ನೆಲಮಂಗಲ: ನೆಲಮಂಗಲ ಯೋಜನಾ ಪ್ರಾಧಿಕಾರದ ವ್ಯಾಪ್ತಿ ಯಲ್ಲಿ ವೀರಶೈವ ಲಿಂಗಾಯತ ಸಭಾಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಭವನ ನಿರ್ಮಾಣಕ್ಕೂ ಸರ್ಕಾರದ ಅನುದಾನ ಮತ್ತು ವೈಯಕ್ತಿಕ ದೇಣಿಗೆ ನೀಡುವುದಾಗಿ ಶಾಸಕ ಶ್ರೀನಿವಾಸ್‌ ಭರವಸೆ ನೀಡಿದರು

ನೆಲಮಂಗಲ: ನೆಲಮಂಗಲ ಯೋಜನಾ ಪ್ರಾಧಿಕಾರದ ವ್ಯಾಪ್ತಿ ಯಲ್ಲಿ ವೀರಶೈವ ಲಿಂಗಾಯತ ಸಭಾಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಭವನ ನಿರ್ಮಾಣಕ್ಕೂ ಸರ್ಕಾರದ ಅನುದಾನ ಮತ್ತು ವೈಯಕ್ತಿಕ ದೇಣಿಗೆ ನೀಡುವುದಾಗಿ ಶಾಸಕ ಶ್ರೀನಿವಾಸ್‌ ಭರವಸೆ ನೀಡಿದರು.

ನಗರದ ಜಯದೇವ ವೀರಶೈವ ಭವನದಲ್ಲಿ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ‌ ಘಟಕ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಇಂಜಿನಿಯರಿಂಗ್, ವೈದ್ಯರಾಗುವುದಕ್ಕೆ ಸೀಮಿತ ಆಗಬಾರದು. ರಾಜ್ಯ, ರಾಷ್ಟ್ರದ ಆಡಳಿತ ವ್ಯವಸ್ಥೆಯಲ್ಲಿನ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹೇಳಿದರು.

ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮಕ್ಕಳ‌ ಜತೆಗೆ ಪಾಲಕರು ಒಟ್ಟಿಗೆ ಸೇರುವ ಕಾರ್ಯಕ್ರಮ ಇದಾಗಿದೆ. ಪ್ರತಿವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಗಳಿಸಿ ಪುರಸ್ಕೃತರಾಗುತ್ತಿರುವ ವಿದ್ಯಾರ್ಥಿಗಳು ಮತ್ತೆ ಮತ್ತೆ ಪುರಸ್ಕತ ಪಟ್ಟಿಗೆ ಸೇರಬೇಕು. ಪ್ರಕೃತಿಯಂತೆ ಪ್ರತಿಯೊಬ್ಬರು ಕುಟುಂಬ ನಿರ್ವಹಣೆ ಜತೆಗೆ ಸಮಾಜದ ಋಣ ತೀರಿಸಬೇಕಿದೆ‌ ಎಂದು ಹೇಳಿದರು.

ಮಕ್ಕಳಿಗೆ ದೇವರ ಹೆಸರಿಡಿ: ವೀರಶೈವ ಲಿಂಗಾಯತ ಎಂಬುದು ಅಭಿಮಾನದ ಸಂಕೇತವಾಗಬೇಕೆ ಹೊರತು ಅವಮಾನವೆಂದು ಭಾವಿಸಬಾರದು. ನಮ್ಮ‌ಮಕ್ಕಳಿಗೆ ಸಹಸ್ರನಾಮಧಾರಿ ಶಿವನ ಹೆಸರನ್ನು ಮಕ್ಕಳಿಗಿಡಬೇಕು. ಅದು ಬಿಟ್ಟು ಮಕ್ಕಳಿಗೆ ವಿದೇಶಿ ಸಂಸ್ಕೃತಿಯ ಆಂಗ್ಲಭಾಷೆಗಳ‌ ಹೆಸರಿಡಬಾರದು. ಮಠಮಾನ್ಯಗಳಲ್ಲಿರುವ ಭವಿಷ್ಯದಲ್ಲಿ ಪ್ರತಿಭಾವಂತರ ಪ್ರೋತ್ಸಾಹದ ಜತೆಗೆ

ಸದೃಡ ಸಮಾಜ ಕಟ್ಟುವ ಹಾಗೂ ಆತ್ಮಲೋಕನ ಮಾಡಿಕೊಳ್ಳುವ ವೇದಿಕೆ ಆಗಬೇಕು ಎಂದು ಹೇಳಿದರು.

