ಕನ್ನಡಪ್ರಭ ವಾರ್ತೆ ಬೆಂಗಳೂರು
‘ಜಾಗತಿಕ ಹೂಡಿಕೆ ಹಾಗೂ ವಿದೇಶಾಂಗ ವ್ಯವಹಾರಗಳ ಇಲಾಖೆ’ ರಚನೆ ಕುರಿತು ಸರ್ಕಾರದ ಉನ್ನತ ಮಟ್ಟದಲ್ಲೇ ಗೊಂದಲ ನಿರ್ಮಾಣವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು, ಜಾಗತಿಕ ಹೂಡಿಕೆ ಎಂಬುದು ಬೃಹತ್ ಕೈಗಾರಿಕೆ ಇಲಾಖೆ ವ್ಯಾಪ್ತಿ ಮೇಲೆ ಓವರ್‌ಲ್ಯಾಪ್ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಹೀಗಾಗಿಯೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಉಪಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಚರ್ಚಿಸಿ ಗೊಂದಲ ಬಗೆಹರಿಸಿಕೊಳ್ಳಲಾಗುತ್ತದೆ ಎಂದೂ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಹೂಡಿಕೆ ಎಂದು ಬಂದಾಗ ಡೂಪ್ಲಿಕೇಷನ್ ಆಗುತ್ತದೆ. ಈಗಾಗಲೇ ಹೂಡಿಕೆಗೆ ಸಂಬಂಧಿಸಿ ಇಲಾಖೆ ವ್ಯಾಪ್ತಿಯಲ್ಲಿ ಸಮಿತಿಗಳು ಇವೆ. ಇನ್ವೆಸ್ಟ್ ಕರ್ನಾಟಕ ಫೋರಂ, ಹೂಡಿಕೆದಾರರಿಗೆ ರಿಯಾಯ್ತಿಗಳನ್ನು ನೀಡಲು ಉನ್ನತ ಮಟ್ಟದ ಸಮಿತಿ ಇದೆ. ಹೀಗಿರುವಾಗ ಮತ್ತೊಂದು ಇಲಾಖೆಯಲ್ಲಿ ಹೂಡಿಕೆ ಎಂಬುದು ಓವರ್ ಲ್ಯಾಪ್ ಆಗುತ್ತದೆ ಎಂದರು.ಸಂಪುಟ ಸಭೆಗೆ ಮೊದಲು ‘ಹೂಡಿಕೆ’ ಇರಲಿಲ್ಲ!:ಅನಿವಾಸಿ ಭಾರತೀಯರ ಕ್ಷೇಮಾಭಿವೃದ್ಧಿ, ಪ್ರತಿಭೆ ಅನ್ವೇಷಣೆಗೆ ನಮ್ಮ ತಕರಾರು ಇಲ್ಲ. ಸಚಿವ ಸಂಪುಟ ಸಭೆಗೆ ವಿಷಯ ಬರುವ ಮೊದಲು ಜಾಗತಿಕ ಹೂಡಿಕೆ ಎಂಬ ಪ್ರಸ್ತಾಪ ಇರಲಿಲ್ಲ. ಬದಲಿಗೆ ಜಾಗತಿಕ ವ್ಯವಹಾರ ಎಂದು ಇತ್ತು. ಸಂಪುಟ ಸಭೆಗೆ ಹೂಡಿಕೆ ಎಂದು ಬಂದಿತ್ತು. ಹೀಗಾಗಿ ಗೊಂದಲ ಆಗಿದ್ದು, ಬಗೆಹರಿಸಿಕೊಳ್ಳುತ್ತೇವೆ ಎಂದು ಎಂ.ಬಿ.ಪಾಟೀಲ್ ಹೇಳಿದರು.ಇದರಲ್ಲೂ ರಾಜಕಾರಣ ಮಾಡಿದ್ರೆ ಹೇಗೆ?:
ಜಲಾಶಯಗಳ ನೀರು ನಂಬಿಕೊಂಡು ಬೆಳೆ ಹಾಕಬೇಡಿ ಎಂಬ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಬಿಜೆಪಿ ಟೀಕಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಕುಡಿಯುವ ನೀರು ಮನುಷ್ಯರಿಗೆ ಹಾಗೂ ಜಾನುವಾರುಗಳಿಗೆ ತುರ್ತು ಅಗತ್ಯ. ಜಲಾಶಯದಲ್ಲಿ ನೀರಿಲ್ಲದೆ ಇದ್ದಾಗ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಇದರಲ್ಲೂ ರಾಜಕಾರಣ ಮಾಡಿದರೆ ಹೇಗೆ?’ ಎಂದು ಪ್ರಶ್ನಿಸಿದರು.