ಮಳವಳ್ಳಿ: ಬೈಕ್‌ನಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಸವಾರ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯದ ರಾಗಿಬೊಮ್ಮನಹಳ್ಳಿ ಗೇಟ್ ಬಳಿ ಮೈಸೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಭಾನುವಾರ ಬೆಳಗಿನ ಜಾವ ಜರುಗಿದೆ. ಪಟ್ಟಣದ ವಿಘ್ನೇಶ್ವರ ಡ್ರೈವಿಂಗ್ ಸ್ಕೂಲ್ ಮಾಲೀಕ ಮಹೇಂದ್ರ ಅವರ ಪುತ್ರ ಅಜಿತ್ ಮಹೇಂದ್ರ (27) ಮೃತ ದುರ್ದೈವಿ. ಬೆಳಗಿನ ಜಾವ ತಮ್ಮ ಬೈಕ್‌ನಲ್ಲಿ ಹೋಗುತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಾರಿಗೆ ಬಸ್ ಹರಿದು ಯುವಕ ಸ್ಥಳದಲ್ಲೇ ಸಾವು

ಶ್ರೀರಂಗಪಟ್ಟಣ:

ಸಾರಿಗೆ ಬಸ್ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಸರ್ಕಾರಿ ಸಾರಿಗೆ ಬಸ್‍ ನಿಲ್ದಾಣದಲ್ಲಿ ನಡೆದಿದೆ.

ಪಾಂಡವಪುರದ ಯೋಜಿತ್‍ (24) ಮೃತಪಟ್ಟ ಯುವಕ. ಈತ ಮೈಸೂರಿಗೆ ಹೋಗಲು ಪಾಂಡವಪುರದಿಂದ ಶ್ರೀರಂಗಪಟ್ಟಣ ಬಸ್‍ ನಿಲ್ದಾಣದಲ್ಲಿ ಇಳಿದು ಮೈಸೂರಿಗೆ ಹೋಗುವ ಮತ್ತೊಂದು ಬಸ್‍ ಹತ್ತಲು ಆತುರಾತುರವಾಗಿ ಹೋಗುವ ವೇಳೆ ಎದುರಿಗೆ ಬಂದ ಬಸ್‍ ಡಿಕ್ಕಿ ಹೊಡೆದು ಬಸ್‍ ಚಕ್ರದಡಿ ಸಿಲುಕಿ ಈ ಘಟನೆ ನಡೆದಿದೆ ಎಂದು ಪೊಲೀಸ್‍ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್‍ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.