ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ: ಡಿಕೆಶಿಗೆ ವಿಜಯೇಂದ್ರ ಸವಾಲ್‌

Published : Sep 03, 2026, 05:36 AM IST
BY Vijayendra

ಸಾರಾಂಶ

‘ದಲಿತರಿಗೆ, ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ವಿಧಾನಸಭೆ ವಿಸರ್ಜಿಸಿ ಬನ್ನಿ, ಚುನಾವಣೆಗೆ ಹೋಗೋಣ. ಆಗ ಜನರೇ ತೀರ್ಮಾನ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.

ಮಸ್ಕಿ : ‘ದಲಿತರಿಗೆ, ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ವಿಧಾನಸಭೆ ವಿಸರ್ಜಿಸಿ ಬನ್ನಿ, ಚುನಾವಣೆಗೆ ಹೋಗೋಣ. ಆಗ ಜನರೇ ತೀರ್ಮಾನ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ 187 ಕೋಟಿ ರು. ಹಣ ವಾಪಸ್ ಆ ನಿಗಮಕ್ಕೆ ಜಮಾ ಆಗಬೇಕು ಎಂಬ ಆಗ್ರಹ ಸೇರಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಎರಡನೇ ದಿನವಾದ ಬುಧವಾರ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸಾಗಿತು. ಬೆಳಗ್ಗೆ ಸಂತೆಕೆಲ್ಲೂರಿನಿಂದ ಪ್ರಾರಂಭಗೊಂಡ ಯಾತ್ರೆ, 22 ಕಿ.ಮೀ. ಕ್ರಮಿಸಿ, ಗುಡದೂರಿಗೆ ಬಂದು ತಂಗಿತು. ಗುರುವಾರ ಗುಡದೂರು ಗ್ರಾಮದಿಂದ ಕುನಟಿಗಿ ಗ್ರಾಮದವರೆಗೆ ಪಾದಯಾತ್ರೆ ನಡೆಯಲಿದೆ.

ಪಾದಯಾತ್ರೆ ವೇಳೆ ಮಾತನಾಡಿದ ವಿಜಯೇಂದ್ರ, ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಗುಡುಗಿದರು. ಬಿಜೆಪಿಯ ‘ಬಳ್ಳಾರಿ ಚಲೋ’ ಬೃಹತ್‌ ಪಾದಯಾತ್ರೆಯ ಬಿಸಿ ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಮೊದಲ ದಿನವೇ ತಟ್ಟಿದೆ. ಅದಕ್ಕಾಗಿಯೇ ಮುಖ್ಯಮಂತ್ರಿ ಶಿವಕುಮಾರ್‌ ಅವರು ಗದಗಕ್ಕೆ ಹಾಗೂ ಡಿಸಿಎಂ ಪರಮೇಶ್ವರ್‌ ಅವರು ಮೈಸೂರಿಗೆ ತೆರಳಿ ಬರ ಪರಿಶೀಲನೆ ನಡೆಸಿದ್ದಾರೆ. ಈವರೆಗೆ ಬರಗಾಲ ಪರಿಶೀಲನೆಗೆ ಹೋಗದ ಸಿಎಂ ಮತ್ತು ಡಿಸಿಎಂ ಈಗ ಬರ ವೀಕ್ಷಣೆ ಆರಂಭಿಸಿದ್ದಾರೆ. ಎ.ಸಿ. ಹಾಲಿನಲ್ಲೇ ಕುಳಿತಿದ್ದವರು ಈಗ ಅನಿವಾರ್ಯವಾಗಿ ರೈತರ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ. ಇವರು ಹೀಗೆ ಮಾಡಲು ನಮ್ಮ ಹೋರಾಟವೇ ಕಾರಣ ಎಂದು ವಿಶ್ಲೇಷಿಸಿದರು.

ದಲಿತರಿಗೆ, ಯುವಕರಿಗೆ ಕಾಂಗ್ರೆಸ್‌ ಸರ್ಕಾರ ಅನ್ಯಾಯ ಮಾಡಿದೆ. ಸಂಪುಟದ ಸಚಿವರಿಗೆ ಬೆಂಗಳೂರೇ ಉತ್ತರ ಕರ್ನಾಟಕ ಆಗಿದೆ. ಯಾರೂ ಬೇರೆ ಜಿಲ್ಲೆಗಳಿಗೆ ಜಿಲ್ಲೆಗಳಿಗೆ ಭೇಟಿ ಕೊಡುತ್ತಿಲ್ಲ ಎಂದು ಆರೋಪಿಸಿದ ವಿಜಯೇಂದ್ರ, ದಲಿತರ ಅಭಿವೃದ್ಧಿಗಾಗಿ ಎಷ್ಟು ಹಣ ಮೀಸಲು ಇಟ್ಟಿದ್ದೀರಿ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಸಿಎಂಗೆ ಸವಾಲು ಹಾಕಿದರು.

