ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ : ಶಾಸಕ ಜಿಟಿಡಿ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿ

Published : Oct 04, 2024, 07:38 AM IST
Union Minister HD Kumaraswamy

ಸಾರಾಂಶ

ಮುಡಾ ಹಗರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆಗೆ ಗರಂ ಆಗಿರುವ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, 'ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ಆಗಿದೆ' ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರು : ಮುಡಾ ಹಗರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆಗೆ ಗರಂ ಆಗಿರುವ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, 'ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ಆಗಿದೆ' ಎಂದು ವ್ಯಂಗ್ಯವಾಡಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ಬದಲಿಗೆ ಮುಖ್ಯಮಂತ್ರಿಗಳು ಜಿ.ಟಿ.ದೇವೇಗೌಡ ಅವರ ಹೇಳಿಕೆಯನ್ನು ಇಟ್ಟುಕೊಂಡು ರಕ್ಷಣೆ ಪಡೆಯುವುದು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ. ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಕ್ಕೆ ರಾಜೀನಾಮೆ ಕೇಳಿಲ್ಲ.

ಅಧಿಕಾರವನ್ನು ದುರುಪ ಯೋಗ ಮಾಡಿಕೊಂಡಿರುವುದಕ್ಕೆ ರಾಜೀನಾಮೆ ಕೇಳಿದ್ದೇನೆ. ಸರ್ಕಾರವು ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಅಧಿಕಾರಿಗಳ ಮೂಲಕ ಸಾಕ್ಷಿನಾಶ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಏನಿದೆ? ಹಣ ತೆಗೆದುಕೊಂಡಿದ್ದೀನಾ? ಪ್ರಕರಣ 15 ವರ್ಷ ಹಳೆಯದ್ದಾಗಿದೆ. ನಮ್ಮ ಪಕ್ಷದ ಶಾಸಕರ ಹೇಳಿಕೆಯು ಕಳ್ಳನಿಗೆ ಒಂದು ಪಿಳ್ಳೆನೆವ ಎನ್ನುವಂತಾಗಿದೆ ಎಂದು ತಿಳಿಸಿದರು. ತಮ್ಮ ವಿರುದ್ಧ ಉದ್ಯಮಿ ವಿಜಯ್ ತಾತಾ ದೂರು ನೀಡಿರುವ ವಿಚಾರಕ್ಕೆ, 'ಈಗ ಅದಕ್ಕೆಲ್ಲ ಉತ್ತರ ಕೊಡುವುದಿಲ್ಲ. ಆತ ನನಗೆ ಸಂಬಂಧ ಇಲ್ಲದವನು. ಯಾರು ಕೊಡಿಸಿದ್ದಾರೆ ಎಂಬುದನ್ನು ಅಮೇಲೆ ಚರ್ಚೆ ಮಾಡೋಣ' ಎಂದರು.

ಕದ್ದ ಮೇಲೆ ತಪ್ಪಾಯ್ತು ಎಂದಂತೆ: ಮೈಸೂರಿನ ವಿವಾದಿತ 14 ನಿವೇಶನ ಮುಡಾಗೆ ವಾಪಸ್‌ ಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಕ್ರಮ ಹೇಗಿದೆಯೆಂದರೆ 'ಕಳ್ಳತನ ಮಾಡಿ ಆಮೇಲೆ ತಪ್ಪಾಯಿತು' ಎಂಬಂತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಜತೆಗೆ, ಕಳ್ಳತನ ಮಾಡಿ ಆಮೇಲೆ ತಪ್ಪಾಯ್ತು ಅಂದರೆ ಬಿಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಸಿದ್ದರಾಮಯ್ಯ ಅವರ ಪತ್ನಿ ನನಗೆ ಸಹೋದರಿ ಸಮಾನ. ಅವರ ಬಗ್ಗೆ ಗೌರವ ಇಟ್ಟುಕೊಂಡೇ ಈ ಮಾತು ಹೇಳುತ್ತಿದ್ದೇನೆ ಎಂದರು.

ಏಕಾಏಕಿ ಪತ್ರ ಬರೆದು ನಮಗೆ ನಿವೇಶನಗಳು ಬೇಡ, ಅದನ್ನು ವಾಪಸ್ ಮಾಡುತ್ತಿದ್ದೇನೆ. ಮನೆ, ಚಿನ್ನ, ಒಡವೆ ಯಾವುದರ ಮೇಲೂ ಮಮತೆ ಇಲ್ಲ. ನನ್ನ ಪತಿಯ ಮುಂದೆ ಅದೆಲ್ಲ ತೃಣಕ್ಕೆ ಸಮಾನ ಎಂದು ಪಾರ್ವತಿ ಅವರು ಹೇಳಿಕೊಂಡಿದ್ದಾರೆ. ನಾನು ಆ ಹೆಣ್ಣು ಮಗಳ ಬಗ್ಗೆ ಮಾತನಾಡಲ್ಲ. ಆದರೆ ಅದೇನೋ‌ ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯ ಮಾಡಿರುವ ಸಿದ್ದರಾಮಯ್ಯನವರ ಗಮನಕ್ಕೆ ತಾರದೇ ಆ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆಯೇ? ವಿನಾಕಾರಣ ಸಿದ್ದರಾಮಯ್ಯ ನನ್ನನ್ನು ಸುಳ್ಳುಗಾರ ಎಂದು ಹೇಳುತ್ತಾರೆ. ಆದರೆ ಇವರ ಮಾತು ಕೇಳಿಸಿಕೊಂಡರೆ ಸುಳ್ಳು ಎಲ್ಲಿ ಹುಟ್ಟಿದೆ ಎನ್ನುವುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು. ನಿವೇಶನ ವಾಪಸ್ ಕೊಡುವ ತರಾತುರಿಯ ತೀರ್ಮಾನ ತೆಗೆದುಕೊಳ್ಳುವಂತೆ ಹೇಳಿಕೊಟ್ಟಿದ್ದು ಯಾರು? ಕಳ್ಳತನ ಮಾಡಿ ಆಮೇಲೆ ತಪ್ಪಾಯ್ತು ಅಂದರೆ ಬಿಡಲು ಸಾಧ್ಯವೇ? ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