ಸೈಬರ್ ವಂಚನೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ತೆರಳಿದ್ದಾಗ ಮಧ್ಯಪ್ರದೇಶದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಆಗ್ನೇಯ ವಿಭಾಗದ ಸೈಬರ್ ಠಾಣೆ ಇನ್ಸ್‌ಪೆಕ್ಟರ್‌ವೊಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಬೆಂಗಳೂರು : ಸೈಬರ್ ವಂಚನೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ತೆರಳಿದ್ದಾಗ ಮಧ್ಯಪ್ರದೇಶದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಆಗ್ನೇಯ ವಿಭಾಗದ ಸೈಬರ್ ಠಾಣೆ ಇನ್ಸ್‌ಪೆಕ್ಟರ್‌ವೊಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಇನ್ಸ್‌ಪೆಕ್ಟರ್‌ ಕೆ.ಬಿ.ರವಿ (45) ಮೃತ ಅಧಿಕಾರಿ. ಈ ಘಟನೆಯಲ್ಲಿ ಗಾಯಗೊಂಡಿರುವ ಸಬ್ ಇನ್ಸ್‌ಪೆಕ್ಟರ್ ರಮೇಶ್ ನಾಯ್ಕ್ ಹಾಗೂ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ ಮತ್ತೆ ಮೂವರು ಮೃತಪಟ್ಟು, 10ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಲಖನೌದಿಂದ ಮಧ್ಯಪ್ರದೇಶದ ಇಂದೋರ್‌ ನಗರಕ್ಕೆ ಆರೋಪಿಗಳ ಬೆನ್ನಹತ್ತಿ ರವಿ ತಂಡ ತೆರಳುವಾಗ ಮಾರ್ಗ ಮಧ್ಯೆ ಈ ಅವಘಡ ಸಂಭವಿಸಿದೆ.

30 ಅಡಿಯಿಂದ ಕೆಳಗೆ ಬಿದ್ದ ಪಿಐ

ಸೈಬರ್ ವಂಚನೆ ಸಂಬಂಧ ಆಗ್ನೇಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗಿಳಿದ ಪಿಐ ರವಿ ತಂಡವು, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ ಸೈಬರ್ ವಂಚಕರ ಕಾರ್ಯಾಚರಣೆಗೆ ತೆರಳಿತ್ತು. ಎರಡು ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ತನಿಖಾ ತಂಡ ಬಂಧಿಸಿದೆ.

ಬಳಿಕ ಬೆಂಗಳೂರಿಗೆ ಆ ಆರೋಪಿಗಳನ್ನು ಪಿಎಸ್‌ಐ ಪ್ರವೀಣ್ ನೇತೃತ್ವದಲ್ಲಿ ವಿಮಾನದಲ್ಲಿ ಕಳುಹಿಸಿದ ರವಿ ಅವರು, ವಂಚಕ ಜಾಲದ ಮತ್ತಿಬ್ಬರು ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಖಚಿತ ಮಾಹಿತಿ ಪಡೆದು ತನಿಖೆ ಮುಂದುವರಿಸಲು ನಿರ್ಧರಿಸಿದ್ದರು. ಅಂತೆಯೇ ಉತ್ತರ ಪ್ರದೇಶದ ಲಖನೌದಿಂದ ಖಾಸಗಿ ಬಸ್‌ನಲ್ಲಿ ಇಂದೋರ್‌ಗೆ ತಮ್ಮ ತಂಡದ ಪಿಎಸ್‌ಐ ರಮೇಶ್ ನಾಯ್ಕ್ ಹಾಗೂ ಎಎಸ್ಐ ಶ್ರೀನಿವಾಸ್ ಜತೆ ರವಿ ತೆರಳುತ್ತಿದ್ದರು. ಆ ಬಸ್ಸಿನ ಸ್ಲಿಪರ್‌ ಕೋಚ್‌ನಲ್ಲಿ ಅಫರ್‌ ಬರ್ತ್‌ನಲ್ಲಿ ರವಿ ಇದ್ದರೆ, ಕೆಳಗೆ ಪಿಎಸ್‌ಐ ಹಾಗೂ ಎಎಸ್‌ಐ ಇದ್ದರು. ಮಧ್ಯಪ್ರದೇಶದ ರಾಜಘರ್‌ ಜಿಲ್ಲೆಯ ಬಯೋರಾ ನಗರದ ಹೊರ ವರ್ತುಲ ರಸ್ತೆಯಲ್ಲಿ ಪಿಐ ತಂಡ ಪ್ರಯಾಣಿಸುತ್ತಿದ್ದ ಬಸ್ ಭೀಕರ ಅಪಘಾತಕ್ಕೀಡಾಗಿದೆ. ಹೊರ ವರ್ತಲ ರಸ್ತೆಯ ಮೇಲ್ಸೇತುವೆಯಲ್ಲಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಬಸ್ ಉರುಳಿದೆ. ಆಗ ಬಸ್‌ನ ಅಪ್ಪರ್‌ ಬರ್ತ್‌ನಲ್ಲಿ ನಿದ್ರೆಯಲ್ಲಿದ್ದ ರವಿ ಅವರು 30 ಅಡಿಯಿಂದ ಕೆಳಗೆ ಬಿದ್ದಿದ್ದಾರೆ. ಆಗ ಗಂಭೀರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ ಮತ್ತೆ ನಾಲ್ವರು ಮರಣ ಹೊಂದಿದ್ದು, ಪಿಎಸ್‌ಐ ರಮೇಶ್ ನಾಯ್ಕ್ ಹಾಗೂ ಎಎಸ್‌ಐ ಶ್ರೀನಿವಾಸ್ ಸೇರಿದಂತೆ 11 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಏರ್ ಆ್ಯಂಬುಲೆನ್ಸ್‌ನಲ್ಲಿ ಮೃತದೇಹ ರವಾನೆ

