ಹರ್ಯಾಣದಲ್ಲಿ ಬ್ರೆಜಿಲ್‌ ಮಾಡೆಲ್‌ನಿಂದ ಮತ!

KannadaprabhaNewsNetwork |  
Published : Nov 06, 2025, 02:00 AM ISTUpdated : Nov 06, 2025, 06:25 AM IST
Rahul Gandhi

ಸಾರಾಂಶ

ಕರ್ನಾಟಕ, ಮಹಾರಾಷ್ಟ್ರ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗ, ಬಿಜೆಪಿ ವಿರುದ್ಧ ‘ಆಟಂ ಬಾಂಬ್‌’ ಎಸೆದಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಇದೀಗ 2024ರ ಹರ್ಯಾಣ ವಿಧಾನಸಭಾ ಚುನಾವಣೆ ಫಲಿತಾಂಶ ಮುಂದಿಟ್ಟುಕೊಂಡು ‘ಹೈಡ್ರೋಜನ್‌ ಬಾಂಬ್‌’ ಸಿಡಿಸಿದ್ದಾರೆ.

 ನವದೆಹಲಿ :  ಕರ್ನಾಟಕ, ಮಹಾರಾಷ್ಟ್ರ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗ, ಬಿಜೆಪಿ ವಿರುದ್ಧ ‘ಆಟಂ ಬಾಂಬ್‌’ ಎಸೆದಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಇದೀಗ 2024ರ ಹರ್ಯಾಣ ವಿಧಾನಸಭಾ ಚುನಾವಣೆ ಫಲಿತಾಂಶ ಮುಂದಿಟ್ಟುಕೊಂಡು ‘ಹೈಡ್ರೋಜನ್‌ ಬಾಂಬ್‌’ ಸಿಡಿಸಿದ್ದಾರೆ.

‘ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. 25 ಲಕ್ಷ ನಕಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಬ್ರೆಜಿಲ್‌ ಮಾಡೆಲ್‌ ಒಬ್ಬರ ಫೋಟೋ ಕೂಡಾ ಇದೆ. ಚುನಾವಣಾ ಆಯೋಗ-ಬಿಜೆಪಿ ಸೇರಿಕೊಂಡು ಅಭೂತಪೂರ್ವ ಗೆಲುವು ಸಾಧಿಸಬೇಕಿದ್ದ ಕಾಂಗ್ರೆಸ್‌ ಅನ್ನು ಸೋಲಿಸಿದೆ. ಹರ್ಯಾಣದಲ್ಲಿ ನಡೆದಿರೋದು ನಕಲಿ ಚುನಾವಣೆ, ಅಲ್ಲೀಗ ಅಧಿಕಾರದಲ್ಲಿರೋದೂ ನಕಲಿ ಸರ್ಕಾರ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ರಾಗಾ ಆರೋಪವೇನು?:

‘ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್‌ ಕುಮಾರ್‌ ಹಾಗೂ ಇತರೆ ಇಬ್ಬರು ಚುನಾವಣಾ ಅಧಿಕಾರಿಗಳು ಬಿಜೆಪಿ ಜತೆ ಸೇರಿಕೊಂಡು ಬಿಜೆಪಿಗೆ ಹರ್ಯಾಣದಲ್ಲಿ ಭಾರೀ ಬಹುಮತ ಸಿಗುವಂತೆ ಮಾಡಿದ್ದಾರೆ. ಅವರು ಪ್ರಧಾನಿ ಮೋದಿ ಅವರ ಜತೆ ಈ ಅಕ್ರಮದಲ್ಲಿ ಕೈಜೋಡಿಸಿದ್ದಾರೆ’ ಎಂದು ಕಿಡಿಕಾರಿದರು.

‘ಕಳೆದ ವರ್ಷ ನಡೆದಿದ್ದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ 25 ಲಕ್ಷ ಮತಗಳ ಕಳವು ಆಗಿದೆ. 5.21 ಲಕ್ಷ ಡೂಪ್ಲಿಕೇಟ್‌ ಮತದಾರರು, 93,174 ನಕಲಿ ಮತದಾರರು ಮತ್ತು 19.26 ಲಕ್ಷ ಗುಂಪು ಮತದಾರರ ಮೂಲಕ ಈ ಕಳವು ನಡೆದಿದೆ. ಚುನಾವಣಾ ಆಯೋಗವು ‘ಆಪರೇಷನ್‌ ಸರ್ಕಾರ್‌ ಚೋರಿ’ ಮೂಲಕ ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಸಿಗಬೇಕಿದ್ದ ಅಭೂತಪೂರ್ವ ಗೆಲುವನ್ನು ಸೋಲಾಗಿ ಪರಿವರ್ತಿಸಿದೆ. ನನ್ನ ಆರೋಪಗಳಿಗೆ ಶೇ.100ರಷ್ಟು ಸಾಕ್ಷ್ಯಗಳಿವೆ’ ಎಂದರು.

