The Akhil Bharatiya Vidyarthi Parishad (ABVP) staged a protest in front of the Mini Vidhana Soudha, demanding justice for students affected by irregularities in the police constable examination.
-ಅಬಿವಿಪಿಯಿಂದ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟನೆ
----ಕನ್ನಡಪ್ರಭ ವಾರ್ತೆ ಸಿಂಧನೂರು
ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ನಡೆದ ಲೋಪಗಳಿಂದ ಸಮಸ್ಯೆಗೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ಕೆಪಿಎಸ್ಸಿಯಲ್ಲಿ ನಡೆದಿರುವ ಹಗರಣದ ಕುರಿತು ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸಬೇಕು ಹಾಗೂ ಖಾಲಿಯಿರುವ ಶಿಕ್ಷಕರ ಹುದ್ದೆಯನ್ನು ತಕ್ಷಣವೇ ಖಾಯಂ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.ಕಾರ್ಯದರ್ಶಿ ವೀರಭದ್ರಯ್ಯ ಮಾತನಾಡಿ, ಸಂವಿಧಾನಿಕ ಉನ್ನತ ಸ್ಥಾನದಲ್ಲಿರುವ ಕೆಪಿಎಸ್ಸಿ ಅಧ್ಯಕ್ಷರು ಸುಳ್ಳು ದಾಖಲೆ ಮತ್ತು ಪ್ರಭಾವ ಬಳಸಿ ತಮ್ಮ ಮಕ್ಕಳಿಗೆ ಸರ್ಕಾರಿ ಹುದ್ದೆ ದೊರೆಯುವಂತೆ ಮಾಡಿರುವುದು ಅವರ ಹುದ್ದೆಗೆ ಮಾಡಿದ ಕಳಂಕವಾಗಿದೆ.
ಲೋಕಸೇವಾ ಆಯೋಗದಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇಂತಹ ಅಸಹ್ಯಕರ ಕೆಲಸಕ್ಕೆ ಆಸ್ಪದ ನೀಡಿರುವುದು ರಾಜ್ಯದ ಲಕ್ಷಾಂತರ ಯುವಜನತೆಯ ಕೋಪ ಮತ್ತು ನಿರಾಶೆಗೆ ಕಾರಣವಾಗಿದೆ ಎಂದು ದೂರಿದರು.ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಕಿನಲ್ಲಿ ಆ.3, 2026 ರಂದು ನಡೆದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ಸಮಯಕ್ಕೆ ನೀಡದ ಪರಿಣಾಮ ಅವ್ಯವಸ್ಥೆ ಉಂಟಾಗಿದೆ.
ಈ ಘಟನೆಯಿಂದ ಅನೇಕ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಪರೀಕ್ಷೆಯನ್ನು ಸಮರ್ಪಕವಾಗಿ ಬರೆಯಲು ಸಾಧ್ಯವಾಗದೆ ಅನ್ಯಾಯಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಮಸ್ಯೆಗೆ ಒಳಗಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಎಬಿವಿಪಿ ಸಹಕಾರ್ಯದರ್ಶಿ ಮೌನೇಶ ವಿಶ್ವಕರ್ಮ, ಸದಸ್ಯರಾದ ಅಭಿಷೇಕ, ಮನೋಜ್, ಗಣೇಶ ಬಾದರ್ಲಿ, ಮಹೇಶ್, ಗುರುಕಿರಣ್ ಶೆಟ್ಟಿ, ಮುತ್ತು, ಪ್ರಶಾಂತ್, ಪ್ರವೀಣ, ಅವಿನಾಶ ಮತ್ತಿತರರು ಇದ್ದರು.
-----ಫೋಟೋ:11ಕೆಪಿಎಸ್ಎನ್ಡಿ2:
ಸಿಂಧನೂರಿನ ಎಬಿವಿಪಿ ತಾಲೂಕು ಘಟಕ ಮಂಗಳವಾರ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟಿಸಿ ಶಿರಸ್ತೇದಾರ್ ಅಂಬಾದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿತು