ಹೂಡಿಕೆಗಳನ್ನು ಗಮನಿಸಿದರೆ, ಉದ್ಯೋಗ ಸೃಷ್ಟಿಯ ಪ್ರಮುಖ ಯೋಜನೆಗಳು ಬೆಂಗಳೂರು ಮತ್ತು ಸುತ್ತಮುತ್ತಲಿನ ಭಾಗಗಳಿಗೆ ಸೀಮಿತವಾಗಿವೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಿಗೆ ಹಂಚಿಕೆಯಾದ ಯೋಜನೆಗಳಲ್ಲಿ ಉದ್ಯೋಗಾವಕಾಶಗಳು ಅತ್ಯಂತ ಕನಿಷ್ಠ ಹಾಗೂ ಶೂನ್ಯವಾಗಿವೆ.

ಹುಬ್ಬಳ್ಳಿ:

ರಾಜ್ಯ ಉನ್ನತ ಮಟ್ಟದ ಅನುಮೋದನೆ ನೀಡಿಕೆ ಸಮಿತಿಯು ರಾಜ್ಯದ 11 ಜಿಲ್ಲೆಗಳಲ್ಲಿ ₹18,430 ಕೋಟಿ ಮೊತ್ತದ ಹೂಡಿಕೆಗೆ ಅನುಮೋದನೆ ನೀಡಿದೆ. ಇದು ರಾಜ್ಯದ ಅಭಿವೃದ್ಧಿಯ ಹಾದಿಯ ಬಗ್ಗೆ ಆತಂಕ ಮೂಡಿಸಿದೆ ಹೊರತು, ಯಾವುದೇ ಹೊಸ ಆಶಯ ಮೂಡಿಸಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 11 ಹೊಸ ಹಾಗೂ 6 ಹೆಚ್ಚುವರಿ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದಿಸಲಾಗಿದೆ. ಈ ಹೂಡಿಕೆಗಳನ್ನು ಗಮನಿಸಿದರೆ, ಉದ್ಯೋಗ ಸೃಷ್ಟಿಯ ಪ್ರಮುಖ ಯೋಜನೆಗಳು ಬೆಂಗಳೂರು ಮತ್ತು ಸುತ್ತಮುತ್ತಲಿನ ಭಾಗಗಳಿಗೆ ಸೀಮಿತವಾಗಿವೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಿಗೆ ಹಂಚಿಕೆಯಾದ ಯೋಜನೆಗಳಲ್ಲಿ ಉದ್ಯೋಗಾವಕಾಶಗಳು ಅತ್ಯಂತ ಕನಿಷ್ಠ ಹಾಗೂ ಶೂನ್ಯವಾಗಿವೆ. ಹೀಗಾಗಿ ಇಷ್ಟೊಂದು ಪ್ರಮಾಣದ ಹೂಡಿಕೆ ಹಾಗೂ ಯುವಕರಿಗೆ ಉದ್ಯೋಗ ನೀಡದ ಯೋಜನೆಯಿಂದ ರಾಜ್ಯಕ್ಕೆ ಆಗುವ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ಉದ್ಯೋಗಗಳ ಅತಿಯಾದ ಕೇಂದ್ರೀಕರಣದಿಂದ ಬೆಂಗಳೂರಿನಲ್ಲಿ ಈಗಾಗಲೆ ಕುಡಿಯುವ ನೀರಿನ ಅಭಾವ, ಸಂಚಾರ ದಟ್ಟಣೆ ಮತ್ತು ಮೂಲಸೌಕರ್ಯಗಳ ಕೊರತೆ ಎದುರಾಗಿದೆ. ಈ ಅಸಮತೋಲಿತ ಧೋರಣೆಯು ಬೆಂಗಳೂರಿನ ಮೇಲಿನ ಒತ್ತಡ ಹೆಚ್ಚಿಸಲಿದೆ. ಅಭಿವೃದ್ಧಿಯು ರಾಜ್ಯದ ಮೂಲೆ ಮೂಲೆಗೂ ತಲುಪಬೇಕು ಮತ್ತು ಪ್ರತಿ ಹೂಡಿಕೆಯು ಸ್ಥಳೀಯರಿಗೆ ಉದ್ಯೋಗ ಖಾತ್ರಿ ನೀಡುವಂತಿರಬೇಕು. ಹೀಗಾಗಿ ಸರ್ಕಾರ ತನ್ನ ಕೈಗಾರಿಕಾ ನೀತಿಯನ್ನು ತಕ್ಷಣ ಮರುಪರಿಶೀಲಿಸಬೇಕು. ಹಿಂದುಳಿದ ಪ್ರದೇಶಗಳಲ್ಲಿ ಹೂಡಿಕೆ ಮಾಡುವ ಸಂಸ್ಥೆಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ಅವು ಸೃಷ್ಟಿಸುವ ಉದ್ಯೋಗಗಳ ಆಧಾರದ ಮೇಲೆ ನೀಡಬೇಕು. ರಾಜ್ಯದ ದೀರ್ಘಕಾಲದ ಸ್ಥಿರತೆ ಮತ್ತು ಪ್ರಗತಿಗೆ ಸಮಗ್ರ ಹಾಗೂ ಸಮತೋಲಿತ ಅಭಿವೃದ್ಧಿ ಅನಿವಾರ್ಯವಾಗಿದೆ ಎಂದು ಆಗ್ರಹಿಸಿದ್ದಾರೆ.

14ಎಚ್‌ಯುಬಿ30

ಅರವಿಂದ ಬೆಲ್ಲದ.