ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೂ ತಲುಪಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮಂಗಳವಾರ ಅಂಕೋಲಾದಲ್ಲಿ ಏಕಾಏಕಿ ಶೋಧ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಅಂಕೋಲಾ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೂ ತಲುಪಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮಂಗಳವಾರ ಅಂಕೋಲಾದಲ್ಲಿ ಏಕಾಏಕಿ ಶೋಧ ನಡೆಸಿದ್ದಾರೆ.

ತಾಲೂಕಿನ ವಂದಿಗೆ ಸಮೀಪದ ಹೊನ್ನಾರಕಾ ದೇವಸ್ಥಾನದ ಬಳಿಯಿರುವ ಬೇಲೆಕೇರಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಸಿಕಂದರ್ ಚೌಧರಿ ನಿವಾಸದಲ್ಲಿ ಇಡಿ ಅಧಿಕಾರಿಗಳ ತಂಡ ಶೋಧ ನಡೆಸಿದೆ ಎಂದು ತಿಳಿದುಬಂದಿದೆ. ಹಲವು ಗಂಟೆಗಳ ಕಾಲ ದಾಖಲೆಗಳು, ದಾಖಲೆ ಪತ್ರಗಳು ಹಾಗೂ ಇತರ ಮಾಹಿತಿಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಕೆಪಿಎಸ್ಸಿ ನೇಮಕಾತಿ ಅಕ್ರಮದಲ್ಲಿ ಒಎಂಆರ್ ಉತ್ತರ ಪತ್ರಿಕೆಗಳ ತಿದ್ದುಪಡಿ ಆರೋಪ ಸಿಕಂದರ್ ಚೌದರಿ ಅವರ ವಿರುದ್ಧ ಕೇಳಿಬಂದಿರುವ ಹಿನ್ನೆಲೆ ಈ ಶೋಧ ನಡೆದಿದೆ ಎನ್ನಲಾಗಿದೆ. ಪ್ರಕರಣದ ತನಿಖೆಯ ಭಾಗವಾಗಿ ಅವರ ನಿವಾಸದಲ್ಲಿ ಲಭ್ಯವಿರುವ ದಾಖಲೆಗಳು ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹಿಂದೆಯೂ ಸಿಐಡಿ ತನಿಖೆ

ಸಿಕಂದರ್ ಚೌಧರಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಿಐಡಿ ತನಿಖೆಯ ಸಂದರ್ಭ ಬಂಧನಕ್ಕೊಳಗಾಗಿದ್ದರು ಎನ್ನಲಾಗಿದೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನಂತರ ಅವರನ್ನು ಬೇಲೆಕೇರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ನಿಯೋಜಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.ಅಂಕೋಲಾದಲ್ಲಿ ನಡೆದ ಇಡಿ ಶೋಧದಿಂದ ಸ್ಥಳೀಯವಾಗಿ ಕುತೂಹಲ ಮೂಡಿದೆ. ಮುಖ್ಯಶಿಕ್ಷಕ ಸಿಕಂದರ್ ನಿವಾಸದಲ್ಲಿ ಅಧಿಕಾರಿಗಳು ಯಾವ ದಾಖಲೆ ವಶಪಡಿಸಿಕೊಂಡಿದ್ದಾರೆ, ಯಾವುದೇ ಎಲೆಕ್ಟ್ರಾನಿಕ್ ಸಾಧನ ಅಥವಾ ಇತರ ಸಾಕ್ಷ್ಯ ಪತ್ತೆಯಾಗಿವೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಶೋಧ ಕಾರ್ಯಾಚರಣೆಯ ವೇಳೆ ಅಧಿಕಾರಿಗಳು ಹಲವು ದಾಖಲೆಗಳು ಮತ್ತು ಸಂಬಂಧಿತ ಮಾಹಿತಿ ಪರಿಶೀಲಿಸಿದ್ದಾರೆ ಎನ್ನಲಾಗಿದ್ದು, ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಇಡಿ ಅಧಿಕಾರಿಗಳ ಅಧಿಕೃತ ಮಾಹಿತಿ ಹೊರಬಂದರೆ ಪ್ರಕರಣದ ಕುರಿತು ಇನ್ನಷ್ಟು ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.