ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ್ದು, ಅವರ ಪ್ರಸ್ತಾವಿತ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ ಲಂಡನ್ ಪ್ರವಾಸದಲ್ಲಿರುವ ಅವರು, ತಮ್ಮ ವೇಳಾಪಟ್ಟಿಯನ್ನು ಕಡಿತಗೊಳಿಸಿ ಆ.23ರಂದು ಹೈದರಾಬಾದ್‌ಗೆ ಹಿಂತಿರುಗಲಿದ್ದಾರೆ.
-ಸೂಕ್ತ ಕಾರ್ಯಕ್ರಮ ತಿಳಿಸದ್ದಕ್ಕೆ ಅನುಮತಿ ನಿರಾಕರಣೆ
-ಸರ್ಕಾರದ ನಿರ್ಧಾರಕ್ಕೆ ಸಿಎಂ ರೇವಂತ್ ರೆಡ್ಡಿ ಬೇಸರಹೈದರಾಬಾದ್/ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ್ದು, ಅವರ ಪ್ರಸ್ತಾವಿತ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ ಲಂಡನ್ ಪ್ರವಾಸದಲ್ಲಿರುವ ಅವರು, ತಮ್ಮ ವೇಳಾಪಟ್ಟಿಯನ್ನು ಕಡಿತಗೊಳಿಸಿ ಆ.23ರಂದು ಹೈದರಾಬಾದ್‌ಗೆ ಹಿಂತಿರುಗಲಿದ್ದಾರೆ.
ಆ.20ರಿಂದ 10 ದಿನಗಳ ಬ್ರಿಟನ್ ಮತ್ತು ಅಮೆರಿಕ ಪ್ರವಾಸಕ್ಕಾಗಿ ತೆಲಂಗಾಣ ಸರ್ಕಾರ ಕೇಂದ್ರದ ಅನುಮತಿ ಕೋರಿತ್ತು. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬ್ರಿಟನ್ ಪ್ರವಾಸಕ್ಕೆ ಮಾತ್ರ ಅನುಮೋದನೆ ನೀಡಿ, ಅಮೆರಿಕ ಭೇಟಿಗೆ ತಡೆ ನೀಡಿದೆ.ಈ ಕುರಿತು ದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ಮುಖ್ಯಮಂತ್ರಿಗಳು ಅಥವಾ ಇತರ ಉನ್ನತ ಅಧಿಕಾರಿಗಳ ವಿದೇಶಿ ಪ್ರವಾಸಕ್ಕೆ ಅನುಮತಿ ನೀಡುವ ಮುನ್ನ ವಿದೇಶಾಂಗ ಸಚಿವಾಲಯವು ಪರಿಶೀಲಿಸುತ್ತದೆ. ನಿಗದಿತ ಕಾರ್ಯಕ್ರಮವು ಅವರು ಹೊಂದಿರುವ ಹುದ್ದೆಗೆ ಮತ್ತು ಪ್ರವಾಸದ ಉದ್ದೇಶಕ್ಕೆ ಸೂಕ್ತವಾಗಿರಬೇಕು. ಅಮೆರಿಕ ಪ್ರವಾಸದ ವಿಚಾರದಲ್ಲಿ ಪ್ರಸ್ತಾವಿತ ಕಾರ್ಯಕ್ರಮವು ಸೂಕ್ತವಾಗಿ ಕಂಡುಬರದ ಕಾರಣ ಅನುಮತಿ ನಿರಾಕರಿಸಲಾಗಿದೆ’ ಎಂದಿದ್ದಾರೆ.
ರೇವಂತ್ ಬೇಸರ: ಕೇಂದ್ರದ ಈ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ರೇವಂತ್, ‘ಕೇಂದ್ರದ ಹೊಸ ಶಿಕ್ಷಣ ನೀತಿಯ ಭಾಗವಾಗಿ ಹಾರ್ವರ್ಡ್, ಎಂಐಟಿ ಮತ್ತು ಆಕ್ಸ್‌ಫರ್ಡ್‌ನಂತಹ ವಿಶ್ವದ ಅತ್ಯುತ್ತಮ ವಿವಿಗಳನ್ನು ತೆಲಂಗಾಣಕ್ಕೆ ತರುವುದು ಈ ಪ್ರವಾಸದ ಮುಖ್ಯ ಉದ್ದೇಶವಾಗಿತ್ತು. ದೇಶನಿರ್ಮಾಣ ಮತ್ತು ಯುವಜನರ ಭವಿಷ್ಯದ ವಿಷಯದಲ್ಲಿ ರಾಜಕೀಯವನ್ನು ಮೀರಬೇಕಿದೆ’ ಎಂದಿದ್ದಾರೆ.