ಗ್ಯಾರಂಟಿ ಮಾದರಿ ಕೈ ಪ್ರಣಾಳಿಕೆ: ಡಿಕೆಶಿ

KannadaprabhaNewsNetwork |  
Published : Feb 11, 2024, 01:47 AM ISTUpdated : Feb 11, 2024, 07:35 AM IST
DK Shivakumar

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆ ಮಾದರಿ ಲೋಕಸಭೆಗೂ ಪ್ರಣಾಳಿಕೆ ತಯಾರಿ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಕರ್ನಾಟಕದ ನಮ್ಮ ಗ್ಯಾರಂಟಿ ಪ್ರಣಾಳಿಕೆಯನ್ನು ಟೀಕಿಸಿದ ಬಿಜೆಪಿಯು ಎಲ್ಲಾ ರಾಜ್ಯಗಳಲ್ಲೇ ನಮ್ಮನ್ನೇ ಅನುಸರಿಸಿತು. ದೇಶದ ಭದ್ರತೆ, ಎಲ್ಲಾ ವರ್ಗದ ಜನರಿಗೆ ಅವಕಾಶ, ಜತೆಗೆ ಭಾವನೆಗಳ ಬದಲಿಗೆ ಬದುಕು ಕಟ್ಟಿಕೊಡುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲೇ ಲೋಕಸಭೆ ಪ್ರಣಾಳಿಕೆಗೆ ಸಲಹೆಗಳನ್ನು ನೀಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕಾಂಗ್ರೆಸ್‌ ಲೋಕಸಭೆ ಪ್ರಣಾಳಿಕೆ ಸಮಿತಿಯಿಂದ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಸಭೆಯಲ್ಲಿ ಭಾಗವಹಿಸಬೇಕಿತ್ತು ಆದರೆ ಬರಲಾಗಿಲ್ಲ. 

150ಕ್ಕೂ ಹೆಚ್ಚು ಮಂದಿ ವಿಷಯ ತಜ್ಞರು ಬಂದಿದ್ದೀರಿ. ಯಾವುದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವೋ ಅಂತಹ ಸಲಹೆ ನೀಡಬೇಕು. ದೇಶದಲ್ಲಿ ಬದಲಾವಣೆ ಹಾಗೂ ಕ್ರಾಂತಿಗೆ ನಮ್ಮ ಸಲಹೆಗಳು ನೆರವಾಗಬೇಕು ಎಂದು ಕರೆ ನೀಡಿದರು.

ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರು ಈಗ ಮೋದಿ ಗ್ಯಾರಂಟಿ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಆರ್ಥಿಕತೆ ಹಾಳಾಗಲಿದೆ ಎಂದು ಹೇಳುತ್ತಿದ್ದವರು ಎಲ್ಲಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ಪ್ರಕಟಿಸಿದರು. 

ನಾವು ನಮ್ಮ ಜನರ ಬದುಕಿನಲ್ಲಿ ಬದಲಾವಣೆ ತರುವುದು ಮುಖ್ಯ. ನಮ್ಮ ಯೋಜನೆಗಳಿಂದ ವಿದ್ಯುತ್ ಬಿಲ್ ನಲ್ಲಿ 1500, ಗೃಹಲಕ್ಷ್ಮಿ ಯೋಜನೆಯಲ್ಲಿ 2000, ಶಕ್ತಿ ಯೋಜನೆಯಲ್ಲಿ 3000 ಹಣ ಉಳಿಯುತ್ತದೆ. 

ನಮ್ಮ ಐದು ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಸುಮಾರು 5-6 ಸಾವಿರ ಪ್ರತಿ ತಿಂಗಳು ಉಳಿತಾಯವಾಗಲಿದೆ. ಇದು ಜನಪರ ಆಡಳಿತ ಎಂದು ಹೇಳಿದರು.300 ಯೂನಿಟ್‌ ಉಚಿತಕ್ಕೆ ಮುಂದಾಗಿದ್ದೆವು:

ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸುವಾಗ ಗೃಹಜ್ಯೋತಿ ಯೋಜನೆಯಡಿ ಆರಂಭದಲ್ಲಿ 300 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲು ನಾನು, ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಅವರು ತೀರ್ಮಾನಿಸಿದ್ದೆವು. 

ನಾನು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದಾಗ ಅಷ್ಟು ಅಗತ್ಯವಿಲ್ಲ ಎನಿಸಿತು. ಯೋಜನೆ ಪ್ರಕಟಿಸುವ ದಿನ ಬೆಳಗಿನ ಜಾವ ಅದನ್ನು 200 ಯುನಿಟ್‌ಗೆ ಇಳಿಸಲಾಯಿತು ಎಂದರು. ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಶಿವರಾಜ್‌ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ಭಯಪಟ್ಟು ಮಾಡಿರುವ ಪಾತ್ರ ನನ್ನದು : ಪ್ರಜ್ವಲ್ ದೇವರಾಜ್
ಸ್ಪೀಕರ್ ವಿರುದ್ಧ ಹೊರಟ್ಟಿ ಸಿಟ್ಟು : ಅಸಮಾಧಾನಕ್ಕೆ ಪತ್ರದಲ್ಲಿ ಖಾದರ್‌ ಸ್ಪಷ್ಟನೆ