ್:
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಡುವಿನ ಹಾಲಿ ದ್ವಿಪಥ ಮಾಡುವುದು ಗಮನಹರಿಸಬೇಕಾದ ಮತ್ತೊಂದು ದೀರ್ಘಕಾಲದ ಬೇಡಿಕೆಯಾಗಿದೆ. ಕೇವಲ ಸಾಮರ್ಥ್ಯ ಮತ್ತು ಕಾರ್ಯಾಚರಣೆಯ ಅಡೆತಡೆಗಳನ್ನು ನೆಪವಾಗಿ ಮುಂದಿಡುವ ಬದಲು, ಮಂಗಳೂರಿನ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು.
ಕೇರಳ ವಿರುದ್ಧವಲ್ಲ:
ಈ ಬೇಡಿಕೆಯು ಕೇರಳ ಅಥವಾ ಕೇರಳದ ಜನರ ವಿರುದ್ಧವಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಮಂಗಳೂರು ಕರ್ನಾಟಕದಲ್ಲಿದ್ದು, ಅಪಾರ ರೈಲ್ವೆ ಆದಾಯ ತಂದುಕೊಡುತ್ತಿದ್ದರೂ, ಇಲ್ಲಿನ ಹಿತಾಸಕ್ತಿಯನ್ನು ಮತ್ತೆ ಕೇರಳ ಕೇಂದ್ರಿತ ರೈಲ್ವೆ ಸೇವೆಗಳಿಗೆ ಮೀಸಲಿಡಬಾರದು ಎಂಬುದು ನಮ್ಮ ಕಳಕಳಿ. ನಾವು ಎಲ್ಲರನ್ನೂ ಗೌರವಿಸುತ್ತೇವೆ, ಆದರೆ ಮಂಗಳೂರಿನ ರೈಲ್ವೆ ಅಭಿವೃದ್ಧಿಯು ಪ್ರಾಥಮಿಕವಾಗಿ ಮಂಗಳೂರು ಮತ್ತು ಕರ್ನಾಟಕದ ಜನರ ಅಗತ್ಯಗಳಿಗೆ ಸ್ಪಂದಿಸಬೇಕು ಎಂದು ಸಮಿತಿ ಸ್ಪಷ್ಟಪಡಿಸಿದೆ.
=
(ಪರಿಷ್ಕೃತ)