ಇನ್ನಷ್ಟು ವಿಕೆಟ್ ಬೀಳಲಿವೆ:

ಸರ್ಕಾರದಲ್ಲಿ ಭ್ರಷ್ಟಾಚಾರ, ಕಮಿಷನ್‌ ಹಾವಳಿ ಹೆಚ್ಚಾಗಿದೆ. ಆಡಳಿತ ಪಕ್ಷದ ಶಾಸಕರೇ ಸಚಿವರ ವಿರುದ್ಧ ಕಮಿಷನ್‌ ಆರೋಪ ಮಾಡಿ ಸಿಎಂಗೆ ಪತ್ರ ಬರೆದಿದ್ದಾರೆ. ಈಗಿನ ಪರಿಸ್ಥಿತಿ ನೋಡಿದರೆ ಡಿಕೆಶಿ ಸರ್ಕಾರದ ಇನ್ನೂ ಎರಡು-ಮೂರು ವಿಕೆಟ್‌ಗಳು ಬೀಳಲು ತಯಾರಾದಂತೆ ಕಂಡು ಬರುತ್ತಿದೆ ಎಂದರು.

ಈ ಸರ್ಕಾರದಲ್ಲಿ ಎಲ್ಲಕ್ಕೂ ಲಂಚ ಕೊಡಬೇಕು

ಈ ಸರ್ಕಾರದಲ್ಲಿ ಎಲ್ಲಕ್ಕೂ ಲಂಚ ಕೊಡಬೇಕು. ಅದು ವಾಸ್ತವಿಕ ಸತ್ಯ. ಲಂಚ ಕೊಡದೆ ಏನೂ ಆಗಲ್ಲ. ಈಗ ಕೇವಲ 101 ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದೆ. ಇನ್ನೂ ಹಲವು ತಾಲೂಕುಗಳು ಬರಪೀಡಿತವಾಗಿವೆ. ಅವುಗಳನ್ನೂ ಬರಪೀಡಿತ ಎಂದು ಘೋಷಣೆ ಮಾಡಬೇಕಿದ್ದರೆ ಬಹುಶಃ ರೈತರು ಲಂಚ ಕೊಡಬೇಕಾಗಬಹುದು ಎಂದು ವ್ಯಂಗ್ಯವಾಡಿದರು.

ಈಗ ರಾಯಚೂರು ಭಾಗದ ಶಾಸಕರ ಸಭೆಯನ್ನು ಸಿಎಂ ಕರೆದಿದ್ದಾರಂತೆ. ಈ ಸಭೆ ರೈತರ ಸಮಸ್ಯೆ ಅರಿಯಲು ಅಲ್ಲ. ಬದಲಿಗೆ ಬಿಜೆಪಿ ಇದ್ದಾಗ ಏನೇನು ಹಗರಣ ಆಗಿದೆ ಅದನ್ನು ತಿಳಿಯಲು ಅಂತೆ, ಮೂರು ವರ್ಷದಿಂದ ಅಧಿಕಾರದಲ್ಲಿದ್ದಾಗ ಇವರೇನು ಕತ್ತೆ ಕಾಯುತ್ತಿದ್ದರೆ. ಇಂತಹ ಬೆದರಿಕೆ, ಧಮ್ಕಿಗೆ ನಾವು ಹೆದರಲ್ಲ ಎಂದು ಸವಾಲು ಹಾಕಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಗೃಹಲಕ್ಷ್ಮಿ ಆಧಾರ್‌- ವೋಟರ್‌ ಐಡಿ ಲಿಂಕ್‌ ಆಗಿದ್ದರಷ್ಟೇ ಹಣ
3 ರೆಸಾರ್ಟ್‌ಗಳಲ್ಲಿ ಕೆಪಿಎಸ್ಸಿ ಅಕ್ರಮ!