ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅತ್ಯಾಚಾರ ಪ್ರಕರಣದ ಸಜಾ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಮೊಬೈಲ್ ಸಿಮ್ ಕುರಿತ ವಿವರ ನೀಡುವಂತೆ ಏರ್‌ಟೆಲ್ ಕಂಪನಿಗೆ ಪೊಲೀಸರು ಪತ್ರ ಬರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅತ್ಯಾಚಾರ ಪ್ರಕರಣದ ಸಜಾ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಮೊಬೈಲ್ ಸಿಮ್ ಕುರಿತ ವಿವರ ನೀಡುವಂತೆ ಏರ್‌ಟೆಲ್ ಕಂಪನಿಗೆ ಪೊಲೀಸರು ಪತ್ರ ಬರೆದಿದ್ದಾರೆ.ಪ್ರಜ್ವಲ್ ಸೆಲ್‌ನಲ್ಲಿ ಪತ್ತೆಯಾದ ಮೊಬೈಲ್‌ನಲ್ಲಿ ಏರ್‌ಟೆಲ್ ಸಿಮ್ ಕಾರ್ಡ್ ಬಳಸಿರುವುದು ಗೊತ್ತಾಗಿದೆ. ಆದರೆ ಆ ಸಿಮ್ ಯಾರ ಹೆಸರಿನಲ್ಲಿತ್ತು. ಯಾವಾಗಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಟವರ್‌ನಲ್ಲಿ ಆ ಸಿಮ್ ಸಂಪರ್ಕ ಹೊಂದಿತ್ತು ಎಂಬುದು ಸೇರಿ ಇತರೆ ಮಾಹಿತಿ ಕೋರಿ ಏರ್‌ಟೆಲ್ ಕಂಪನಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸೋಮವಾರದೊಳಗೆ ಅಧಿಕೃತ ವಿವರ ಸಿಗಬಹುದು ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಜೈಲಿನಲ್ಲಿ ಏರ್‌ಟೆಲ್ ಕಂಪನಿ ಸಿಮ್‌ಗಳು ಸಕ್ರಿಯವಾಗಿರುವ ಬಗ್ಗೆ ಆ ಕಂಪನಿ ವಿರುದ್ಧ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ತನಿಖೆ ವೇಳೆ ಏರ್‌ಟೆಲ್ ಕಂಪನಿಯನ್ನು ಭಾಧ್ಯಸ್ಥರನ್ನಾಗಿಸುವಂತೆ ಸಿಸಿಬಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಕಾರಾಗೃಹ ಇಲಾಖೆ ಡಿಜಿಪಿ ಹೇಳಿದ್ದರು.ಎಫ್‌ಎಸ್‌ಎಲ್ ವರದಿ ನಿರೀಕ್ಷೆ-ಡಿಸಿಪಿ
ಕಾರಾಗೃಹದಲ್ಲಿ ಜಪ್ತಿಯಾದ ಮೊಬೈಲ್ ಹಾಗೂ ಪೆನ್‌ಡ್ರೈವ್ ಪರಿಶೀಲಿಸಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ನೀಡುವ ವರದಿಗೆ ಕಾಯುತ್ತಿದ್ದೇವೆ ಎಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎ.ನಾರಾಯಣ್ ಹೇಳಿದ್ದಾರೆ.ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೈಲಿನಲ್ಲಿ ಸಿಕ್ಕ ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿ ಪರಿಶೀಲನೆಗೆ ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ. ಮೊಬೈಲ್‌ನಲ್ಲಿದ್ದ ಆ್ಯಪ್‌ಗಳ ಪಾಸ್‌ವರ್ಡ್ ಅನ್ನು ಆರೋಪಿಗಳು ಹೇಳಿಲ್ಲ. ಹೀಗಾಗಿ ಆ ಮೊಬೈಲ್ ಯಾರು ಬಳಸುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ. ಪೆನ್ ಡ್ರೈವ್‌ನಲ್ಲಿ ವಿಡಿಯೋಗಳಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ಆ ಪೆನ್ ಡ್ರೈವ್ ಹಾಗೂ ಮೊಬೈಲ್ ಬಗ್ಗೆ ಎಫ್‌ಎಸ್‌ಎಲ್ ತಜ್ಞರ ವರದಿ ಬಳಿಕ ಗೊತ್ತಾಗಲಿದೆ ಎಂದರು.
