ಕನ್ನಡಪ್ರಭ ವಾರ್ತೆ ಬೆಳಗಾವಿ

ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಕೊಲೆ, ಅಪಘಾತ, ದರೋಡೆ, ಸೈಬರ್ ಅಪರಾಧ, ಲೈಂಗಿಕ ದೌರ್ಜನ್ಯ, ಮಾದಕ ವಸ್ತುಗಳ ಜಾಲ ಸೇರಿದಂತೆ ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗುತ್ತವೆ. ಇಂತಹ ಪ್ರಕರಣಗಳಲ್ಲಿ ಘಟನಾ ಸ್ಥಳದಿಂದಲೇ ಗುಣಮಟ್ಟದ ಸಾಕ್ಷ್ಯ ಸಂಗ್ರಹ ಸಾಧ್ಯವಾದರೇ ತನಿಖೆ ವೇಗವಾಗಿ ಪೂರ್ಣಗೊಳ್ಳವ ಜೊತೆಗೆ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣವೂ ಹೆಚ್ಚುವ ನಿರೀಕ್ಷೆಯಿದೆ.

ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು ಘಟನೆ ನಡೆದ ತಕ್ಷಣ ಸ್ಥಳಕ್ಕೆ ತೆರಳಿ, ನಿಗದಿತ ಕಾರ್ಯವಿಧಾನಗಳ ಪ್ರಕಾರ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಬಹುದು. ಇದರಿಂದ ಸಾಕ್ಷ್ಯಗಳು ಕಲುಷಿತವಾಗುವ ಸಾಧ್ಯತೆ ಕಡಿಮೆಯಾಗುವುದರ ಜೊತೆಗೆ ನ್ಯಾಯಾಲಯದಲ್ಲಿ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಪರಿಣಾಮಕಾರಿಯಾಗಿ ಮಂಡಿಸಲು ಅನುಕೂಲವಾಗಲಿದೆ.

ಮೊಬೈಲ್ ಫೋರೆನ್ಸಿಕ್ ವ್ಯಾನ್ ಕಾರ್ಯಾರಂಭ:

ಅಪರಾಧ ನಡೆದ ನಂತರ ಆರೋಪಿಗಳನ್ನು ಬಂಧಿಸುವುದು ಮಾತ್ರ ತನಿಖೆಯ ಯಶಸ್ಸಲ್ಲ. ನ್ಯಾಯಾಲಯದಲ್ಲಿ ವೈಜ್ಞಾನಿಕ ಸಾಕ್ಷ್ಯಾಧಾರಗಳ ಮೂಲಕ ಅಪರಾಧವನ್ನು ಸಾಬೀತುಪಡಿಸುವುದು ಅತ್ಯಂತ ಮಹತ್ವದ ಹಂತವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಕೈಗೊಂಡಿರುವ ಮಹತ್ವದ ಹೆಜ್ಜೆಯಾಗಿ ಮೊಬೈಲ್ ಫೋರೆನ್ಸಿಕ್ ವ್ಯಾನ್ ಹೊರಹೊಮ್ಮಿದೆ. ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದ ಸಹಯೋಗದಲ್ಲಿ ಎಲ್ಲ ಜಿಲ್ಲೆಗಳಿಗೂ ಈ ವಾಹನವನ್ನು ಒದಗಿಸಲಾಗಿದ್ದು, ಬೆಳಗಾವಿಯಲ್ಲೂ ಇದರ ಕಾರ್ಯಾರಂಭವಾಗಿದೆ. ಹಿಂದೆ ಅಪರಾಧ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಸಾಕಷ್ಟು ಸಮಯ ಬೇಕಾಗುತ್ತಿತ್ತು. ಈ ಮಧ್ಯ ಸಾಕ್ಷ್ಯಗಳು ಕಲುಷಿತವಾಗುವ ಅಥವಾ ನಾಶವಾಗುವ ಸಾಧ್ಯತೆ ಇತ್ತು. ಈಗ ಮೊಬೈಲ್ ಫೋರೆನ್ಸಿಕ್ ವ್ಯಾನ್ ಮೂಲಕ ಘಟನಾ ಸ್ಥಳದಲ್ಲಿಯೇ ವೈಜ್ಞಾನಿಕ ವಿಧಾನದಲ್ಲಿ ಸಾಕ್ಷ್ಯ ಸಂಗ್ರಹಿಸಲು ಸಾಧ್ಯವಾಗಲಿದೆ. ಇದರಿಂದ ತನಿಖೆಯ ಗುಣಮಟ್ಟ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.


