ನೈಸ್ ಯೋಜನೆ ವಿರುದ್ಧ ವಿರುದ್ಧ ಸಮರ ಸಾರಿರುವ ಜೆಡಿಎಸ್‌ ಪಕ್ಷ ‘ನಥಿಂಗ್‌ ನೈಸ್‌’ ಎಂಬ ಜನಪರ ಅಭಿಯಾನ ಆರಂಭಿಸಿದೆ.ಶುಕ್ರವಾರ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿದರು

 ಬೆಂಗಳೂರು : ನೈಸ್ ಯೋಜನೆ ವಿರುದ್ಧ ವಿರುದ್ಧ ಸಮರ ಸಾರಿರುವ ಜೆಡಿಎಸ್‌ ಪಕ್ಷ ‘ನಥಿಂಗ್‌ ನೈಸ್‌’ ಎಂಬ ಜನಪರ ಅಭಿಯಾನ ಆರಂಭಿಸಿದೆ.

ಶುಕ್ರವಾರ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿದರು. ನೈಸ್‌ ಅಕ್ರಮಗಳ ಕುರಿತ ಕೋರ್ಟ್‌ಗಳ ಆದೇಶಗಳು, ನೈಸ್‌ ಯೋಜನೆ ಸಂಬಂಧಿತ ದಾಖಲೆಗಳಿರುವ ‘ನಥಿಂಗ್‌ ನೈಸ್‌’ ಹೆಸರಿನ ವೆಬ್‌ ಸೈಟ್‌( http://nothingnice.net) ಬಿಡುಗಡೆಗೊಳಿಸಿದರು.

ನೈಸ್ ಸಂಸ್ಥೆಯಿಂದ ಕಳೆದ 26 ವರ್ಷಗಳಿಂದ ಹಗರಣ

ಈ ವೇಳೆ ಮಾತನಾಡಿದ ನಿಖಿಲ್‌, ನೈಸ್ ಸಂಸ್ಥೆಯಿಂದ ಕಳೆದ 26 ವರ್ಷಗಳಿಂದ ಹಗರಣ ನಡೆಯುತ್ತಿದೆ. ಸಾರ್ವಜನಿಕರ ಹೆಸರಿನಲ್ಲಿ ನೈಸ್ ಅಭಿವೃದ್ಧಿಯಾಗಿಲ್ಲ. ರೈತರಿಗೆ ಪರಿಹಾರ ಸಿಕ್ಕಿಲ್ಲ, ಜನರ ಭೂಮಿ ಪಡೆದು ಅಭಿವೃದ್ಧಿ ಮಾಡಿಲ್ಲ. ನೈಸ್ ರಸ್ತೆಯಲ್ಲಿ ಓಡಾಡುವವರಿಗೆ ಸಮಸ್ಯೆ ಆಗುತ್ತಿದೆ ಎಂದು ಕಿಡಿಕಾರಿದರು.

ಈ ಯೋಜನೆ ಸಂಬಂಧ 1997 ರಲ್ಲಿ ಫ್ರೇಮ್ ವರ್ಕ್ ಅಗ್ರಿಮೆಂಟ್ ಆಗಿದೆ. ಆದರೆ ಫ್ರೇಮ್ ವರ್ಕ್ ಅಗ್ರಿಮೆಂಟ್ ಉಲ್ಲಂಘನೆಯಾಗಿದೆ. ಯೋಜನೆಯಂತೆ 5 ಟೌನ್ ಶಿಪ್ ಆಗಬೇಕಿತ್ತು, ಆದರೆ ಈ ಯೋಜನೆ ಇನ್ನೂ ಸಂಪೂರ್ಣವಾಗಿಲ್ಲ. 111 ಕಿ.ಮೀ. ರಸ್ತೆ ಯೋಜನೆ ಪೂರ್ಣವಾಗಿಲ್ಲ. ಫೆರಿಫೆರಲ್ ರಸ್ತೆಯಲ್ಲಿ 2,193 ಎಕರೆ ಭೂಸ್ವಾಧೀನ ಆಗಬೇಕಿತ್ತು, ಆದರೆ 554 ಎಕರೆ ಹೆಚ್ಚುವರಿಯಾಗಿ ಜಮೀನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಟಿ.ಬಿ.ಜಯಚಂದ್ರ ನೇತೃತ್ವದ ಜಂಟಿ ಸದನ ಸಮಿತಿ ವರದಿಯಲ್ಲಿ 22 ಷರತ್ತುಗಳಲ್ಲಿ 16 ಷರತ್ತು ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಹೈಕೋರ್ಟ್ ಜುಲೈನಲ್ಲಿ ಸ್ಪಷ್ಟ ಆದೇಶ ಮಾಡಿದೆ. ಭೂಮಿ ಕಳೆದುಕೊಂಡ ರೈತರಿಗೆ ಜಮೀನು ವಾಪಸ್ ಕೊಡಲು ಆದೇಶ ಮಾಡಿದೆ. ಸರ್ಕಾರ ಮೌನವಾಗಿ ಇರಬಾರದು, ಮಧ್ಯಪ್ರವೇಶಿಸಬೇಕು ಎಂದು ನಿಖಿಲ್‌ ಆಗ್ರಹಿಸಿದರು.

