ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ನೂರಾರು ಜನರಿಗೆ ಲಕ್ಷಾಂತರ ರು ವಂಚಿಸಿದ್ದ ದಂಪತಿಯನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಜಾಲದ ಕಿರಣ್ ಕುಮಾರ್‌ ಹಾಗೂ ಆರತಿ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಇನ್ನೂ ಕೆಲವು ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ದೇವನಹಳ್ಳಿ ತಾಲೂಕು ಕಚೇರಿಯ ಖಾಸಗಿ ಸಹಾಯಕ ಸರ್ವೇಯರ್ ಎಂ.ಶಂಕರ್ ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಗಾಳ:

ಚಿಕ್ಕಜಾಲದಲ್ಲಿ ‘ಕಾಳಿಕಾ ಎಂಟರ್ ಪ್ರೈಸಸ್’ ಹೆಸರಿನ ಸಂಸ್ಥೆಯನ್ನು ಕಿರಣ್ ಹಾಗೂ ಆರತಿ ಸ್ಥಾಪಿಸಿದ್ದರು. ತಮ್ಮ ಕಂಪನಿ ಮೂಲಕ ಮನೆಯಲ್ಲೇ ಕುಳಿತು ಲಕ್ಷ ಲಕ್ಷ ಸಂಪಾದಿಸಬಹುದು ಎಂದು ದಂಪತಿ ಜಾಹೀರಾತು ಪ್ರಕಟಿಸಿದ್ದರು. ಅಲ್ಲದೆ ಈ ಬಗ್ಗೆ ಚಿಕ್ಕಜಾಲ ಹಾಗೂ ದೇವನಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಮನೆ ಮನೆಗಳಿಗೆ ಕರಪತ್ರಗಳನ್ನು ದಂಪತಿ ಹಂಚಿದ್ದರು. ಇನ್‌ಸ್ಟಾಗ್ರಾಂ, ಫೇಸ್ ಬುಕ್ ಹಾಗೂ ವಾಟ್ಸಪ್ ಮೂಲಕ ಸಹ ಜನರಿಗೆ ಆರೋಪಿಗಳು ಗಾಳ ಹಾಕಿದ್ದರು. ಮನೆಯಲ್ಲಿ ಅಗರಬತ್ತಿ, ಡ್ರೈಫ್ರೂಟ್ಸ್ ಪ್ಯಾಕಿಂಗ್ ಹೀಗೆ ತರಹೇವಾರಿ ಬ್ಯುಸಿನೆಸ್ ಬಗ್ಗೆ ಕಿರಣ್ ಗ್ಯಾಂಗ್ ಪ್ರಚಾರ ಮಾಡಿತ್ತು. ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಶೇ.30 ರಿಂದ 40 ರಷ್ಟು ಲಾಭ ಕೊಡುವುದಾಗಿ ಆರೋಪಿಗಳ ಹೇಳಿದ್ದರು. ಈ ನಾಜೂಕಿನ ಮಾತಿಗೆ ಮರುಳಾಗಿ ನೂರಾರು ಜನರು ಹಣ ಹೂಡಿಕೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಪ್ರಾರಂಭದಲ್ಲಿ ಲಾಭ ಹಂಚಿಕೆ ಮಾಡಿ ಜನರ ವಿಶ್ವಾಸವನ್ನು ಕಿರಣ್ ಗ್ಯಾಂಗ್ ಗಳಿಸಿತ್ತು. ಹೀಗಾಗಿ ಹೂಡಿಕೆ ಮೊತ್ತವನ್ನು ನಾಗರಿಕರು ಹೆಚ್ಚಿಸಿದ್ದರು. ಹೀಗೆ ಹೆಚ್ಚು ಹಣ ಸಂಪಾದಿಸಿದ ಬಳಿಕ ಆರೋಪಿಗಳು ವಂಚಿಸಿದ್ದರು. ಅದೇ ರೀತಿ ಈ ಕಂಪನಿಯಲ್ಲಿ ತಮ್ಮ ಪತ್ನಿ ಹೆಸರಿನಲ್ಲಿ ಹಣ ಹೂಡಿಕೆ ಮಾಡಿ ದೇವನಹಳ್ಳಿ ತಾಲೂಕು ಕಚೇರಿಯ ಸಹಾಯಕ ಸರ್ವೇಯರ್ ಮೋಸ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಐಡಿ ತನಿಖೆಗೆ ಹಸ್ತಾಂತರ?

ಚಿಕ್ಕಜಾಲದ ಕಾಳಿಕಾ ಕಂಪನಿ ವಿರುದ್ಧದ ಬಹುಕೋಟಿ ವಂಚನೆ ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಗೃಹ ಇಲಾಖೆ ವಹಿಸುವ ಸಾಧ್ಯತೆಗಳಿವೆ. ಆರ್ಥಿಕ ವಂಚನೆ ಮೊತ್ತವು ಹೆಚ್ಚಾಗಿದೆ. ಹೀಗಾಗಿ ಸುದೀರ್ಘ ತನಿಖೆಗೆ ಪ್ರಕರಣವನ್ನು ಸಿಐಡಿಗೆ ಡಿಜಿಪಿ ಆದೇಶಿಸಬಹುದು ಎಂದು ತಿಳಿದು ಬಂದಿದೆ.