-----

ಬಾಕ್ಸ್...

ವಾಹನದಲ್ಲಿರುವ ವಿಶೇಷ ಸೌಲಭ್ಯಗಳು

-ಅತ್ಯಾಧುನಿಕ ವಾಹನದಲ್ಲಿ ಒಟ್ಟು 16 ವಿಶೇಷ ಕಿಟ್‌ಗಳು ಅಳವಡಿಸಲಾಗಿವೆ. ಕ್ರೈಂ ಸೀನ್ ಪ್ರೊಟೆಕ್ಷನ್ ಕಿಟ್, ರಕ್ತ ಮತ್ತು ವೀರ್ಯ ಮಾದರಿ ಸಂಗ್ರಹ ಕಿಟ್, ಡಿಎನ್‌ಎ ಹಾಗೂ ಲೈಂಗಿಕ ದೌರ್ಜನ್ಯ ಸಾಕ್ಷ್ಯ ಕಿಟ್, ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಪರಿಶೀಲನಾ ಕಿಟ್, ಮಾದಕ ವಸ್ತು ಪತ್ತೆ ಕಿಟ್, ಡಿಜಿಟಲ್ ಸಾಕ್ಷ್ಯ ಸಂಗ್ರಹ ವ್ಯವಸ್ಥೆ, ಅಗ್ನಿ ಅವಘಡ ತನಿಖಾ ಕಿಟ್, ಸ್ಟೀರಿಯೊ ಮೈಕ್ರೋಸ್ಕೋಪ್ ಹಾಗೂ ಬೆರಳಚ್ಚು-ಪಾದಚ್ಚು ಸಂಗ್ರಹ ಕಿಟ್ ಸೇರಿದಂತೆ ವಿವಿಧ ವೈಜ್ಞಾನಿಕ ಸಾಧನಗಳಿವೆ.

-ಹೈ ಇಂಟೆನ್ಸಿಟಿ ಲೈಟ್ ಸೋರ್ಸ್, ಲ್ಯಾಪ್‌ಟಾಪ್, ಪ್ರಿಂಟರ್, ರೆಫ್ರಿಜರೇಟರ್, ಜಿಪಿಎಸ್ ಹೊಂದಿರುವ ಬಾಡಿ-ವೋರ್ನ್ ಕ್ಯಾಮೆರಾ, ಜನರೇಟರ್, ಯುಪಿಎಸ್, ಫ್ಲಡ್ ಲೈಟ್, ಎಲ್‌ಇಡಿ ಸ್ಕ್ರೀನ್, ಅತ್ಯಾಧುನಿಕ ಕ್ಯಾಮೆರಾ ಹಾಗೂ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಲು ಅಗತ್ಯವಿರುವ ಸಾಮಗ್ರಿಗಳನ್ನೂ ಒದಗಿಸಲಾಗಿದೆ.

-----

ಕೋಟ್‌...ಆಧುನಿಕ ವಿಧಿ ವಿಜ್ಞಾನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಪರಾಧ ಪತ್ತೆ, ತನಿಖೆಯ ಗುಣಮಟ್ಟ ಹಾಗೂ ಸಾರ್ವಜನಿಕರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ.-ಭೂಷಣ ಬೋರಸೆ, ನಗರ ಪೊಲೀಸ್ ಆಯುಕ್ತರು.