ಕೂಡಲೇ ನೈಸ್ ರಸ್ತೆ ಟೋಲ್ ಸಂಗ್ರಹ ನಿಲ್ಲಬೇಕು. ರಸ್ತೆ ಪೂರ್ಣ ಆಗದೇ ಯಾಕೆ ಟೋಲ್ ಸಂಗ್ರಹ ಮಾಡುತ್ತೀರಾ? ರಸ್ತೆ ಪೂರ್ಣ ಆಗದೇ ಜನ ಯಾಕೆ ಟೋಲ್ ಕಟ್ಟಬೇಕು ಪ್ರಶ್ನಿಸಿದರು. ನೈಸ್ ವಿರುದ್ಧ ನಥಿಂಗ್ ನೈಸ್ ಅಭಿಯಾನ ಶುರು ಮಾಡಿದ್ದೇವೆ. ಇದೊಂದು ಜನರ ಪರವಾದ ಅಭಿಯಾನ, ಇದು ಜನರ ಆಂದೋಲನವಾಗಬೇಕು. ಈ ಸರ್ಕಾರ ರಿಯಲ್ ಎಸ್ಟೇಟ್ ಪರ ಇದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರಿಯಲ್ ಎಸ್ಟೇಟ್ ಫೋರಂನ ಸಿಇಓ ಆಗಿದ್ದಾರೆ ವಾಗ್ದಾಳಿ ನಡೆಸಿದರು.

ಸರ್ಕಾರ ನೈಸ್ ಯೋಜನೆ ಟೇಕ್ ಓವರ್ ಮಾಡಬೇಕು. ರೈತರ ಜಮೀನು ವಾಪಸ್ ಕೊಡಬೇಕು, ಇಲ್ಲದಿದ್ದರೆ ಪರಿಹಾರ ಹಣವನ್ನು ಬಡ್ಡಿ ಸಮೇತ ಸರ್ಕಾರ ಕೊಡಬೇಕು. ನೈಸ್ ವಿರುದ್ಧ ಶೀಘ್ರವೇ ಬೀದಿಗಿಳಿದು ಹೋರಾಟ ಮಾಡುತ್ತೇವೆ.

- ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ

- ವೆಬ್‌ಸೈಟ್‌ ಬಿಡುಗಡೆ ಮಾಡಿದ ನಿಖಿಲ್‌

- ನೈಸ್‌ ರಸ್ತೆಯಲ್ಲಿ ಟೋಲ್‌ ಸಂಗ್ರಹ ನಿಲ್ಲಿಸಲು ಒತ್ತಾಯ

ರೈತರಿಗೂ ಪರಿಹಾರ ನೀಡದೇ, ಜನರಿಂದಲೂ ಟೋಲ್‌ ಸಂಗ್ರಹಿಸಿ ನೈಸ್ ಸಂಸ್ಥೆ ಅಕ್ರಮ

ಸರ್ಕಾರ ಕೂಡಲೇ ಯೋಜನೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು: ನಿಖಿಲ್‌