ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಸರಣಿ ಅಪಘಾತವೆಸಗಿದ್ದ ಕಾರು ಚಾಲಕನಿಗೆ ಸಾರ್ವಜನಿಕರು ಗೂಸಾ ನೀಡಿರುವ ಘಟನೆ ಮದ್ದೂರು ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ಭಾನುವಾರ ಬೆಳಗ್ಗೆ ಜರುಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಸರಣಿ ಅಪಘಾತವೆಸಗಿದ್ದ ಕಾರು ಚಾಲಕನಿಗೆ ಸಾರ್ವಜನಿಕರು ಗೂಸಾ ನೀಡಿರುವ ಘಟನೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ಭಾನುವಾರ ಬೆಳಗ್ಗೆ ಜರುಗಿದೆ. ಘಟನೆಯಲ್ಲಿ ಬೆಂಗಳೂರು ಮಣಿಪಾಲ್ ಆಸ್ಪತ್ರೆ ವೈದ್ಯ ದಂಪತಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಕಳ್ಳಿ ಬೋರಯ್ಯ ಪುತ್ರ ಹರೀಶ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಹಲ್ಲೆಯಿಂದ ಸಣ್ಣಪುಟ್ಟ ಗಾಯವಾಗಿರುವ ಈತನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.ವ್ಯಸನಿ ಹರೀಶ್ ನನ್ನು ಕುಟುಂಬಸ್ಥರು ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದರು. ಭಾನುವಾರ ಮುಂಜಾನೆ ಮನೆಯಲ್ಲಿ ಯಾರಿಗೂ ಹೇಳದೆ ಅತಿಯಾಗಿ ಮದ್ಯ ಸೇವನೆ ಮಾಡಿ ಮಹೇಂದ್ರ ಕಾರು ಚಾಲನೆ ಮಾಡಿಕೊಂಡು ಮೈಸೂರು ಕಡೆಗೆ ಬರುತ್ತಿದ್ದರು. ಎಕ್ಸ್ ಪ್ರೆಸ್ ವೇನ ತೈಲೂರು ಕೆರೆ ಬಳಿ ಬೆಂಗಳೂರು, ತಾವರೆಕೆರೆ ನಿವಾಸಿಯೊಬ್ಬರ ಕಾರಿಗೆ ಡಿಕ್ಕಿ ಹೊಡೆದು ಜಖಂ ಗೊಳಿಸಿದ್ದಾರೆ.
ನಂತರ ಇದೇ ಹೆದ್ದಾರಿಯ ನಿಡಘಟ್ಟ ಸಮೀಪದ ಟಿಫಾನಿಸ್ ಹೋಟೆಲ್ ಬಳಿ ನಿಂತಿದ್ದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ವೈದ್ಯೆ ಚಿನ್ಮಯ್ ಮತ್ತು ಬಿಕಾಸ್ ಸಾಬು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರಣ ಕಾರು ಜಖಂಗೊಂಡು ದಂಪತಿಗೆ ಸಣ್ಣಪುಟ್ಟ ಗಾಯವಾಗಿದೆ.ನಂತರ ಅಡ್ಡಾದ್ದಿಡಿಯಾಗಿ ಕಾರು ಚಾಲನೆ ಮಾಡಿಕೊಂಡು ಸರ್ವಿಸ್ ರಸ್ತೆಯಲ್ಲಿದ್ದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದೊಳಗೆ ಕಾರು ನುಗ್ಗಿಸಿದ್ದಾನೆ. ಈ ವೇಳೆ ಬಸ್ ಚಾಲಕರು ಮತ್ತು ಪ್ರಯಾಣಿಕರು ಆತಂಕಗೊಂಡು ಬಸ್ಸಿಗಾಗಿ ಕಾಯುತ್ತಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರು ಸ್ಥಳದಿಂದ ತೆರಳಿದ ಪರಿಣಾಮ ಯಾವುದೇ ಸಾವು ನೋವು ಆಗದೆ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ನಂತರ ಪ್ರವಾಸಿ ಮಂದಿರ ವೃತ್ತದ ಬಳಿ ಮತ್ತೊಂದು ಕಾರಿಗೆ ಅಪಘಾತವೆಸಗಿದ ಬಳಿಕ ಹರೀಶ್ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಹರೀಶನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.ನಂತರ ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪೊಲೀಸರು ಗಾಯಗೊಂಡಿದ್ದ ಆತನನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪಾನಮತ್ತನಾಗಿದ್ದ ಹರೀಶ್ ಆಸ್ಪತ್ರೆಯಲ್ಲೂ ಸಹ ತುರ್ತು ಚಿಕಿತ್ಸಾ ಘಟಕದ ವೈದ್ಯರು ಹಾಗೂ ನರ್ಸ್ ಮೇಲೆ ಗಲಾಟೆ ಮಾಡಿದ್ದಾನೆ. ಈತನನ್ನು ನಿಯಂತ್ರಣ ಮಾಡಲು ಬಂದ ಪೊಲೀಸರ ಮೇಲೂ ಸಹ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.
ಅಲ್ಲದೇ, ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ಆಕ್ಸಿಜನ್ ಸಂಪರ್ಕಗಳ ವೈರ್ ಹಾಗೂ ಫ್ರಿಡ್ಜ್ ಡೋರ್ ಜಖಂಗೊಳಿಸಿ ಅದರಲ್ಲಿದ್ದ ಔಷಧಿಗಳನ್ನು ಹೊರ ಚೆಲ್ಲಿ ದಾಂಧಲೆ ನಡೆಸಿದ್ದಾನೆ ಎಂದು ಆಸ್ಪತ್ರೆ ಸಿಬ್ಬಂದಿ ದೂರಿದ್ದಾರೆ.ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯ ವಿಷಯ ತಿಳಿದು ಮದ್ಯ ವ್ಯಸನ ಮುಕ್ತ ಕೇಂದ್ರದ ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ಧಾವಿಸಿದ ಹರೀಶ್ ತಂದೆ ಬೋರಯ್ಯ ಹೇಳಿಕೆ ಪ್ರಕಾರ ಮಗ ಹರೀಶ್ ಮಾದಕ ವಸ್ತುಗಳ ದಾಸನಾಗಿದ್ದನು. ಈ ಚಟ ಬಿಡಿಸುವ ಉದ್ದೇಶದಿಂದ ಈತನನ್ನು ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದರು.ಕೇಂದ್ರದ ಮೇಲ್ವಿಚಾರಕರ ಕಣ್ಣು ತಪ್ಪಿಸಿ ಮನೆಯಲ್ಲಿ ಯಾರಿಗೂ ಹೇಳದೆ ಅತಿಯಾಗಿ ಮದ್ಯ ಸೇವನೆ ಮಾಡಿ ಕಾರು ಚಾಲನೆ ಮಾಡಿಕೊಂಡು ಬಂದು ಈ ರೀತಿ ಅನಾಹುತ ಸೃಷ್ಟಿಸಿದ್ದಾನೆ ಎಂದು ಬೋರಯ್ಯ ಬೇಸರ ವ್ಯಕ್ತಪಡಿಸಿದರು.