;Resize=(412,232))
ಬೆಂಗಳೂರು : ಜಗತ್ತಿನಲ್ಲಿ ನಡೆಯುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮಾಹಿತಿ ಇರುತ್ತದೆ. ಆದರೆ ಅವರದೇ ಇಲಾಖೆಯಲ್ಲಿ ನಡೆಯುವ ವಿಷಯಗಳು ಮಾತ್ರ ತಿಳಿಯುವುದಿಲ್ಲ. ಪ್ರಿಯಾಂಕ್ ಖರ್ಗೆ ಅವರೇ ಯಾರ ಕಿವಿಯಲ್ಲಿ ಹೂವು ಇಡಲು ಹೊರಟಿದ್ದೀರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಬುಧವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅನ್ಯಾಯ ಆಗಿದ್ದಕ್ಕೆ ನಾನು ಧ್ವನಿ ಎತ್ತಿದ್ದೇನೆ. ನಿಮ್ಮ ಕುಟುಂಬಕ್ಕೆ ಆಪ್ತರಾಗಿರುವ ಗೋವಿಂದ ರೆಡ್ಡಿ ಯಾರ ಕಾಲದಲ್ಲಿ ಆಯ್ಕೆ ಆಗಿದ್ದು? ಅವರ ಆಯ್ಕೆ ಹೇಗೆ ಆಯಿತು ಎಂಬುದನ್ನು ನಿಮ್ಮ ತಂದೆಯವರನ್ನು ಕೇಳಿ. ಆಹಾರ ಇಲಾಖೆಯಲ್ಲಿ ಅಧಿಕಾರಿ ಜ್ಞಾನೇಂದ್ರ ಇದ್ದರು. ಅಲ್ಲಿ ಇಬ್ಬರು ಹೆಣ್ಣುಮಕ್ಕಳ ಆಯ್ಕೆ ಹೇಗೆ ನಡೆಯಿತು? ಎಂದು ಕೇಳಿ ತಿಳಿದುಕೊಳ್ಳಿ. ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಮ್ಮ ಇಬ್ಬರು ಮಕ್ಕಳನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಿದ್ದಾರೆ. ಇದೆಲ್ಲಾ ನಿಮಗೆ ಗೊತ್ತಿಲ್ಲವೆಂದರೆ ಹೇಗೆ ಎಂದು ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಹಾಯಕ ಎಂಜಿನಿಯರ್ ಗ್ರೇಡ್ 1 ಹುದ್ದೆಗಳಿಗೆ ನೇಮಕಾತಿ ಸಂಬಂಧ 2025ರಲ್ಲಿ ಉತ್ತೀರ್ಣರಾಗಿರುವ ಹುಡುಗರ ಕೈಯಲ್ಲಿ ಅರ್ಜಿ ಹಾಕಿಸುತ್ತಾರೆ. ಅದಕ್ಕೆ ಕೆಎಟಿ ಮಧ್ಯಂತರ ತಡೆ ಕೊಡಲ್ಲ. ಬಳಿಕ ಹೈಕೋರ್ಟ್‌ಗೆ ಹೋದಾಗ ಕೆಪಿಎಸ್ಸಿ ಸಬ್ ಕಮಿಟಿ ತನಿಖೆಯ ಅಂತಿಮ ಆದೇಶಕ್ಕೆ ಒಳಪಟ್ಟು ನೇಮಕಾತಿ ಇರುತ್ತದೆ ಎಂದು ಹೈಕೋರ್ಟ್ ಒಪ್ಪಿಗೆ ನೀಡುತ್ತದೆ. 2024ರಲ್ಲಿ ಅಂತಿಮ ಪಟ್ಟಿ ಬಿಡುಗಡೆ ಆಗುತ್ತದೆ. ಅಂದಿನ ಕಾರ್ಯದರ್ಶಿ ಆತುರಾತುರವಾಗಿ ನೇಮಕಾತಿ ಪತ್ರ ಕೊಡುತ್ತಾರೆ. ಒಂದೂವರೆ ವರ್ಷದಿಂದ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿಲ್ಲ ಯಾಕೆ? ಪ್ರಕರಣವನ್ನು ಮುಗಿಸಿಕೊಳ್ಳುವುದು ಇಷ್ಟವಿಲ್ಲದೆ ರಾಜ್ಯ ಸರ್ಕಾರ ಬೇಕಂತಲೇ ದಿನಾಂಕ ಮುಂದಕ್ಕೆ ಹಾಕಿಸಿಕೊಂಡು ಹೋಗುತ್ತಿದೆ ಎಂದು ಆಕ್ಷೇಪಿಸಿದರು.
ನ್ಯಾಯಾಲಯದಲ್ಲಿ ಪ್ರಕರಣವಿದೆಯೆಂದು ಒಂದೂವರೆ ವರ್ಷದಿಂದ ಇಟ್ಟುಕೊಂಡಿದ್ದೀರಾ? ಅಂತಿಮ ಪಟ್ಟಿಯಲ್ಲಿ ಲೋಪದೋಷವಿದೆಯೆಂದು ಕೆಪಿಎಸ್‌ಸಿ ಅಧ್ಯಕ್ಷರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಆಗ ಆ ಇಲಾಖೆಯ ಮಂತ್ರಿ ಯಾರಾಗಿದ್ದರು? ಆ ಇಲಾಖೆಯ ಮಂತ್ರಿ ಗಮನಕ್ಕೆ ಬಾರದೇ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಯಿತಾ? ನಿಮ್ಮ ಗಮನಕ್ಕೆ ಬಾರದೇ ಕೋರ್ಟಿನಲ್ಲಿ ಕೇಸ್ ನಡೆಸುತ್ತಿದ್ದೀರಾ? ಪರೀಕ್ಷೆಯನ್ನು ಕೆಪಿಎಸ್ಸಿ ಮಾಡಿದರೂ ನೇಮಕಾತಿ ಪತ್ರ ಕೊಡುವುದು ಗ್ರಾಮೀಣಾಭಿವೃದ್ಧಿ ಇಲಾಖೆಯೇ ಅಲ್ಲವೇ? ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ನೀವು ಈ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದರೆ, ನಾನು ಬಿಡುಗಡೆ ಮಾಡಿರುವ ದಾಖಲೆಗಳು ಏನು ಹೇಳುತ್ತವೆ ಎಂದು ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆಗೈದರು.
ನಡೆದಿರುವ ಹಗರಣದ ಬಗ್ಗೆ ನಾನು ಮಾತನಾಡುತ್ತಿದ್ದರೆ, ಮುಗಿದು ಹೋಗಿರುವ ವಿಷಯದ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತಾಡುತ್ತಿದ್ದಾರೆ. ನಾನು ಜೈಲಿನಲ್ಲಿ ಕೆಪಿಎಸ್ಸಿ ಮಾಜಿ ಅಧ್ಯಕ್ಷರನ್ನು ಭೇಟಿಯಾಗಿದ್ದು ನಿಜ. ನನ್ನ ಮೇಲಿನ ರಾಜಕೀಯ ಸೇಡಿಗಾಗಿ ಅವರನ್ನು ಬಲಿಪಶು ಮಾಡಲಾಯಿತು. ಇತ್ತೀಚೆಗೆ ಹೈಕೋರ್ಟ್ ಕೊಟ್ಟ ತೀರ್ಪನ್ನು ಬಹುಶಃ ಸಚಿವರು ಓದಿಲ್ಲ. ಅವರ ವಿರುದ್ಧ ಯಾವ ಆರೋಪವನ್ನೂ ಸಾಬೀತು ಮಾಡಲು ಸಾಧ್ಯವಾಗಿಲ್ಲ ಎಂದು ಕೆಂಡಕಾರಿದರು.
ಡಾ.ಎಚ್.ಎನ್.ಕೃಷ್ಣ ಬಗ್ಗೆ ನಿಮ್ಮ ತಂದೆ ಕೇಳಪ್ಪ:
ಡಾ.ಎಚ್.ಎನ್.ಕೃಷ್ಣ ಅವರು ಯಾರ ಕಾಲದಲ್ಲಿ ಕೆಪಿಎಸ್ಸಿ ಅಧ್ಯಕ್ಷರಾಗಿ ನೇಮಕವಾದರು ಎಂಬುದು ಪ್ರಿಯಾಂಕ್ ಖರ್ಗೆ ಅವರಿಗೆ ತಿಳಿದಿಲ್ಲವೇ? ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ ಆ ನಿರ್ಧಾರ ಕೈಗೊಂಡ ಸಂಪುಟ ಸಭೆಯಲ್ಲಿ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಇದ್ದರು. ಗೊತ್ತಿಲ್ಲದಿದ್ದರೆ ಕೇಳಿ ತಿಳಿದುಕೊಳ್ಳಿ. ಡಾ.ಕೃಷ್ಣ ಅವರ ಕಾಲದಲ್ಲಿ 13 ಸಾವಿರ ಜನ ಉದ್ಯೋಗ ಪಡೆದರು. ನಾನು ಕದ್ದುಮುಚ್ಚಿ ರಾಜಕಾರಣ ಮಾಡುವುದಿಲ್ಲ. ಏನಿದ್ದರೂ ನೇರಾನೇರ ರಾಜಕಾರಣ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಗುಡುಗಿದರು.
ನನ್ನ ಮೇಲೆ ಯಾವ ತನಿಖೆ ಬೇಕಾದರೂ ಮಾಡಿಕೊಳ್ಳಲಿ. ಎಷ್ಟು ವರ್ಷ ಬೇಕಾದರೂ ತನಿಖೆ ಮಾಡಲಿ. ಅದರಲ್ಲಿ ಏನೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಇವರ ಅಕ್ರಮಗಳ ಬಗ್ಗೆ ನಾನು ದನಿ ಎತ್ತುತ್ತೇನೆ ಎಂಬ ಕಾರಣಕ್ಕೆ ಇವರು ನನ್ನನ್ನು ಹೆದುರಿಸುವ ಕೆಲಸ ಮಾಡುತ್ತಿದ್ದಾರೆ
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