;Resize=(412,232))
ಬೆಂಗಳೂರು : ನಾನು ಮುಖ್ಯಮಂತ್ರಿಯಾದಾಗ ಜೆಡಿಎಸ್‌ನಿಂದ ಸ್ವಲ್ಪ ಮಟ್ಟಿಗಾದರೂ ಸಹಕಾರ ಸಿಗುತ್ತದೆ ಎಂಬ ನಿರೀಕ್ಷೆಯನ್ನೇ ಇಟ್ಟುಕೊಂಡಿರಲಿಲ್ಲ. ಅದಕ್ಕೆ ತಕ್ಕಂತೆ ಅವರು ನಡೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಏನೇ ಮಾತನಾಡಿದರೂ ನಾನು ಸ್ವಾಗತಿಸುತ್ತೇನೆ. ಅವರು ನನ್ನನ್ನು ತಿದ್ದುತ್ತಿದ್ದಾರೆ. ಎಚ್ಚರದಿಂದ ಇರುವಂತೆ ಮಾಡುತ್ತಿದ್ದಾರೆ ಎಂದೂ ಮಾರ್ಮಿಕವಾಗಿ ಹೇಳಿದ್ದಾರೆ.
ದಸರಾ ಹಬ್ಬದ ಅಂಗವಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ವಿಶೇಷ ಸಂದರ್ಶನ ನೀಡಿದ ಅವರು ವಿರೋಧ ಪಕ್ಷಗಳ ನಡವಳಿಕೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳು ಸೇರಿ ಹಲವು ವಿಚಾರಗಳ ಕುರಿತಂತೆ ಮುಕ್ತವಾಗಿ ಮಾತುಗಳನ್ನಾಡಿದರು.
ನಾನು ಎಲ್ಲ 224 ಶಾಸಕರಿಗೂ ಮುಖ್ಯಮಂತ್ರಿ. ನಾನು ಮುಖ್ಯಮಂತ್ರಿಯಾದಾಗ ಜೆಡಿಎಸ್ ಪಕ್ಷದಿಂದ ಸಹಕಾರವನ್ನೇ ನಿರೀಕ್ಷಿಸಿರಲಿಲ್ಲ. ಅಲ್ಲಿನ ನಾಯಕರ ಬಗ್ಗೆ ನನಗೆ ಚೆನ್ನಾಗಿ ತಿಳಿದಿತ್ತು. ಇನ್ನು, ರಾಷ್ಟ್ರೀಯ ಪಕ್ಷವಾದ ಬಿಜೆಪಿ ಆರು ತಿಂಗಳಾದರೂ ನನಗೆ ಸಮಯ ನೀಡುತ್ತಾರೆ ಎಂದು ತಿಳಿದಿದ್ದೆ. ಆದರೆ, ಅವರು ಕೂಡ ತಾಳ್ಮೆಯಿಲ್ಲದೆ ಮೊದಲ ದಿನದಿಂದಲೇ ನನ್ನನ್ನು ವಿರೋಧಿಸಲು ಶುರು ಮಾಡಿದರು. ಆದರೆ, ನನ್ನ ವೇಗವನ್ನು ಅವರು ನಿಲ್ಲಿಸಲು ಆಗಲ್ಲ. ನಾನು ಪ್ರತಿ ದಿನವೂ ಕೆಲಸ ಮಾಡುತ್ತಲೇ ಬಂದಿದ್ದೇನೆ ಎಂದರು.
ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತಂತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಅವರಿಗೆ ಸಂಖ್ಯಾಬಲವಿಲ್ಲದಿದ್ದರೂ ಕುಮಾರಸ್ವಾಮಿ ಸವಾಲು ಹಾಕಿ ಅಭ್ಯರ್ಥಿ ಕಣಕ್ಕಿಳಿಸಿದರು. ಚುನಾವಣೆಗೂ ಮುನ್ನ ಬೇರೆ ಕಾರಣಕ್ಕಾಗಿ ಜೆಡಿಎಸ್‌ನ 10 ಶಾಸಕರು ನನ್ನನ್ನು ಭೇಟಿಯಾಗಿದ್ದರು. ಆಗ ನಾನು ಗಿಳಿಗೆ ಹೇಳಿದ ಹಾಗೆ ಅವರಿಗೆ ಹೇಳಿದೆ. ಸಂಖ್ಯಾಬಲವಿಲ್ಲ, ಅಭ್ಯರ್ಥಿ ಹಾಕಬೇಡಿ ಎಂದಿದ್ದೆ. ಆದರೆ, ಅವರು ನಮ್ಮ ನಾಯಕರು ನಮ್ಮನ್ನೆಲ್ಲ ಪರೀಕ್ಷೆ ಮಾಡಬೇಕಂತೆ. ಅದಕ್ಕಾಗಿ ಅಭ್ಯರ್ಥಿ ಕಣಕ್ಕಿಳಿಸುತ್ತಾರಂತೆ ಎಂದಿದ್ದರು. ಕೊನೆಗೆ 12 ಶಾಸಕರು ಅಡ್ಡಮತದಾನ ಮಾಡಿದರು. ಯಾರು ಮಾಡಿದರು ಎಂಬುದು ನನಗೆ ತಿಳಿದಿಲ್ಲ. ನಾನು ಇಬ್ಬರಲ್ಲಿ ಮತ ಕೇಳಿದ್ದೆ, ಅವರು ನಮ್ಮ ಅಭ್ಯರ್ಥಿಗೆ ಮತ ಹಾಕಿದರು ಎಂದು ಸಿಎಂ ಹೇಳಿದರು.