‘ಚುನಾವಣಾ ಆಯೋಗಕ್ಕೆ ನ್ಯಾಯಯುತ ಚುನಾವಣೆ ಬೇಕಿಲ್ಲ. ಆಯೋಗವು ಬಿಜೆಪಿಗೆ ನೆರವು ನೀಡಲು ಬಯಸುತ್ತದೆ. ಬೂತ್‌ಗಳಿಂದ ಮತದಾನದ ಸೀಸಿಟೀವಿ ದೃಶ್ಯಾವಳಿಗಳನ್ನು ಇದೇ ಕಾರಣಕ್ಕೆ ಅದು ಪಕ್ಷಗಳಿಗೆ ನೀಡುತ್ತಿಲ್ಲ, ಹರ್ಯಾಣ ಚುನಾವಣೆಗೂ ಮುನ್ನ 3.5 ಲಕ್ಷ ಮತದಾರರ ಹೆಸರು ಡಿಲೀಟ್‌ ಮಾಡಲಾಗಿದೆ. ಬಹುತೇಕ ಇವರೆಲ್ಲ ಕಾಂಗ್ರೆಸ್‌ ಬೆಂಬಲಿಗರೇ ಆಗಿರಬೇಕು’ ಎಂದು ಅಭಿಪ್ರಾಯಪಟ್ಟರು.

‘ಎಲ್ಲಾ ಪ್ರಮುಖ 5 ಎಕ್ಸಿಟ್‌ ಪೋಲ್‌ಗಳು ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ನಕಲಿ ಮತದಾರರ ಮೂಲಕ ಆ ಅಭೂತಪೂರ್ವ ಗೆಲುವನ್ನು ಸೋಲಾಗಿ ಬದಲಾಯಿಸಲಾಗಿದೆ. ಈ ‘ಎಚ್‌ ಫೈಲ್ಸ್‌’(ಹರ್ಯಾಣ ಅಕ್ರಮ) ಮೂಲಕ ಇಡೀ ರಾಜ್ಯವನ್ನೇ ಕಳವು ಮಾಡಲಾಗಿದೆ. ಹರ್ಯಾಣದಲ್ಲಿ ‘ಆಪರೇಷನ್‌ ಸರ್ಕಾರ್ ಚೋರಿ’ ಯೋಜನೆ ಕಾರ್ಯಗತಗೊಳಿಸುವ ಮೂಲಕ ಕಾಂಗ್ರೆಸ್‌ ಕೈಯಿಯಿಂದ ಗೆಲುವು ಕಸಿಯಲಾಗಿದೆ’ ಎಂದು ದೂರಿದರು.

ಪೋಸ್ಟಲ್‌ ವೋಟಲ್ಲಿ ಮೊದಲ ಬಾರಿ ವ್ಯತ್ಯಾಸ:

‘ಹರ್ಯಾಣ ಚುನಾವಣೆ ಕದಿಯಲು ಬಿಜೆಪಿ ವ್ಯವಸ್ಥೆ ಮಾಡಿಕೊಂಡಿತ್ತು. ಹರ್ಯಾಣದ ಇತಿಹಾಸದಲ್ಲಿ ಮೊದಲ ಬಾರಿಗೆ ನೈಜ ಮತಗಳಿಗಿಂತ ಪೋಸ್ಟಲ್‌ ಮತಗಳು ಭಿನ್ನವಾಗಿದ್ದವು. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪೋಸ್ಟಲ್‌ ಮತಗಳ ಮೂಲಕ 73 ಸೀಟುಗಳು (73 ಕ್ಷೇತ್ರಗಳಲ್ಲಿ ಮನ್ನಡೆ) ಸಿಕ್ಕರೆ, ಬಿಜೆಪಿ 17 ಸೀಟುಗಳನ್ನು (17 ಕ್ಷೇತ್ರಗಳಲ್ಲಿ ಮುನ್ನಡೆ) ಗಳಿಸಿತು. ಆದರೆ ಇವಿಎಂಗಳನ್ನು ಓಪನ್‌ ಮಾಡಿದ ನಂತರ ಪರಿಸ್ಥಿತಿಯೇ ಬದಲಾಯಿತು. ಬಿಜೆಪಿ ಭಾರಿ ಮುನ್ನಡೆ ಸಾಧಿಸಿತು. ಈ ರೀತಿ ಹಿಂದೆ ಯಾವತ್ತೂ ಆಗಿಲ್ಲ. ಅಂಚೆ ಮತದಲ್ಲಿ ಮುನ್ನಡೆ ಇದ್ದವರೇ ಹೆಚ್ಚಾಗಿ ಚುನಾವಣೆ ಗೆಲ್ಲುತ್ತಿದ್ದರು’ ಎಂದರು.

