ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಗೊಂದಲ ಮತ್ತು ಲೋಪಗಳನ್ನು ಖಂಡಿಸಿ ನಗರದ ಪೋಸ್ಟ್ ಸರ್ಕಲ್ ಬಳಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಗೊಂದಲ ಮತ್ತು ಲೋಪಗಳನ್ನು ಖಂಡಿಸಿ ನಗರದ ಪೋಸ್ಟ್ ಸರ್ಕಲ್ ಬಳಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ವಿಜಯಪುರ ಜಿಲ್ಲೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯ ಪರೀಕ್ಷೆ ಕಾಲದಲ್ಲಿ ಪ್ರಶ್ನೆ ಪತ್ರಿಕೆ ವಿಳಂಬವಾಗಿ ನೀಡಿದ್ದರಿಂದ ಹಾಗೂ ಪ್ರಶ್ನೆ ಪತ್ರಿಕೆ ಮತ್ತು ಬುಕ್ ಲೈಟ್ ನಂಬರ್ ಅದಲು ಬದಲು ಆಗಿದ್ದರಿಂದ ಪರೀಕ್ಷಾರ್ಥಿಗಳಿಗೆ ಸಾಕಷ್ಟು ಗೊಂದಲ ಉಂಟಾಗಿದೆ. ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಶೀಟ್‌ಗಳ ಸರಣಿ ಸಂಖ್ಯೆಗಳು ಪರಸ್ಪರ ಹೊಂದಾಣಿಕೆಯಾಗದ ಕಾರಣ ಪರೀಕ್ಷಾ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಗೊಂದಲದಿಂದಾಗಿ ಪರೀಕ್ಷಾ ಕೇಂದ್ರದಿಂದ ಹೊರನಡೆದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಾವಳಿಗಳ ಪ್ರಕಾರ ಮರು-ಪ್ರವೇಶ ನಿರಾಕರಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿರುವುದರಿಂದ ಕೂಡಲೇ ಈ ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆ ನಡೆಸಬೇಕು. ನೇಮಕಾತಿ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪಗಳ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.