ಈ ಪ್ರಕರಣ ಸಂಬಂಧ ಈವರೆಗೆ ಆರೋಪಿಗಳಾದ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರಾಯ್‌ನನ್ನು ವಿಚಾರಣೆ ನಡೆಸಿಲ್ಲ. ನ್ಯಾಯಾಲಯದ ಅನುಮತಿ ಪಡೆದು ನೋಟಿಸ್ ನೀಡಿ ಆರೋಪಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗುತ್ತದೆ. ತಾಂತ್ರಿಕ ಮಾಹಿತಿ ಆಧರಿಸಿ ಸಹ ತನಿಖೆ ನಡೆಯಲಿದೆ ಎಂದರು.ಜೈಲಿನಲ್ಲಿ ರೆಡ್ ಮಿ ಮೊಬೈಲ್‌ನಲ್ಲಿ ಸಿಗ್ನಲ್ ಸಿಗುತ್ತೆ ಎಂದು ಕೈದಿಗಳು ಭಾವಿಸಿದ್ದಾರೆ. ಹೀಗಾಗಿಯೇ ಜೈಲಿನಲ್ಲಿ ಹೆಚ್ಚು ರೆಡ್‌ಮಿ ಮೊಬೈಲ್‌ಗಳು ಬಳಕೆಯಾಗುತ್ತಿವೆ. ಹೀಗಾಗಿ ಭದ್ರತೆ ದೃಷ್ಟಿಯಿಂದ ಆ ಮೊಬೈಲ್ ಕಂಪನಿಗೂ ಪತ್ರ ಬರೆಯುತ್ತೇವೆ ಎಂದು ಡಿಸಿಪಿ ಮಾಹಿತಿ ನೀಡಿದರು. ಪ್ರಜ್ವಲ್ ಮೊಬೈಲ್ ಹಿಂದೆ ಕಾರಾಗೃಹ ಸಿಬ್ಬಂದಿ?
ಪ್ರಜ್ವಲ್ ಮೊಬೈಲ್ ಬಳಕೆ ಹಿಂದೆ ಕಾರಾಗೃಹದ ಸಿಬ್ಬಂದಿ ನೆರಳಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಹಲವು ದಿನಗಳಿಂದ ಪ್ರಜ್ವಲ್ ಮೊಬೈಲ್ ಬಳಸಿದ್ದಾರೆ. ಆದರೆ ತಮ್ಮ ಸೆಲ್‌ನಲ್ಲಿ ಮೊಬೈಲ್ ಇಟ್ಟುಕೊಂಡರೆ ಪೊಲೀಸರು ಅಥವಾ ಕಾರಾಗೃಹ ಅಧಿಕಾರಿಗಳ ಅನಿರೀಕ್ಷಿತ ದಾಳಿಗಳು ನಡೆದಾಗ ಸಿಕ್ಕಿಬೀಳುವ ಆತಂಕ ಇತ್ತು. ಹೀಗಾಗಿ ಹಣದ ಆಮಿಷವೊಡ್ಡಿ ಕಾರಾಗೃಹ ಸಿಬ್ಬಂದಿ ನೆರವು ಪಡೆದು ಪ್ರಜ್ವಲ್ ಮೊಬೈಲ್ ಬಳಸಿರಬಹುದು ಎಂದು ಅನುಮಾನವಿದೆ.
ಈ ಗುಮಾನಿ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರ ಬ್ಯಾರಕ್ ಭದ್ರತೆಗೆ ನಿಯೋಜನೆಗೊಂಡಿದ್ದ ಕಾರಾಗೃಹ ಅಧಿಕಾರಿ-ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.ಮಾನಸಿಕ ಕಾಯಿಲೆಗೆ ಚಿಕಿತ್ಸೆ ಕೊಡಿಸಿ-ನೆಟ್ಟಿಗರ ಆಗ್ರಹಜೈಲಿನಲ್ಲಿ ಅಶ್ಲೀಲ ಚಿತ್ರ ಹಾಗೂ ವಿಡಿಯೋ ವೀಕ್ಷಣೆ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣದ ಕೈದಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮನಶಾಸ್ತ್ರಜ್ಞರಿಂದ ಚಿಕಿತ್ಸೆ ಕೊಡಿಸುವಂತೆ ಸಾಮಾಜಿಕ ವಲಯದಲ್ಲಿ ಆಗ್ರಹ ಕೇಳಿ ಬಂದಿದೆ.
ಜೈಲಿನಲ್ಲಿ ಮಾಜಿ ಸಂಸದರ ಸೆಲ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್ ಹಾಗೂ ಅಶ್ಲೀಲ ಭಾವಚಿತ್ರಗಳು ಪತ್ತೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಮಾಜಿ ಸಂಸದನ ಮಾನಸಿಕ ಸ್ಥಿತಿ ಬಗ್ಗೆ ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲೂ ಅಶ್ಲೀಲ ವಿಡಿಯೋ ಹಾಗೂ ಭಾವಚಿತ್ರ ವೀಕ್ಷಿಸುವ ಪ್ರಜ್ವಲ್ ಅವರಿಗೆ ಮಾನಸಿಕ ಸಮಸ್ಯೆ ಇದೆ. ಹೀಗಾಗಿ ಅವರಿಗೆ ತಜ್ಞರಿಂದ ಸರ್ಕಾರ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.