ಕಳೆದ ಹಣಕಾಸು ವರ್ಷದಲ್ಲಿ ವಿದೇಶಿ ಬಂಡವಾಳ ಹೂಡಿಕೆ(ಎಫ್‌ಡಿಐ) ಆಕರ್ಷಿಸುವ ವಿಚಾರದಲ್ಲಿ ಕರ್ನಾಟಕವು ನೆರೆಯ ಮಹಾರಾಷ್ಟ್ರವನ್ನು ಹಿಂದಿಕ್ಕಿದೆ. ಟೆಕ್ ಹೂಡಿಕೆದಾರರು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು ಸಿಲಿಕಾನ್ ವ್ಯಾಲಿಯಲ್ಲಿ ಹೂಡಿಕೆಗೆ ಹೆಚ್ಚಿನ ಒಲವು ತೋರಿದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಎಫ್‌ಡಿಐ ಹರಿವು ಸರಿಸುಮಾರು ದ್ವಿಗುಣ
ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ವಿದೇಶಿ ಬಂಡವಾಳ ಹೂಡಿಕೆ(ಎಫ್‌ಡಿಐ) ಆಕರ್ಷಿಸುವ ವಿಚಾರದಲ್ಲಿ ಕರ್ನಾಟಕವು ನೆರೆಯ ಮಹಾರಾಷ್ಟ್ರವನ್ನು ಹಿಂದಿಕ್ಕಿದೆ. ಟೆಕ್ ಹೂಡಿಕೆದಾರರು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು ಸಿಲಿಕಾನ್ ವ್ಯಾಲಿಯಲ್ಲಿ ಹೂಡಿಕೆಗೆ ಹೆಚ್ಚಿನ ಒಲವು ತೋರಿದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಎಫ್‌ಡಿಐ ಹರಿವು ಸರಿಸುಮಾರು ದ್ವಿಗುಣಗೊಂಡಿದ್ದು, 1.25 ಲಕ್ಷ ಕೋಟಿ ರು. ತಲುಪಿದೆ.
ಈವರೆಗೆ ಅತೀ ಹೆಚ್ಚು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದ ಮಹಾರಾಷ್ಟ್ರದಲ್ಲಿ ಮಾತ್ರ ಇದೇ ಅವಧಿಯಲ್ಲಿ ಎಫ್‌ಡಿಐ ಹರಿವು ಶೇ.6ರಷ್ಟು ಕುಸಿತ ಕಂಡಿದೆ.
2025ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು 62 ಸಾವಿರ ಕೋಟಿ ರು.ನಷ್ಟು ಹೂಡಿಕೆ ಆಕರ್ಷಿಸಿದ್ದು, 2026ನೇ ಹಣಕಾಸು ವರ್ಷದಲ್ಲಿ ಈ ಪ್ರಮಾಣ ಶೇ.95ರಷ್ಟು ಹೆಚ್ಚಾಗಿದೆ.
ಕರ್ನಾಟಕದ ನಂತರ ಹರ್ಯಾಣ, ತಮಿಳುನಾಡು, ರಾಜಸ್ಥಾನ, ಉತ್ತರಪ್ರದೇಶ, ಆಂಧ್ರಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಾಗಿದ್ದು, ತೆಲಂಗಾಣದಲ್ಲಿ ಮಾತ್ರ ಎಫ್‌ಡಿಐ ಹರಿವು ಶೇ.25ರಷ್ಟು ಕುಸಿತಗೊಂಡಿದೆ. ಸಂಸತ್ತಿನಲ್ಲಿ ಸರ್ಕಾರ ಹಂಚಿಕೊಂಡ ಅಂಕಿ-ಅಂಶಗಳಿಂದ ಈ ವಿಚಾರ ಬಹಿರಂಗವಾಗಿದೆ.
ಗುಜರಾತ್ ಯಥಾ ಸ್ಥಿತಿ ಕಾಯ್ದುಕೊಂಡಿದ್ದು, 55 ಸಾವಿರ ಕೋಟಿ ರು. ಹೂಡಿಕೆಯಾಗಿದೆ. ಅತಿಹೆಚ್ಚು ಹೂಡಿಕೆ ಟೆಕ್ ಕಂಪನಿಗಳಲ್ಲೇ ಆಗಿದ್ದು, ಅದರಲ್ಲೂ ಮುಖ್ಯವಾಗಿ ಡೇಟಾ ಸೆಂಟರ್‌ಗಳು ಹಾಗೂ ಜಿಸಿಸಿಗಳಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ.
