ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ತಮ್ಮ ಅವಧಿಯಲ್ಲಿ ಪಶು ವೈಧ್ಯಾಧಿಕಾರಿಗಳ ನೇಮಕವಾಗಿರುವ ಅಭ್ಯರ್ಥಿಗಳ ಬ್ಯಾಂಕ್ ವಹಿವಾಟು, ಇತರೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ದೇವದುರ್ಗ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಇವರ ಸ್ವ-ಗ್ರಾಮ ತಾಲೂಕಿನ ಹೇಮನಾಳ ಹಾಗೂ ಕೆಪಿಎಸ್ಸಿಯಿಂದ ನೇಮಕಾತಿ ಹೊಂದಿರುವ ಶಾವಂತಗೇರಾ ಗ್ರಾಮದ ಸೂಗೂರೇಶ್ ಎಂಬುವವರ ಮನೆಗಳ ಮೇಲೆ ಇಡಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ

ಶಿವಶಂಕರಪ್ಪ ಸಾಹುಕಾರ ಸಂಬಂಧಿಯಾಗಿರುವ ಸತೀಶ್ ಬಾಬು ಮಗ ಸೂಗೂರೇಶ ಪಶು ವೈದ್ಯನಾಗಿ ನೇಮಕಗೊಂಡಿದ್ದು ಈ ವಿಚಾರವಾಗಿಯೇ ಇಡಿ ದಾಳಿ ನಡೆಸಿದೆ. ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ತಮ್ಮ ಅವಧಿಯಲ್ಲಿ ಪಶು ವೈಧ್ಯಾಧಿಕಾರಿಗಳ ನೇಮಕವಾಗಿರುವ ಅಭ್ಯರ್ಥಿಗಳ ಬ್ಯಾಂಕ್ ವಹಿವಾಟು, ಇತರೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಿಂದ ಎರಡು ಇನೋವಾ ಕಾರಿನಲ್ಲಿ ಬಂದ 7 ಜನ ಇಡಿ ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆ ತನಕ ದಾಖಲೆಗಳು ಪರಿಶೀಲನೆ ನಡೆಸಿದ್ದು, ಈ ವೇಳೆ ಶಿವಶಂಕರಪ್ಪ ಇವರಿಗೆ ಸೇರಿದ ಚಿರ ಮತ್ತು ಚರ ಆಸ್ತಿ ವಿವರಗಳನ್ನು ಸಹ ತಪಾಸಣೆ ನಡೆಸಿದ್ದು, ಕುಟುಂಬ ವರ್ಗದವರ ಮಾಹಿತಿಯೂ ಸೇರಿದಂತೆ ಜಮೀನು, ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಹ ಸಂಗ್ರಹಿಸಿದ್ದಾರೆ.

ಪಶು ವೈದ್ಯನಾಗಿ ನೇಮಕವಾದ ಸೂಗೂರೇಶ ಮನೆಯಿಂದ ಕೆಲ ಮಹತ್ವದ ದಾಖಲೆಗಳನ್ನು ಪಡೆದಿರುವ ಇಡಿ ಅಧಿಕಾರಿಗಳು ಬ್ಯಾಗ್‌ಗಳಲ್ಲಿ ಮಹತ್ವದ ದಾಖಲೆ ಗಳನ್ನ ವಶಪಡಿಸಿಕೊಂಡು ಹೋಗಿದ್ದಾರೆ. ಇಡಿ ಅಧಿಕಾರಿಗಳ ತಂಡ ವಾಪಸ್ಸು ತೆರಳುವಾಗ ಸೂಗೂರೇಶ್ ಕುಟುಂಬಸ್ಥರಿಗೆ ನೋಟೀಸ್ ಕೊಟ್ಟು ಹೋಗಿದ್ದು, ಇದೇ ವೇಳೆ ಅವರ ಹಿಂದೆ ಬಂದಿದ್ದ ಸಿಆರ್ಪಿಎಫ್ ಸಿಬ್ಬಂದಿ ಹಿಂತಿರುಗಿದ್ದಾರೆ.

ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್ಸಿ) ಅಕ್ರಮ ನೇಮಕಾತಿ ಆರೋಪ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಕೆಪಿಎಸ್ಸಿ ಕಚೇರಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದು, ಅದರಲ್ಲಿ ತಾಲೂಕಿನ ಶಾವಂತಗೇರಾ ಮತ್ತು ಹೇಮನಾಳ ಗ್ರಾಮಗಳು ಸೇರಿವೆ.

ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿ ಅಕ್ರಮ ಮತ್ತು ಕಡಿಮೆ ಆದಾಯ ಪತ್ರ, ನಾನಾ ಇಲಾಖೆಯ ಹುದ್ದೆಗಳ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾ ಚಾರ, ಒಎಂಆರ್ ಶೀಟ್ ತಿದ್ದುಪಡಿ, ಸ್ವಜನಪಕ್ಷಪಾತ ಹಾಗೂ ಅಕ್ರಮ ಹಣ ವರ್ಗಾವಣೆ ನಡೆದಿರುವ ಆರೋಪದ ಪ್ರಕರಣವು ಇಡೀ ರಾಜ್ಯದಲ್ಲಿ ಸದ್ದು ಮಾಡಿದ್ದು, ಭಾರಿ ಅಕ್ರಮದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಈಗಾಗಲೇ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಇದೀಗ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಎಂಪಿಎಲ್ಎ) ಅಡಿಯಲ್ಲಿ ಇಡಿ ಕೂಡ ಪ್ರಕರಣ ದಾಖಲಿಸಿಕೊಂಡು ತೀವ್ರ ಶೋಧ ಕಾರ್ಯಕ್ಕೆ ಮುಂದಾಗಿದ್ದು, ಅದರ ಭಾಗವಾಗಿಯೇ ಈ ದಾಳಿಗಳು ನಡೆಸಲಾಗಿದೆ.