ಕನ್ನಡಪ್ರಭ ವಾರ್ತೆ ಬೆಂಗಳೂರು
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ ಜನರಿಗೆ ಟೋಪಿ ಹಾಕಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಪಳನಿ, ಮಧು ಹಾಗೂ ನಾಗೇಶ್ ಬಂಧಿತರಾಗಿದ್ದು, ಆರೋಪಿಗಳಿಂದ 30 ಲಕ್ಷ ರು. ಹಣ ಜಪ್ತಿಯಾಗಿದೆ. ಈ ಕೃತ್ಯದ ಪ್ರಮುಖ ಆರೋಪಿ ರಾಜೇಶ್ ಕಾಮತ್ ಅವರು ಬಂಧನ ಭೀತಿಯಿಂದ ನ್ಯಾಯಾಯಲದಲ್ಲಿ ಜಾಮೀನು ಪಡೆದಿದ್ದಾರೆ. ಷೇರು ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭದಾಸೆ ತೋರಿಸಿ ಆರೋಪಿಗಳು ವಂಚಿಸಿದ್ದರು ಎನ್ನಲಾಗಿದೆ.
ಕ್ರಿಸ್ಟಲ್ ಎಐ ರೋಬೊಟ್ ಟ್ರೇಡಿಂಗ್ ಹೆಸರಿನ ಕಂಪನಿಯನ್ನು ರಾಜೇಶ್ ಕಾಮತ್ ಸ್ಥಾಪಿಸಿದ್ದು, ದುಬೈ ಹಾಗೂ ಕೆಂಗೇರಿಯಲ್ಲಿ ಆ ಕಂಪನಿಯ ಕಚೇರಿಯನ್ನು ಆತ ತೆರೆದಿದ್ದ. ಈ ಕಂಪನಿಯು ಷೇರು ಮಾರುಕಟ್ಟೆ ಬಗ್ಗೆ ಸಲಹೆ ನೀಡುವುದಾಗಿ ಹೇಳಿಕೊಂಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳು ಪ್ರಚಾರ ಮಾಡಿದ್ದರು. ಹೀಗೆ ಜನರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂದು ನಂಬಿಸಿ ಹಣ ಪಡೆದು ರಾಜೇಶ್ ತಂಡ ವಂಚಿಸಿತ್ತು. ಇವರಿಂದ ಸುಮಾರು 200ಕ್ಕೂ ಹೆಚ್ಚಿನ ಜನರು ಕೋಟ್ಯಂತರ ರು ಹಣ ಕಳೆದುಕೊಂಡಿದ್ದಾರೆ. ಕೊನೆಗೆ ಸಿಸಿಬಿಗೆ ಸಂತ್ರಸ್ತರು ದೂರು ನೀಡಿದ್ದರು. ಕೂಡಲೇ ತನಿಖೆಗಿಳಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.