ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ

Published : Jan 16, 2026, 11:40 AM IST
HD Kumaraswamy

ಸಾರಾಂಶ

ರಾಜ್ಯ ರಾಜಕೀಯದಿಂದ ನಾನು ದೂರ ಸರಿಯಲ್ಲ. ನಾನು ರಾಜಕಾರಣದಲ್ಲೇ ಇದ್ದೇನೆ. ನಾನು ಎಲ್ಲಿರಬೇಕು ಎಂದು ತೀರ್ಮಾನ ಮಾಡುವುದು ರಾಜ್ಯದ ಜನತೆ. ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕು ಎಂದು ಜನತೆಯ ಆಶಯದ ಮೇರೆಗೆ ತೀರ್ಮಾನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

  ಬೆಂಗಳೂರು :  ರಾಜ್ಯ ರಾಜಕೀಯದಿಂದ ನಾನು ದೂರ ಸರಿಯಲ್ಲ. ನಾನು ರಾಜಕಾರಣದಲ್ಲೇ ಇದ್ದೇನೆ. ನಾನು ಎಲ್ಲಿರಬೇಕು ಎಂದು ತೀರ್ಮಾನ ಮಾಡುವುದು ರಾಜ್ಯದ ಜನತೆ. ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕು ಎಂದು ಜನತೆಯ ಆಶಯದ ಮೇರೆಗೆ ತೀರ್ಮಾನ ಮಾಡುತ್ತೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನ ತಮ್ಮ ನಿವಾಸದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಎನ್‌ಡಿಎ ಮೈತ್ರಿಯಲ್ಲಿದ್ದೇವೆ. ಈ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು. ನಮ್ಮ ಉದ್ದೇಶ ರಾಜ್ಯದಲ್ಲಿ ಉತ್ತಮ ಸರ್ಕಾರ ತರಬೇಕು ಎನ್ನುವುದು. ಇದು ನನ್ನ ವೈಯಕ್ತಿಕ ಉದ್ದೇಶ ಎಂದು ಎಂದರು.

ರಾಜ್ಯದ ಆಡಳಿತ ಗಮನಿಸುತ್ತಿದ್ದೇನೆ:

ರಾಜ್ಯದಲ್ಲಿ ಈಗ ಆಡಳಿತ ಹೇಗೆ ನಡೆಯುತ್ತಿದೆ ಎಂದು ನಾನು ನಿರಂತರವಾಗಿ ಗಮನಿಸುತ್ತಿದ್ದೇನೆ. ಒಳ್ಳೆಯ ಸರ್ಕಾರ ಬಂದು ಜನತೆ ನೆಮ್ಮದಿಯಿಂದ ಇರಬೇಕು. ಈ ನಿಟ್ಟಿನಲ್ಲಿ ನಾಡಿನ ಜನ ನಾನು ಯಾವ ಸ್ಥಾನದಲ್ಲಿರಬೇಕು ಎಂದು ತೀರ್ಮಾನ ಮಾಡುತ್ತಾರೋ ಅದರಂತೆ ನಡೆಯುತ್ತೇನೆ. ಈ ವಿಷಯ ನನ್ನ ಕೈಯಲ್ಲಿಲ್ಲ ಎಂದು ತಿಳಿಸಿದರು.

ನಾನು ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಅಂತ ಯಾರಾದರೂ ತಿಳಿದುಕೊಂಡಿದ್ದರೆ ತಪ್ಪು. ನಾನು ರಾಜ್ಯ ರಾಜಕಾರಣದಿಂದ ದೂರ ಸರಿಯಲ್ಲ. ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ. ಕೇಂದ್ರದಲ್ಲಿ ಪ್ರಧಾನಿಗಳು ಉತ್ತಮ ಜವಾಬ್ದಾರಿ ಕೊಟ್ಟಿದ್ದಾರೆ. ಎರಡು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ರಾಜ್ಯ ರಾಜಕೀಯಕ್ಕೆ ಯಾವ ಸಮಯದಲ್ಲಿ ಬರಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ. ಅದರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದರು.

-ಇನ್ನೂ ಸ್ಪಂದಿಸದ ಮುಖ್ಯ ಕಾರ್ಯದರ್ಶಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಿರಂತರವಾಗಿ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಸರಿಯಲ್ಲ, ಶಿಡ್ಲಘಟ್ಟ ಪ್ರಕರಣ ಬಗ್ಗೆ ನಾನು ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ತಿಳಿಸಿದ್ದೇನೆ. ಈವರೆಗೆ ಅವರು ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇವತ್ತು ಸಂಕ್ರಾಂತಿ ಹಬ್ಬವಿದೆ. ಹೀಗಾಗಿ ನಾನು ಮತ್ತೆ ಅವರನ್ನು ಕೇಳಲು ಹೋಗಿಲ್ಲ ಎಂದು ಎಚ್‌.ಡಿ ಕುಮಾರಸ್ವಾಮಿ ಹೇಳಿದರು.

ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣ ನಿಜಕ್ಕೂ ಬೇಸರ ತರಿಸಿದೆ. ನಮ್ಮ ಪಕ್ಷ ಅಂತಲ್ಲ, ಯಾವುದೇ ಪಕ್ಷದ ಕಾರ್ಯಕರ್ತರು, ಮುಖಂಡರೂ ಅಧಿಕಾರಿಗಳ ಜತೆ ಅನುಚಿತವಾಗಿ ವರ್ತಿಸಬಾರದು. ಒಂದೆರಡು ಪ್ರಕರಣಗಳಲ್ಲಿ ಕಠಿಣ ಕ್ರಮ ಜರುಗಿಸಿದರೆ ಅದು ಪಾಠವಾಗುತ್ತದೆ.

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮುಂಬೈ ಪಾಲಿಕೆ ಚುನಾವಣೆಯಲ್ಲಿ ಅಳಿಸದ ಇಂಕ್‌ ಅಳಿಸಿದ ವಿವಾದ
ಪ್ರಾರ್ಥನೆ ಮಾತಿನ ಬೆನ್ನಲ್ಲೇ ಡಿಕೆಶಿ ಇಂದು ದಿಲ್ಲಿ ಭೇಟಿ ಕುತೂಹಲ