ಪರೀಕ್ಷಾ ಅಕ್ರಮಗಳ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರನ್ನು ಅಮಾನತು ಮಾಡಲು ಮತ್ತೊಮ್ಮೆ ರಾಜ್ಯಪಾಲರಿಗೆ ಶಿಫಾರಸು ಮಾಡುವಂತೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಂಗಳೂರು : ಪರೀಕ್ಷಾ ಅಕ್ರಮಗಳ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರನ್ನು ಅಮಾನತು ಮಾಡಲು ಮತ್ತೊಮ್ಮೆ ರಾಜ್ಯಪಾಲರಿಗೆ ಶಿಫಾರಸು ಮಾಡುವಂತೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಹಿಂದೆ ಸಾಹುಕಾರ್ ಅವರು ತಮ್ಮ ಪುತ್ರಿಗೆ ಅಕ್ರಮವಾಗಿ ಸರ್ಕಾರಿ ಕೆಲಸಕ್ಕೆ ಸೇರಲು ಸಹಕರಿಸಿರುವ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ರಾಜ್ಯಪಾಲರಿಗೆ ದೂರುಗಳೂ ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಜು.10 ರಂದು ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿದ್ದರು. ಆದರೆ ರಾಜ್ಯ ಸಚಿವ ಸಂಪುಟದ ಶಿಫಾರಸು ಇಲ್ಲದೆ ಅಮಾನತು ಆದೇಶ ಮಾಡಲಾಗಿದೆ ಎಂಬ ಕಾರಣಕ್ಕೆ ಆದೇಶ ರದ್ದುಪಡಿಸಲು ಶಿವಶಂಕರಪ್ಪ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ರಾಜ್ಯಪಾಲರಿಗೆ ಶಿವಶಂಕರಪ್ಪ ಅವರ ಅಮಾನತಿಗೆ ಶಿಫಾರಸು ಮಾಡಿ ಘಟನೋತ್ತರ ತೀರ್ಮಾನ ಮಾಡಿತ್ತು.
ಕೋರ್ಟ್‌ನಲ್ಲಿ ಅಮಾನತು ನಿರ್ಧಾರ ರದ್ದು:
ಆದರೆ, ಹೈಕೋರ್ಟ್ ಘಟನೋತ್ತರ ಸಂಪುಟ ತೀರ್ಮಾನವನ್ನು ಪುರಸ್ಕರಿಸಿಲ್ಲ. ರಾಜ್ಯ ಸಂಪುಟ ಸಭೆಯ ಶಿಫಾರಸು ಇಲ್ಲದೆ ಅಮಾನತು ಮಾಡಿರುವುದು ಕಾನೂನುಬದ್ಧವಲ್ಲ ಎಂಬ ಕಾರಣ ನೀಡಿ ಸಾಹುಕಾರ್ ಅಮಾನತು ಆದೇಶ ರದ್ದುಪಡಿಸಿದೆ.
ಹೀಗಾಗಿ ಸಾಹುಕಾರ್ ಅವರನ್ನು ಮತ್ತೆ ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ಹೈಕೋರ್ಟ್ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಅವರ ಹುದ್ದೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಂಪುಟ ತೀರ್ಮಾನಿಸಿದೆ. ಅಮಾನತಿಗೆ ಪೂರಕವಾಗಿ ಸಕಾರಣಗಳ ಪಟ್ಟಿಯೊಂದಿಗೆ ಶಿಫಾರಸನ್ನು ಲೋಕಭವನಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪುನಃ ಶಿಫಾರಸು ಏಕೆ?
- ಹಿಂದೆ ರಾಜ್ಯಪಾಲರಿಂದ ನೇರವಾಗಿ ಸಾಹುಕಾರ್ ಅಮಾನತು
- ಬಳಿಕ ರಾಜ್ಯ ಸಂಪುಟದಿಂದ ಸಸ್ಪೆಂಡ್‌ಗೆ ಘಟನೋತ್ತರ ಶಿಫಾರಸು
- ಆದರೆ ಘಟನೋತ್ತರ ನಿರ್ಧಾರಕ್ಕೆ ಮಾನ್ಯತೆ ನೀಡದ ಹೈಕೋರ್ಟ್
- ಹೀಗಾಗಿ ಪುನಃ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್
- ಈ ಕಾರಣ ರಾಜ್ಯ ಕ್ಯಾಬಿನೆಟ್‌ನಿಂದ ಮತ್ತೆ ಅಮಾನತಿಗೆ ಶಿಫಾರಸು
- ಗವರ್ನರ್‌ಗೆ ಸಕಾರಣಗಳ ಜತೆ ಶಿಫಾರಸಿಗೆ ಮಹತ್ವದ ನಿರ್ಧಾರ
ಎಲ್ಲರಿಗಿಂತ ಮೊದಲು ತಿಳಿವುದು ಇಲ್ಲೇ
ಸಾಹುಕಾರ್ ಸಸ್ಪೆಂಡ್‌ಗೆ ಪುನಃ ಸಂಪುಟ ಶಿಫಾರಸು ಮಾಡುವ ಸಾಧ್ಯತೆ ಎಂದು ಕನ್ನಡಪ್ರಭ ನಿನ್ನೆಯೇ ವರದಿ ಮಾಡಿತ್ತು.