ಸೈನಿ ‘ವ್ಯವಸ್ಥೆ’ ಮಾಡಿದ್ದರು:

‘ಚುನಾವಣಾಪೂರ್ವ ಸಮೀಕ್ಷೆಗಳು ಕಾಂಗ್ರೆಸ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿದ್ದವು. ಆದರೆ ಇವಿಎಂ ಮತ ಎಣಿಕೆ ವೇಳೆ ಎಲ್ಲ ತಲೆಕೆಳಗಾಯಿತು. ಹರ್ಯಾಣ ಸಿಎಂ ನಯಾಬ್‌ ಸಿಂಗ್‌ ಸೈನಿ ಮಾತು ಇದಕ್ಕೆ ಪುಷ್ಟಿ ನೀಡುತ್ತದೆ. ಫಲಿತಾಂಶಕ್ಕೂ 2 ದಿನ ಮುನ್ನ ಸೈನಿ ಅವರು ‘ಬಿಜೆಪಿ ಗೆಲ್ಲಲಿದೆ. ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದಿದ್ದರು. ಆ ‘ವ್ಯವಸ್ಥೆ’ ಏನು ಎಂಬುದು ನಮಗೆ ಈಗ ಗೊತ್ತಾಗಿದೆ. ಅದೇ ಚುನಾವಣಾ ಆಯೋಗದ ಜತೆ ಸೇರಿಕೊಂಡು ಮತಚೋರಿ’ ಎಂದು ಆರೋಪಿಸಿದರು.

8 ಕ್ಷೇತ್ರಗಳಲ್ಲಿ ಸಂದೇಹ:

‘ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋತಿದೆ. ಅದರಲ್ಲಿ ಒಂದು ಕ್ಷೇತ್ರದಲ್ಲಿ ಕೇವಲ 32 ಮತಗಳಿಂದ ಸೋತಿದೆ. ಈ ಎಲ್ಲ 8 ಕ್ಷೇತ್ರಗಳಲ್ಲಿನ ಅಂತರಗಳನ್ನು ಕೂಡಿದಾಗ ಒಟ್ಟು 22,779 ಕ್ಕೆ ತಲುಪಿದೆ. ಹೀಗಾಗಿ ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ 22,779 ಮತಗಳಿಂದ ಸೋತಿದೆ ಎಂಬುದು ವಿದಿತವಾಗುತ್ತದೆ ಎಂದು ಅವರು ವ್ಯಾಖ್ಯಾನಿಸಿದರು.

ಕರ್ನಾಟಕ ವಿಚಾರ ಪ್ರಸ್ತಾಪ:

ಕರ್ನಾಟಕದ ಮಹಾದೇವಪುರ ಮತ್ತು ಆಳಂದದ ಮತ ಅಕ್ರಮ ಕುರಿತೂ ಪ್ರಸ್ತಾಪಿಸಿದ ರಾಹುಲ್‌, ‘ಅಕ್ರಮಗಳು ಆ ಎರಡು ಕ್ಷೇತ್ರಗಳಿಗಷ್ಟೇ ಸೀಮಿತವಾಗಿಲ್ಲ. ಇಡೀ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈ ರೀತಿ ಮತಗಳವು ಮಾಡಲಾಗಿದೆ ಎಂಬುದು ಆಳಂದ ಹಾಗೂ ಮಹದೇವಪುರದಲ್ಲಿ ಅಧ್ಯಯನ ನಡೆಸಿದ ನಂತರ ಸಂದೇಹ ಮೂಡಿತು. ಅದೀಗ ನಿಜವಾಗಿದೆ’ ಎಂದು ಹೇಳಿದರು.