ಶ್ರೀ ಮಲಯ ಶಾಂತಮುನಿ ಸ್ವಾಮೀಜಿ ಮಾತನಾಡಿ, ಕ್ಷೇತ್ರದೆಲ್ಲೆಡೆ ವೀರಶೈವ ಲಿಂಗಾಯತ ಮಠಗಳಷ್ಟೆ ಇತರೆ ಮಠಗಳ ಶ್ರೇಯೋಭಿವೃದ್ಧಿಗೆ ಶಾಸಕ ಎನ್.ಶ್ರೀನಿವಾಸ್ ಬಿಟ್ಟರೆ ಯಾವುದೇ ಶಾಸಕರು ಸಹಾಯ ಮಾಡುತ್ತಿಲ್ಲ. ಸಮಾಜದವರು ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.

ಅಖಿಲಭಾರತ ವೀರಶೈವ ಮಸಹಾ ಸಭಾ ರಾಷ್ಟ್ರೀಯ ಉಪಾಧ್ಯಕ್ಷ ಸಚ್ಚದಾನಂದಮೂರ್ತಿ ಮಾತನಾಡಿ,

ಪ್ರತಿ ವರ್ಷ 1.70 ಲಕ್ಷ ಪ್ರತಿಭಾ ಪುರಸ್ಕಾರಕ್ಕೆ ಮಹಾಸಭೆ ವೆಚ್ಚ ಮಾಡುತ್ತಿದೆ. ಈ ಬಾರಿ 13 ಸಾವಿರ ಅರ್ಜಿಗಳು ಬಂದಿವೆ. ಗ್ರಾಮಾಂತರ ಜಿಲ್ಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಕಡಮೆ ಆಗುತ್ತಿರುವುದು ಬೇಸರ ಸಂಗತಿ.

ರಾಜ್ಯದಲ್ಲಷ್ಟೆ ಅಲ್ಲ. ಹೊರರಾಜ್ಯದಲ್ಲೂ ಮಹಸಾಭಾ ಕಾರ್ಯಕ್ರಮ ರೂಪಿಸುತ್ತಿದೆ. ರಾಜ್ಯದಲ್ಲಿ 1.53 ಲಕ್ಷ ಸದಸ್ಯರಿದ್ದು, ಮುಂದಿನ ದಿನಗಳಲ್ಲಿ 10 ಲಕ್ಷ ಸದಸ್ಯತ್ವ ಸಂಕಲ್ಪ ಹೊಂದಿದೆ. ಗೋವಾ, ಆಂಧ್ರಪ್ರದೇಶ, ತೆಲಂಗಾಣ, ದೆಹಲಿಯಲ್ಲೂ ಮಹಾಸಭಾ ಸ್ಥಾಪಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹರೀಶ್ ಆರಾಧ್ಯ, ಯವಘಟಕ ಅಧ್ಯಕ್ಷ ಮನೋಹರ್ ಅಬ್ಬಿಗೆರೆ, ಮಹಾಸಭಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಎನ್.ಎಸ್‌. ಶಾಂತಕುಮಾರ್, ಎನ್.ಎಸ್.ನಟರಾಜು, ಎನ್.ಬಿ. ದಯಾಶಂಕರ್, ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಮುಕ್ತಾಂಭ, ಜಿಲ್ಲಾಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷೆ ಲತಾ ಆರಾಧ್ಯ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಪೂರ್ಣಿಮಾಸುಗ್ಗರಾಜು, ಸದಸ್ಯ ಸಿ.ಪ್ರದೀಪ್, ಲೋಲಾಕ್ಷಿಗಂಗಾಧರ್, ತಾಲೂಕು ಅಧ್ಯಕ್ಷ ಎನ್.ರಾಜಶೇಖರ್, ಮಹಿಳಾ ಘಟಕ ಅಧ್ಯಕ್ಷೆ ವೇದಾವತಿ, ವೀರಶೈವ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಜಿ.ಲೋಕೇಶ್, ಕೆ.ಪಿ‌.ಬೃಂಗೀಶ್, ಮಂಜುಳಾಸುರೇಶ್ ಇತರರು ಪಾಲ್ಗೊಂಡಿದ್ದರು.

ಪೊಟೊ-4ಕೆಎನ್ಎಲ್ಎಮ್1-

ನೆಲಮಂಗಲದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ‌ ಘಟಕ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ತುಮಕೂರು ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು.