ಬೆಂಗಳೂರು : ನಟಿಯೊಬ್ಬರ ಸಹೋದರಿ ಮೇಲೆ ಅತ್ಯಾ*ರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಲಘಟ್ಟಪುರ ನಿವಾಸಿ ರಾಘವೇಂದ್ರ (35) ಬಂಧಿತ. ಈತನ ವಿರುದ್ಧ ಸ್ಯಾಂಡಲ್‌ವುಡ್‌ ನಟಿ ಸಹೋದರಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಮತ್ತೊಂದೆಡೆ ಆರೋಪಿ ರಾಘವೇಂದ್ರ ಕೂಡ ಸಂತ್ರಸ್ತೆ ವಿರುದ್ಧ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ತಲಘಟ್ಟಪುರ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾನೆ.

ರಾಘವೇಂದ್ರ ಮತ್ತು ಸಂತ್ರಸ್ತೆ ಈ ಹಿಂದೆ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಜತೆಗೆ ರಾಘವೇಂದ್ರ ಜಿಮ್‌ ತರಬೇತುದಾರ ಕೂಡ ಆಗಿದ್ದಾನೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಮದುವೆಯಾಗುವುದಾಗಿ ನಂಬಿಸಿ ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಆದರೆ ನಂತರದ ದಿನಗಳಲ್ಲಿ ಆರೋಪಿಗೆ ಮದುವೆಯಾಗಿ ವಿಚ್ಛೇದನವಾಗಿದ್ದು, ಮಗು ಸಹ ಇದೆ ಎಂಬ ವಿಚಾರ ಯುವತಿಗೆ ಗೊತ್ತಾಗಿದೆ. ಆಗ ಆತನಿಂದ ದೂರವಾಗಲು ಪ್ರಯತ್ನಿಸಿದಾಗ ತಾನು ಹೇಳಿದಂತೆ ಕೇಳಬೇಕು ಇಲ್ಲದಿದ್ದರೇ ನಿನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.


ಆರೋಪಿಯ ಬೆದರಿಕೆಯಿಂದ ಹೆದರಿದ್ದ ಯುವತಿ ನಟಿಯಾಗಿರುವ ತನ್ನ ಸಹೋದರಿಯ ಸಹಾಯದಿಂದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ಬಂಧಿಸಿ ಆತನ ಮೊಬೈಲ್‌ ಜಪ್ತಿ ಮಾಡಿ ಅಶ್ಲೀಲ ಫೋಟೋಗಳನ್ನು ಡಿಲೀಟ್ ಮಾಡಿಸಿದ್ದಾರೆ.

2ನೇ ಬಾರಿ ಅತ್ಯಾ*ರ:

ಕೆಲ ದಿನಗಳ ನಂತರ ಆರೋಪಿಯು ತಾನು ಕೈ ಕೊಯ್ದುಕೊಂಡ ರೀತಿಯ ಫೋಟೋ ಹಾಗೂ ಇಬ್ಬರ ಖಾಸಗಿ ಫೋಟೋವನ್ನು ಯುವತಿಗೆ ಕಳುಹಿಸಿ, ತಾನು ಹೇಳಿದ ಜಾಗಕ್ಕೆ ಬರಬೇಕೆಂದು ತಾಕೀತು ಮಾಡಿದ್ದ. ಅದರಂತೆ ಯುವತಿ ಆತ ಸೂಚಿಸಿದ್ದ ಜಾಗಕ್ಕೆ ಹೋಗಿದ್ದಳು. ಅಲ್ಲಿ ಹೋದಾಗ ಆತನ ಕೈಗೆ ಏನು ಆಗಿರಲಿಲ್ಲ. ಕೈಗೆ ಟೊಮ್ಯಾಟೋ ಸಾಸ್ ಹಾಕಿಕೊಂಡಿದ್ದ ಎಂಬುದು ತಿಳಿದಿತ್ತು. ಅಲ್ಲಿಂದ ಯುವತಿ ವಾಪಸಾಗಲು ಯತ್ನಿಸಿದಾಗ ಖಾಸಗಿ ಫೋಟೋ ತೋರಿಸಿ ಬೆದರಿಕೆ ಹಾಕಿ ಮತ್ತೊಮ್ಮೆ ಅತ್ಯಾ*ರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಆರೋಪಿಯಿಂದ ಪ್ರತಿ ದೂರು

ಈ ಮಧ್ಯೆ ಆರೋಪಿ ರಾಘವೇಂದ್ರ, ನಾನು ಆಕೆಯನ್ನುನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೆ. ಈ ಮಧ್ಯೆ ಬೇರೊಬ್ಬ ಯುವಕನ ಜತೆ ಓಡಾಡುತ್ತಿದ್ದಳು. ಹೀಗಾಗಿ ಆಕೆಯಿಂದ ಅಂತರ ಕಾಯ್ದುಕೊಂಡಿದ್ದೆ. ಅಲ್ಲದೆ, ನನಗೂ ಮತ್ತು ನನ್ನ ತಾಯಿಗೂ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದು, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು. ಇದೀಗ ಅದನ್ನು ಪ್ರಶ್ನಿಸಿದಕ್ಕೆ ಅತ್ಯಾ*ರ ಆರೋಪದಡಿ ದೂರು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾನೆ.