ಕನ್ನಡಪ್ರಭ ವಾರ್ತೆ ಬೆಳಗಾವಿ ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಅನುಭವ ಮಂಟಪದ ಸಂಪೂರ್ಣ ನಿರ್ವಹಣೆಯನ್ನು ಜಾಗತಿಕ ಲಿಂಗಾಯತ ಮಹಾಸಭೆಗೆ(ಜೆಎಲ್‌ಎಂ) ವಹಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಜಾಗತಿಕ ಲಿಂಗಾಯತ ಮಹಾಸಭೆ ನಿರ್ಣಯ ಕೈಗೊಂಡಿದೆ. ನಗರದಲ್ಲಿ ನಡೆದ ಎರಡು ದಿನಗಳ ವಾರ್ಷಿಕ ಸರ್ವಸಾಮಾನ್ಯ ಸಭೆ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಈ ನಿರ್ಣಯವನ್ನು ಒಮ್ಮತದಿಂದ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಅನುಭವ ಮಂಟಪದ ಸಂಪೂರ್ಣ ನಿರ್ವಹಣೆಯನ್ನು ಜಾಗತಿಕ ಲಿಂಗಾಯತ ಮಹಾಸಭೆಗೆ(ಜೆಎಲ್‌ಎಂ) ವಹಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಜಾಗತಿಕ ಲಿಂಗಾಯತ ಮಹಾಸಭೆ ನಿರ್ಣಯ ಕೈಗೊಂಡಿದೆ. ನಗರದಲ್ಲಿ ನಡೆದ ಎರಡು ದಿನಗಳ ವಾರ್ಷಿಕ ಸರ್ವಸಾಮಾನ್ಯ ಸಭೆ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಈ ನಿರ್ಣಯವನ್ನು ಒಮ್ಮತದಿಂದ ಕೈಗೊಳ್ಳಲಾಯಿತು.

ಅನುಭವ ಮಂಟಪದ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸುಮಾರು ₹400 ಕೋಟಿ ವೆಚ್ಚವಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಕನಿಷ್ಠ ₹450 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಲಾಗುತ್ತಿದ್ದರೂ, ಪ್ರಸಕ್ತ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡದ ಹಿನ್ನೆಲೆಯಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವುದು ಕಷ್ಟ. ಹೀಗಾಗಿ ಅರ್ಧಂಬರ್ಧ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಬಾರದು ಎಂದು ಸಭೆ ನಿರ್ಧರಿಸಿತು.

ಕಟ್ಟಡ ಪೂರ್ಣಗೊಂಡ ಬಳಿಕ ಅನುಭವ ಮಂಟಪದಲ್ಲಿ ನಡೆಯಬೇಕಾದ ಚಟುವಟಿಕೆಗಳು, ಅಲ್ಲಿ ಇರಬೇಕಾದ ಹಾಗೂ ಇರಬಾರದ ವಿಷಯಗಳು ಸೇರಿದಂತೆ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಜಾಗತಿಕ ಲಿಂಗಾಯತ ಮಹಾಸಭೆಗೆ ವಹಿಸುವಂತೆ ಡಿಸೆಂಬರ್ ಅಂತ್ಯದೊಳಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು.

ಇದಕ್ಕೂ ಮುನ್ನ ಬಸವಪರ ಮಠಾಧಿಪತಿಗಳ ಒಕ್ಕೂಟ ಹಾಗೂ ವಿವಿಧ ಬಸವಪರ ಸಂಘಟನೆಗಳ ಪದಾಧಿಕಾರಿಗಳ ಬೃಹತ್ ಸಭೆ ನಡೆಸಿ, ಅನುಭವ ಮಂಟಪ ನಿರ್ಮಾಣದ ಬಳಿಕ ಅದರ ನಿರ್ವಹಣೆ ಮತ್ತು ಚಟುವಟಿಕೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲು ನಿರ್ಧರಿಸಲಾಯಿತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮಂಡಿಸಿದ ಅಭಿಪ್ರಾಯಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಸವಪರ ಮಠಾಧೀಶರು ಹಾಗೂ ಸಂಘಟನೆಗಳನ್ನು ಸಂಪರ್ಕಿಸಿ ಸಭೆ ಆಯೋಜಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಉಪಾಧ್ಯಕ್ಷ, ಬೀದರ್ ಜಿಲ್ಲೆಯ ಬಸವರಾಜ ಧನ್ನೂರ್ ಅವರಿಗೆ ನೀಡಲಾಗಿದೆ.

ಅನುಭವ ಮಂಟಪದ ಪಾವಿತ್ರ್ಯ ಉಳಿಯಲಿ

ಅನುಭವ ಮಂಟಪವು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಅನುಭವಿಗಳು ಮತ್ತು ಅನುಭಾವಿಗಳಿಂದ ಸ್ಥಾಪನೆಯಾಗಿದ್ದು, ಅಲ್ಲಿ ಮೌಲಿಕ ಚರ್ಚೆಗಳು ನಡೆಯುತ್ತಿದ್ದವು. ಅದೇ ಮಾದರಿಯಲ್ಲಿ ಅದರ ಪಾವಿತ್ರ್ಯ ಮತ್ತು ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಚಟುವಟಿಕೆಗಳು ನಡೆಯಬೇಕು ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಮಾದಾರ ಹೇಳಿದರು.

ಅಮೃತಸರದ ಸ್ವರ್ಣಮಂದಿರದಲ್ಲಿ ನಿರಂತರವಾಗಿ ನಡೆಯುವ ಚಟುವಟಿಕೆಗಳ ಮಾದರಿಯಲ್ಲಿ ಅನುಭವ ಮಂಟಪದಲ್ಲಿಯೂ ಕಾರ್ಯಕ್ರಮಗಳು ನಡೆಯಬೇಕು. ಈ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಎಲ್ಲ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸ್ವರ್ಣಮಂದಿರ ಭೇಟಿ ಕಾರ್ಯಕ್ರಮ ಆಯೋಜಿಸಲು ಮತ್ತು ಅನುಭವ ಮಂಟಪ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ರಾಷ್ಟ್ರೀಯ ಅಧ್ಯಕ್ಷ ಎನ್.ಎಸ್.ಕೆಂಪಗೌಡರ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಉಪಾಧ್ಯಕ್ಷ ಎಂ.ವಿ.ಗೊಂಗಡಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬೆಳಗಾವಿ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿದರು. ಕುಷ್ಟಗಿ ಮಾಜಿ ಶಾಸಕ ಶರಣಪ್ಪನವರ್, ಪರಮೇಶ್ವರಪ್ಪ ಕಾಗಿನೆಲೆ, ಎಂ.ಮಹಾದೇವಪ್ಪ, ಬಸವರಾಜ್ ಹರ್ನಾಳ್, ಎಂ.ಶಿವಕುಮಾರ್ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ರಾಜ್ಯಗಳ ಅಧ್ಯಕ್ಷರು, ರಾಷ್ಟ್ರೀಯ ಮತ್ತು ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.