ಕನ್ನಡಪ್ರಭ ವಾರ್ತೆ ಬೆಂಗಳೂರು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವಾಗಿ 1,370 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.ಸೋಮವಾರ ನಗರದ ಮಲ್ಲೇಶ್ವರದ ಮಂತ್ರಿ ಮಾಲ್ ಹಿಂಭಾಗದಲ್ಲಿ 5.5 ಕೋಟಿ ರು. ವೆಚ್ಚದಲ್ಲಿ ನೂತನ ಪಾದಚಾರಿ ಸುರಂಗ ಮಾರ್ಗ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರೈಲ್ವೆ ನಿಲ್ದಾಣವನ್ನು ಪಿಪಿಪಿ ಮಾದರಿ ಅಥವಾ ಸಂಪೂರ್ಣ ಕೇಂದ್ರ ಸರ್ಕಾರದಿಂದಲೇ ನಿರ್ಮಿಸುವ ಕುರಿತು ಚರ್ಚೆ ನಡೆದಿದೆ. ಇನ್ನು 485 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಬೆಂಗಳೂರು ಉಪ ನಗರ ರೈಲು ಯೋಜನೆಗೆ ಒತ್ತು ನೀಡಲಾಗುತ್ತಿದೆ. ನಗರದಿಂದ ರಾಮನಗರ, ತುಮಕೂರು, ಕೆಜಿಎಫ್ ಮುಂತಾದ ಬೆಂಗಳೂರು ಸುತ್ತಲಿನ ನಗರಗಳನ್ನು ಸಂಪರ್ಕಿಸಲು ಇರುವ ಎರಡು ಹಳಿ ಮಾರ್ಗಗಳನ್ನು 4 ಹಳ್ಳಿಗಳಿಗೆ ವಿಸ್ತರಿಸುವ ಉದ್ದೇಶವಿದೆ. ಯಶವಂತಪುರ ರೈಲ್ವೆ ನಿಲ್ದಾಣವನ್ನು 1,400 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಯಲಹಂಕದಲ್ಲಿ 5,700 ಕೋಟಿ ರು. ವೆಚ್ಚದಲ್ಲಿ ಮೆಗಾ ಲಾಜಿಸ್ಟಿಕ್ಸ್ ಟರ್ಮಿನಲ್ ನಿರ್ಮಾಣ ಯೋಜನೆ ರೂಪಿಸಲಾಗುತ್ತಿದೆ. ರಾಜ್ಯದಲ್ಲಿ 146 ರೈಲ್ವೆ ಅಂಡರ್‌ಪಾಸ್, ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಒಟ್ಟಾರೆ 52,000 ಕೋಟಿ ರು. ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿ. ಸೋಮಣ್ಣ ತಿಳಿಸಿದರು.ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಬೆಂಗಳೂರು ನಗರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಸಹಕಾರ ಅಗತ್ಯವಿದೆ. ನಗರದ ಸಮಸ್ಯೆಗಳು ಏನು ಎಂಬುದು ಸೋಮಣ್ಣ ಅವರಿಗೆ ತಿಳಿದಿದೆ. ಅವುಗಳನ್ನು ಪರಿಹರಿಸಲು, ಪ್ರಗತಿಗಾಗಿ ಕೈಜೋಡಿಸಬೇಕೆಂದು ಕೋರಿದರು. ಶಾಸಕ ದಿನೇಶ ಗುಂಡೂರಾವ್ ಮಾತನಾಡಿ, ಇಲ್ಲಿ ಸುರಂಗ ಪಾದಚಾರಿ ಮಾರ್ಗ ನಿರ್ಮಿಸಬೇಕು ಎನ್ನುವುದು ದಶಕಗಳ ಬೇಡಿಕೆ ಕೊನೆಗೂ ಈಡೇರುತ್ತಿದೆ. ಇದರಿಂದ ಶ್ರೀರಾಮಪುರ, ಸ್ವಾತಂತ್ರ್ಯಪಾಳ್ಯ ಮತ್ತು ಸುತ್ತಲಿನ ಜನರಿಗೆ ಅನುಕೂಲವಾಗುತ್ತದೆ. 6 ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿದ್ದಾರೆ. ಅದರಂತೆ ಕಾಮಗಾರಿ ಮುಗಿಸಿದರೆ ಬಹಳ ಸಂತೋಷ ಎಂದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ ಇದ್ದರು.
ಪರಸ್ಪರ ಹೊಗಳಿಕೊಂಡ ಸಚಿವರು:
ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಪರಸ್ಪರರನ್ನು ಹೊಗಳಿಕೊಂಡರು. ಭಾಷಣದ ವೇಳೆ ಕೇಂದ್ರ ಸಚಿವ ವಿ.ಸೋಮಣ್ಣ ಅವರು, ಕೃಷ್ಣ ಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ಹೊಗಳಿದರು. ದಾವಣಗೆರೆ-ತುಮಕೂರು ರೈಲು ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಬಹಳ ನೆರವಾಗಿದ್ದಾರೆ. ಆಸ್ತಿ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಇ-ಖಾತಾ ಜಾರಿ ಮೂಲಕ ದೇಶದಲ್ಲೇ ಉತ್ತಮ ಕೆಲಸ ಮಾಡಿದ್ದಾರೆ. ಇನ್ನು ದಿನೇಶ್ ಗುಂಡೂರಾವ್ ಅವರು ಸಚಿವರಾಗುವ ಅರ್ಹತೆ ಹೊಂದಿದ್ದಾರೆ. ಮುಂದಿನ ಹಂತದಲ್ಲಿ ಸಚಿವ ಸ್ಥಾನ ಸಿಗಲಿ ಎಂದು ಹಾರೈಸಿದರು. ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಸೋಮಣ್ಣ ಅವರು ಅತ್ಯಂತ ಸಕ್ರಿಯ ಸಚಿವ. ಪಾದರಸದಂತೆ ಕೆಲಸ ಮಾಡುತ್ತಾರೆ. ತುಮಕೂರು-ದಾವಣಗೆರೆ ಮಾರ್ಗಕ್ಕಾಗಿ ಬಹಳ ಶ್ರಮಿಸಿದ್ದಾರೆ. ಭೂಮಿ ಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಲು ನನ್ನಲ್ಲಿ ಸಾಕಷ್ಟು ಬಾರಿ ಚರ್ಚಿಸಿದ್ದಾರೆ ಎಂದರು. ದಿನೇಶ್ ಗುಂಡೂರಾವ್ ಮಾತನಾಡಿ, ಅತ್ಯಂತ ಛಲದಿಂದ, ಉತ್ಸಾಹದಿಂದ ಕೆಲಸ ಮಾಡುವ ಮಂತ್ರಿ ಎಂದರೆ ಅದು ಸೋಮಣ್ಣ. ಅವರು ಎಂದರೆ ನಮಗೆ ಬಹಳ ಸಂತೊಷ ಎಂದರು.