ಕ್ಷೇತ್ರವಾರು ವಿವರ:
ಸಾಫ್ಟ್‌ವೇರ್, ಹಾರ್ಡ್‌ವೇರ್ 134 ಸಾವಿರ ಕೋಟಿ, ಬ್ಯಾಂಕಿಂಗ್, ಹಣಕಾಸು, ಇನ್ಶೂರೆನ್ಸ್ ಮತ್ತಿತರ ಕ್ಷೇತ್ರಗಳನ್ನೊಳಗೊಂಡ ಸೇವಾ ಕ್ಷೇತ್ರ 96 ಸಾವಿರ ಕೋಟಿ ರು. ಹೂಡಿಕೆಯಾಗಿದೆ. ದೇಶಕ್ಕೆ ಹರಿದು ಬಂದ ಎಫ್‌ಡಿಐನ ಶೇ.40ರಷ್ಟು ಭಾಗ ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ.
ಇನ್ನು ಆಹಾರ ಸಂಸ್ಕರಣೆ ಉದ್ದಿಮೆಯಲ್ಲಿ ಮೂರು ಪಟ್ಟು ಜಾಸ್ತಿ ಎಫ್‌ಡಿಐ ಹರಿದುಬಂದಿದೆ. 28 ಸಾವಿರ ಕೋಟಿ ರು.ನಷ್ಟು ಹೂಡಿಕೆ ಈ ಕ್ಷೇತ್ರದಲ್ಲಾಗಿದೆ. ಆಟೋಮೊಬೈಲ್ (24 ಸಾವಿರ ಕೋಟಿ), ಔಷಧ ಕ್ಷೇತ್ರದಲ್ಲಿ 18 ಸಾವಿರ ಕೋಟಿ ಮತ್ತು ಶಿಕ್ಷಣ ಕ್ಷೇತ್ರ 12 ಸಾವಿರ ಕೋಟಿ ರು. ಹೂಡಿಕೆ ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಸಾರಿಗೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ.70ರಷ್ಟು ಕುಸಿತ ಕಂಡು 3,600 ಕೋಟಿ ರು.ಗೆ ಇಳಿದಿದೆ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಎಫ್‌ಡಿಐ ಅರ್ಧದಷ್ಟು ಕುಸಿದು, 10 ಸಾವಿರ ಕೋಟಿ ರು.ಗೆ ಇಳಿಕೆಯಾಗಿದೆ.
ರಾಜ್ಯದಿಂದ ಹೂಡಿಕೆ ಆಕರ್ಷಣೆ
- 2025ರ ವಿತ್ತೀಯ ವರ್ಷದಲ್ಲಿ ಕರ್ನಾಟಕದಿಂದ 62 ಸಾವಿರ ಕೋಟಿ ರು.ನಷ್ಟು ಹೂಡಿಕೆ ಆಕರ್ಷಣೆ
- , 2026ನೇ ಹಣಕಾಸು ವರ್ಷದಲ್ಲಿ ಈ ಪ್ರಮಾಣ ಶೇ.95ರಷ್ಟು ಹೆಚ್ಚಳ. ₹125 ಲಕ್ಷ ಕೋಟಿ ಹರಿವು
- ಹರ್ಯಾಣ, ತಮಿಳುನಾಡು, ರಾಜಸ್ಥಾನ, ಉ.ಪ್ರ., ಆಂಧ್ರ, ಪಂಜಾಬ್‌ನಲ್ಲಿ ಹೂಡಿಕೆ ಏರಿಕೆ
- ಕರ್ನಾಟಕದಲ್ಲಿ ಏರಿಕೆ ಆದರೆ ಮಹಾರಾಷ್ಟ್ರದಲ್ಲಿ ಶೇ.6, ತೆಲಂಗಾಣದಲ್ಲಿ ಶೇ.25ರಷ್ಟು ಕುಸಿತ
- ಗುಜರಾತ್ ಯಥಾ ಸ್ಥಿತಿ ಕಾಯ್ದುಕೊಂಡಿದ್ದು, 55 ಸಾವಿರ ಕೋಟಿ ರು.ನಷ್ಟು ವಿದೇಶಿ ಹೂಡಿಕೆ
- ಕರ್ನಾಟಕದ ಹೂಡಿಕೆ ಹೆಚ್ಚಳಕ್ಕೆ ಸಾಫ್ಟ್‌ವೇರ್, ಹಾರ್ಡ್‌ವೇರ್, ಉದ್ದಿಮೆ ವಲಯ ಕಾರಣ


