ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ದುರ್ಬಲಗೊಂಡು ತೀವ್ರ ಆತಂಕ ಮೂಡಿಸಿರುವ ಪ್ರಸಕ್ತ ಸಾಲಿನ ಮುಂಗಾರು ಮಳೆ ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧೆಡೆ ಚುರುಕು ಪಡೆದಿದ್ದು, ಜು.7 ಮತ್ತು 8ರಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯ ‘ಆರೆಂಜ್ ಅಲರ್ಟ್’ ಅನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ.ಜು.7ರಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಭಾರಿ ಮಳೆಯಾಗುವ ರೆಡ್ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಇನ್ನುಳಿದಂತೆ ಸಾಧಾರಣ ಮಳೆಯ ನಿರೀಕ್ಷೆ ಇರುವ ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.ಜು.8ಕ್ಕೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
2-3 ದಿನ ಮಾತ್ರ ಮಳೆ:
ಸದ್ಯದ ಮುನ್ಸೂಚನೆ ಪ್ರಕಾರ ಮುಂದಿನ ಎರಡ್ಮೂರು ದಿನ ಮಾತ್ರ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ನಂತರ ಮುಂಗಾರು ಮತ್ತೆ ದುರ್ಬಲಗೊಳ್ಳುತ್ತದೆ. ಅದರಲ್ಲೂ ಈ ತಿಂಗಳ ಕೊನೆಯ ಎರಡು ವಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗುತ್ತದೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣ ಕಣಿವೆಯ ಜಲಾಶಯಗಳಿಗೆ ನೀರು ಹರಿದು ಬರುತ್ತಿರುವುದು ಆಶಾದಾಯಕ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಕೆಲವೆಡೆ ಮಳೆ ಆಗುತ್ತಿರುವ ಕಾರಣ ಕಾವೇರಿ ಕಣಿವೆಯ ಕೆಲ ಜಲಾಶಯಗಳಿಗೆ ಕೆಲ ದಿನಗಳವರೆಗೆ ತಕ್ಕ ಮಟ್ಟಿಗೆ ನೀರು ಹರಿದು ಬರಲಿದೆ ಎಂದು ಶ್ರೀನಿವಾಸರೆಡ್ಡಿ ಹೇಳಿದರು.ದ.ಒಳನಾಡಿನಲ್ಲಿ ಕೊರತೆ ಪ್ರಮಾಣ ಇಳಿಕೆ:
ಕಳೆದ ಕೆಲ ದಿನಗಳಿಂದ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಿರುವ ಕಾರಣ ಮಳೆ ಕೊರತೆ ಪ್ರಮಾಣ ಶೇ.11ಕ್ಕೆ ಇಳಿಕೆಯಾಗಿದೆ. ಆದರೆ, ಉತ್ತರ ಒಳನಾಡಿನಲ್ಲಿ ಶೇ.24, ಮಲೆನಾಡು ಶೇ.49, ಕರಾವಳಿಯಲ್ಲಿ ಶೇ.38ರಷ್ಟು ಮಳೆ ಕೊರತೆಯಾಗಿದೆ. ಒಟ್ಟಾರೆ ರಾಜ್ಯದಲ್ಲಿ ಜು.5ರವರೆಗೆ ಮುಂಗಾರು ಮಳೆ ಕೊರತೆ ಪ್ರಮಾಣ ಶೇ.35ರಷ್ಟು ಇದೆ.ಡ್ಯಾಂಗಳಲ್ಲಿ ಒಟ್ಟು ಸಾಮರ್ಥ್ಯದ ಶೇ.23ರಷ್ಟು ನೀರು:
ಜು.5ರಂದು ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ 207 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ 585 ಟಿಎಂಸಿ ನೀರು ಸಂಗ್ರಹವಾಗಿತ್ತು. ಮುಂಗಾರು ಹಂಗಾಮಿನ ಮೊದಲ ಒಂದು ತಿಂಗಳು ಕಳೆದಿದ್ದರೂ ಜಲಾಶಯಗಳಲ್ಲಿ ಒಟ್ಟಾರೆ ನೀರಿನ ಪ್ರಮಾಣ ಶೇ.23ರಷ್ಟು ಮಾತ್ರ ಇದೆ.ಉಳಿದಂತೆ ಸಾಧಾರಣ ಮಳೆಯ ನಿರೀಕ್ಷೆ ಇರುವ ಉತ್ತರ ಒಳನಾಡಿನ ಕೆಲ ಭಾಗ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ.