ಬೆಂಗಳೂರು : ರಾಜ್ಯದಲ್ಲಿ ‘ಅನಿವಾಸಿ ಭಾರತೀಯ ವ್ಯವಹಾರಗಳ ಇಲಾಖೆ’ (ಎನ್‌ಆರ್‌ಐ) ಬದಲಿಗೆ ಹೂಡಿಕೆ ಸೆಳೆಯುವ ಹಾಗೂ ಹೂಡಿಕೆದಾರರಿಗೆ ನೆರವಾಗುವ ಸಲುವಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಅಲ್ಲದೆ, ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲು ಏಕಗವಾಕ್ಷಿ ಪದ್ಧತಿಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನ ಮಾಡಲು ಸಹ ತೀರ್ಮಾನಿಸಿದೆ. ಕಳೆದ ಸಚಿವ ಸಂಪುಟ ಸಭೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಎನ್‌ಆರ್‌ಐ ಇಲಾಖೆ ಸ್ಥಾಪನೆ ಬಗ್ಗೆ ಪ್ರಸ್ತಾವನೆ ಮಂಡಿಸಲಾಗಿತ್ತು.
ಬಂಡವಾಳ ಸೆಳೆಯಲು ಈ ಕ್ರಮ:
ಆದರೆ ಸಭೆಯಲ್ಲಿ ಎನ್ಆರ್‌ಐ ಬದಲಿಗೆ ಎಲ್ಲಾ ಹೂಡಿಕೆದಾರರನ್ನು ಸೆಳೆಯಲು ಹಾಗೂ ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎಂಬ ಚರ್ಚೆಯಾಯಿತು. ಈ ಹಿನ್ನೆಲೆಯಲ್ಲಿ ಎನ್‌ಆರ್‌ಐ ಖಾತೆ ಬದಲಿಗೆ ವಿದೇಶಿ ಹೂಡಿಕೆದಾರರು ಹಾಗೂ ಬೃಹತ್ ಹೂಡಿಕೆದಾರರಿಗೆ ನೆರವಾಗಲು ಪ್ರತ್ಯೇಕ ಸಚಿವಾಲಯ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.
ವಿವಿಧ ಇಲಾಖೆಗಳ ಪ್ರತಿನಿಧಿಗಳು
ಸಚಿವಾಲಯದಲ್ಲಿ ಬೃಹತ್ ಕೈಗಾರಿಕೆ, ಐಟಿ-ಬಿಟಿ, ನಗರಾಭಿವೃದ್ಧಿ ಸೇರಿ ವಿವಿಧ ಇಲಾಖೆಗಳ ಪ್ರತಿನಿಧಿಗಳು ಇರಲಿದ್ದಾರೆ. ಹೂಡಿಕೆದಾರರನ್ನು ಗೌರವದಿಂದ ನಡೆದುಕೊಳ್ಳುವುದು. ಅವರಿಗೆ ಸೂಕ್ತ ಸಮಯ ಕಾಯ್ದಿರಿಸುವುದು. ಹೂಡಿಕೆಗೆ ಸಮಸ್ಯೆ ಆಗದಂತೆ ಈಸ್ ಆಫ್ ಡುಯಿಂಗ್ ಬ್ಯುಸಿನೆಸ್‌ಗೆ ನೆರವಾಗಲು ಸಚಿವಾಲಯ ಕೆಲಸ ಮಾಡಲಿದೆ.