ಜತೆಗೆ, ನಾನು ಈ ಹಿಂದೆ ‘0’ ಸಂಖ್ಯೆಯ ಮನೆ ನಂಬರ್‌ ಕುರಿತು ಪ್ರಸ್ತಾಪಿಸಿದಾಗ ಚುನಾವಣಾ ಆಯೋಗವು ದೇಶದ ಜನರಿಗೆ ಸುಳ್ಳು ಹೇಳಿತ್ತು. ಮನೆ ಇಲ್ಲದವರಿಗೆ ಈ ರೀತಿ ಮನೆ ‘0’ ಮನೆ ನಂಬರ್‌ ನೀಡಲಾಗುತ್ತದೆ ಎಂದು ಹೇಳಿಕೊಂಡಿತ್ತು. ಆದರೆ, ಚುನಾವಣಾ ಅಕ್ರಮಕ್ಕೆ ನೆರವು ನೀಡಲು ಇಂಥ ಮನೆ ನಂಬರ್‌ ನೀಡಲಾಗುತ್ತದೆ ಎಂದು ರಾಹುಲ್‌ ಪ್ರತಿಪಾದಿಸಿದರು.---

22 ಮತದಾರಿಗೆ ಬ್ರೆಜಿಲ್‌ ರೂಪದರ್ಶಿ ಫೋಟೋ!

ನವದೆಹಲಿ: ಹರ್ಯಾಣದ ಮತದಾರರ ಪಟ್ಟಿಯಲ್ಲಿನ 25 ಲಕ್ಷ ನಕಲಿ ಮತದಾರರಲ್ಲಿ ಬ್ರೆಜಿಲ್‌ನ ರೂಪದರ್ಶಿಯ ಫೋಟೋ ಕೂಡ ಇರುವುದನ್ನು ರಾಹುಲ್‌ ಗಾಂಧಿ ಬಹಿರಂಗಪಡಿಸಿದ್ದಾರೆ.

‘ಬ್ರೆಜಿಲ್‌ ರೂಪದರ್ಶಿಯ ಫೋಟೋವನ್ನು 22 ಮತದಾರರ ಹೆಸರಿಗೆ ಲಗತ್ತಿಸಲಾಗಿದೆ. 10 ಬೇರೆ ಬೇರೆ ಬೂತ್‌ಗಳಲ್ಲಿ 22 ಬಾರಿ ಇವರು ಮತ ಚಲಾಯಿಸಿದ್ದಾರೆ. ಆಕೆಗೆ ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ ಮತ್ತು ವಿಮ್ಲಾ ಎಂಬ ವಿಭಿನ್ನ ಹೆಸರುಗಳೂ ಇವೆ’ ಎಂದು ರಾಹುಲ್‌ ಆರೋಪಿಸಿದರು. ಈ ಫೋಟೋದಲ್ಲಿರುವ ನೈಜ ಮಾಡೆಲ್‌ ಹೆಸರು ಮ್ಯಾಥ್ಯೂಸ್‌ ಫೆರ್ರೋ ಎಂದು ಹೇಳಲಾಗಿದೆ.

ಇದೇ ವೇಳೆ ಮತ್ತೊಂದು ಪ್ರಕರಣದಲ್ಲಿ 223 ಮತಗಳಿಗೆ ಒಬ್ಬಳೇ ಮಹಿಳೆಯ ಫೋಟೋವನ್ನು 2 ಬೂತ್‌ಗಳಲ್ಲಿ ಹಾಕಲಾಗಿದೆ ಎಂದೂ ಇದೇ ವೇಳೆ ರಾಹುಲ್‌ ಆರೋಪಿಸಿದರು. 

ರಾಗಾ ಆರೋಪ ಸುಳ್ಳು:

ಆಯೋಗ- ಕಾಂಗ್ರೆಸ್‌ ಬೂತ್‌ ಏಜೆಂಟರು ಯಾಕೆ ಪ್ರಶ್ನಿಸಲಿಲ್ಲ?ನವದೆಹಲಿ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮತಗಳವು ನಡೆಸಲಾಗಿದೆ ಎಂಬ ರಾಹುಲ್‌ ಗಾಂಧಿ ಆರೋಪವನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿಹಾಕಿವೆ. ‘ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಬೂತ್‌ ಏಜೆಂಟರು ಯಾಕೆ ಮತದಾರರ ಪಟ್ಟಿ ಹಾಗೂ ಒಂದಕ್ಕಿಂತ ಹೆಚ್ಚಿನ ಮತದಾನ ಬಗ್ಗೆ ಆಕ್ಷೇಪ ಎತ್ತಲಿಲ್ಲ?’ ಎಂದು ಆಯೋಗ ಪ್ರಶ್ನಿಸಿದೆ. 

PREV
Read more Articles on

Recommended Stories

ರಾಹುಲ್‌ ಜೊತೆ ಸಿಎಂ, ಡಿಸಿಎಂ ಭೇಟಿ ವಿಳಂಬ?
ಹಾಯ್‌ ಎಂದ ತೇಜಸ್ವಿ, ತಿರುಗಿಯೂ ನೋಡದ ತೇಜ್‌!