ಬಸ್ ಅಪಘಾತದಲ್ಲಿ ಇನ್ಸ್‌ಪೆಕ್ಟರ್ ರವಿ ಸಾವಿನ ಸಂಗತಿ ಕೇಳಿ ಇಡೀ ಪೊಲೀಸ್ ಇಲಾಖೆ ನೋವಿನಲ್ಲಿ ಮುಳುಗಿತು. ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಏರ್ ಆ್ಯಂಬುಲೆನ್ಸ್‌ ಮೂಲಕ ಬೆಂಗಳೂರಿಗೆ ಮೃತದೇಹ ರವಾನೆ ಮಾಡಲು ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಿದರು.

ಬಡತನದ ಬೇಗೆಯಲ್ಲಿ ಉದಯಿಸಿದ ರವಿ

ಕಡುಬಡತನದ ಬೇಗೆಯಲ್ಲಿ ಬೆಂದು ಕೆ.ಬಿ.ರವಿ ಅವರು ಉನ್ನತ ಸ್ಥಾನಕ್ಕೇರಿದ್ದರು. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೊಣಸೂರು ಗ್ರಾಮದ ರೈತ ಬಸಪ್ಪ ಹಾಗೂ ಅಕ್ಕ ನಾಗಮ್ಮ ದಂಪತಿಯ ಕಿರಿಯ ಪುತ್ರ ರವಿ ಅವರು, 2005ರಲ್ಲಿ ಕಾನ್‌ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದರು. ಆದರೆ ಛಲಬಿಡದೆ ಓದಿ 2007ರಲ್ಲಿ ಪಿಎಸ್‌ಐ ಹುದ್ದೆಗೆ ಅವರು ಆಯ್ಕೆಯಾದರು. 10 ವರ್ಷಗಳ ನಂತರ ಸೇವಾ ಹಿರಿತನದ ಮೇರೆಗೆ ರವಿ ಅವರಿಗೆ ಇನ್ಸ್‌ಪೆಕ್ಟರ್‌ ಆಗಿ ಮುಂಬಡ್ತಿ ಸಿಕ್ಕಿತು. ಬೆಂಗಳೂರಿನ ಅಶೋಕನಗರ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್‌ ಹಾಗೂ ಕಬ್ಬನ್ ಪಾರ್ಕ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಇತ್ತೀಚಿಗಷ್ಟೇ ಆಗ್ನೇಯ ವಿಭಾಗದ ಸೈಬರ್ ಠಾಣೆಗೆ ವರ್ಗಾವಣೆಯಾಗಿತ್ತು. ರವಿ ಅವರು ತಂದೆ-ತಾಯಿ, ಪತ್ನಿ, ಇಬ್ಬರು ಮಕ್ಕಳು, ಮೂವರು ಅಣ್ಣಂದಿರು ಹಾಗೂ ನಾಲ್ವರು ಸೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇಂದು ಅಂತ್ಯಕ್ರಿಯೆ

ಪಿರಿಯಾಪಟ್ಟಣ ತಾಲೂಕಿನ ಕೊಣಸೂರಿನ ರವಿ ಅವರ ಹುಟ್ಟೂರಿನಲ್ಲಿ ಶನಿವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಎಚ್ಎಎಲ್‌ ವಿಮಾನ ನಿಲ್ದಾಣದಲ್ಲಿ ರವಿ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಸಿಐಡಿ-ಸೈಬರ್ ಡಿಜಿಪಿ ಪ್ರಣವ್ ಮೊಹಂತಿ, ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ ಚಂದ್ರಶೇಖರ್ ಸೇರಿದಂತೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಅಲ್ಲದೆ ಆಡುಗೋಡಿ ನಗರ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಶುಕ್ರವಾರ ರಾತ್ರಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿ ಪಾರ್ಥಿವ ಶರೀರಕ್ಕೆ ಮೃತರ ಸಹೋದ್ಯೋಗಿಗಳು, ಕುಟುಂಬದವರು ಹಾಗೂ ಸ್ನೇಹಿತರು ಸೇರಿದಂತೆ ಸಾವಿರಾರು ಜನರು ಶ್ರದ್ಧಾಂಜಲಿ ಸಲ್ಲಿಸಿದರು.