ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿ ಬಳಿ ಇದ್ದ ಮೊಬೈಲನ್ನು ಅತ್ಯಾಚಾರ ಪ್ರಕರಣದ ಸಜಾ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಸಿದ್ದರು ಎಂದು ಕಾರಾಗೃಹ ಇಲಾಖೆ ವಿಚಾರಣೆಯಲ್ಲಿ ಪತ್ತೆಯಾಗಿದೆ.

ಕೈದಿ ಪ್ರಜ್ವಲ್ ಮೊಬೈಲ್‌ನಲ್ಲಿ ಮಾತನಾಡುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಪರಿಶೀಲಿಸಿದಾಗ ವರ್ಷದ ಹಿಂದೆ ನಡೆದ ಕೃತ್ಯ ಇದಾಗಿದೆ. 2025ರ ಸೆಪ್ಟೆಂಬರ್‌ 24ರಂದು ವಿಚಾರಣಾಧೀನ ಕೈದಿಯಾಗಿದ್ದ ರೌಡಿಶೀಟರ್ ಸತೀಶ್‌ನಿಂದ ಮೊಬೈಲ್‌ ಪಡೆದು ಪ್ರಜ್ವಲ್ ಮಾತನಾಡಿದ್ದರು. ತಾನು ಸತೀಶ್‌ನಿಂದ ಮೊಬೈಲ್ ಪಡೆದಿದ್ದನ್ನು ಕಾರಾಗೃಹ ಅಧಿಕಾರಿಗಳಿಗೆ ಪ್ರಜ್ವಲ್ ಹೇಳಿದ್ದಾರೆ ಎಂದ ವಿಶ್ವಸನೀಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

2 ಸೆಲ್‌ಗಳ ಬಗ್ಗೆ ಪರಿಶೀಲನೆ:

2025ರ ಆಗಸ್ಟ್‌ನಲ್ಲಿ ಪ್ರಜ್ವಲ್ ಅವರಿಗೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯಾಯಿತು. ಆದರೆ ಅದಕ್ಕೂ ಒಂದು ತಿಂಗಳ ಮುನ್ನ ಮೊಬೈಲ್‌ನಲ್ಲಿ ಅವರು ಮಾತನಾಡಿರುವ ಹಳೆಯ ವಿಡಿಯೋ ಈಗ ಹೊರ ಬಂದಿದೆ. ಶಿಕ್ಷೆಯಾದ ಬಳಿಕ ಪ್ರಜ್ವಲ್ ಅವರನ್ನು ಬೇರೆ ಸೆಲ್‌ಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ವಿಡಿಯೋದಲ್ಲಿ ಕಂಡು ಬರುವ ಸೆಲ್‌ಗೂ ಎರಡು ದಿನಗಳ ಹಿಂದೆ ಮೊಬೈಲ್ ಪತ್ತೆಯಾಗಿದ್ದ ಸೆಲ್‌ಗೂ ವ್ಯತ್ಯಾಸವಿದೆ. ಈ ಎರಡು ಸೆಲ್‌ಗಳನ್ನು ಕಾರಾಗೃಹ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.


ಇನ್ನು ಪ್ರಜ್ವಲ್ ಅವರಿಗೆ ವರ್ಷದ ಹಿಂದೆ ಮೊಬೈಲ್ ಕೊಟ್ಟಿದ್ದ ಸತೀಶ್‌, ಅಪರಾಧ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಸಹ ಆಗಿದ್ದಾನೆ. ಆತನ ಪತ್ತೆಗೆ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹಾಗೂ ಸಿಸಿಬಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಅಧಿಕಾರಿ-ಸಿಬ್ಬಂದಿ ವಿಚಾರಣೆ

ಕೈದಿ ಪ್ರಜ್ವಲ್ ಅವರ ಬಳಿ ಮೊಬೈಲ್ ಪತ್ತೆ ಪ್ರಕರಣ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಭದ್ರತಾ ಲೋಪ ಸಂಬಂಧ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಡಿಐಜಿ (ಕಾರಾಗೃಹ) ಜಿನೇಂದ್ರ ಖಣಗಾವಿ ವಿಚಾರಣೆ ನಡೆಸಿದ್ದಾರೆ.

ಪ್ರಜ್ವಲ್ ಅವರ ಬ್ಯಾರೆಕ್‌ ಭದ್ರತೆಗೆ ನಿಯೋಜನೆಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಮೊಬೈಲ್ ಹೇಗೆ ಬಂತು ಎಂದು ಡಿಐಜಿ ಪ್ರಶ್ನಿಸಿ ವಿವರಣೆ ಪಡೆದಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್ ಸೆಲ್ ವಿಡಿಯೋ ಚಿತ್ರೀಕರಣ:

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ದಾಳಿ ವೇಳೆ ಮಾಜಿ ಸಂಸದ ಪ್ರಜ್ವಲ್ ಸೆಲ್‌ ಶೋಧಿಸುವಾಗ ಸಿಸಿಬಿ ಪೊಲೀಸರು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜ್ವಲ್ ಅವರ ಸೆಲ್‌ನಲ್ಲಿ ಮೊಬೈಲ್ ಪತ್ತೆ ಹಚ್ಚಿ ವಶಕ್ಕೆ ಪಡೆದ ಸನ್ನಿವೇಶವನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದು, ಮುಂದೆ ತನಿಖೆ ವೇಳೆ ಅದನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಿದ್ದಾರೆ ಎನ್ನಲಾಗಿದೆ.