ಕುಮಾರಸ್ವಾಮಿ ವಿರೋಧದ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನನ್ನನ್ನು ಮುಖ್ಯಮಂತ್ರಿ ಎಂದು ಅವರು ಒಪ್ಪಿಕೊಂಡಿಲ್ಲ. ಅದನ್ನು ಈಗಾಗಲೇ ಹೇಳಿದ್ದಾರೆ. ನನ್ನ ಹೆಸರು ಹೇಳುವುದೂ ಅವಮಾನ ಎನ್ನುತ್ತಾರೆ. ಆದರೆ, ನಾನು ಜೆಡಿಎಸ್ ಉಳಿಯಬೇಕು, ಮತ್ತಷ್ಟು ಗಟ್ಟಿಯಾಗಬೇಕು ಎನ್ನುತ್ತೇನೆ. ಕುಮಾರಸ್ವಾಮಿ ಅವರು ಏನೇ ಮಾತನಾಡಿದರೂ ಅದನ್ನು ಸ್ವಾಗತಿಸುತ್ತೇನೆ. ನನ್ನನ್ನು ಅವರು ತಿದ್ದುತ್ತಿದ್ದಾರೆ, ಎಚ್ಚರಿಕೆಯಿಂದಿರುವಂತೆ ಮಾಡುತ್ತಿದ್ದಾರೆ. ನಾನು ಎಲ್ಲ ಸವಾಲುಗಳನ್ನೂ ಸ್ವೀಕಾರ ಮಾಡುತ್ತಾ ಕೆಲಸ ಮಾಡುತ್ತಿದ್ದೇನೆ ಎಂದರು.
ಬಿಡದಿ ಟೌನ್‌ಶಿಪ್ ಅನುಷ್ಠಾನವಾಗಲೇಬೇಕು ಎಂಬ ಬಗ್ಗೆ ನನಗೆ ಪ್ರತಿಷ್ಠೆಯಿಲ್ಲ ಎಂದ ಡಿ.ಕೆ.ಶಿವಕುಮಾರ್, ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ಯೋಜನೆ ರೂಪಿಸಿದ್ದರು. 9 ಸಾವಿರ ಎಕರೆ ಭೂಮಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ 1 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ನಂತರದ ಸರ್ಕಾರಗಳೂ ಆ ಯೋಜನೆ ರದ್ದು ಮಾಡಲಿಲ್ಲ. ಕುಮಾರಸ್ವಾಮಿ ಅವರು ಬಿಡದಿ ಮಾತ್ರವಲ್ಲ 5 ಕಡೆ ಟೌನ್‌ಶಿಪ್ ಮಾಡಬೇಕು ಎಂದು ಯೋಜಿಸಿದ್ದರು. ಈಗ ನಾನು ಬಿಡದಿ ಟೌನ್‌ಶಿಪ್‌ನ ಭೂಸ್ವಾಧೀನದ ಡಿ-ನೋಟಿಫೈ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಹಿಂದೆ ಏನಿತ್ತೋ ಅದನ್ನೇ ಮುಂದುವರಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸದ್ಯ ರೈತರಿಗೆ ಪ್ರತಿ ಎಕರೆಗೆ 2.50ರಿಂದ 3 ಕೋಟಿ ರು. ಪರಿಹಾರ ನೀಡಲಾಗುತ್ತಿದೆ. ಭೂಮಿ ನೀಡಿದವರಿಗೆಲ್ಲ ಪರಿಹಾರ ಕೊಡಲಾಗುತ್ತಿದೆ. ಅಭಿವೃದ್ಧಿ ಶುಲ್ಕ ಸೇರಿಸಿದರೆ ಸುಮಾರು 4ರಿಂದ 5 ಕೋಟಿ ರು. ಪರಿಹಾರ ದೊರೆಯುತ್ತದೆ. ಕೆಲವರು ಭೂಮಿ ಉಳಿಸಿಕೊಳ್ಳುತ್ತೇವೆ ಎಂದಿದ್ದಾರೆ. ಅದಕ್ಕೂ ಒಪ್ಪಿಕೊಂಡಿದ್ದೇವೆ. ಆದರೆ, ಡಿ-ನೋಟಿಫೈ ಮಾತ್ರ ಮಾಡಲು ಸಾಧ್ಯವಿಲ್ಲ. ಹಿಂದೆ ಬಿ.ಎಸ್. ಯಡಿಯೂರಪ್ಪ ಜೈಲಿಗೆ ಹೋಗಿದ್ದನ್ನು ನಾವು ನೋಡಿದ್ದೇವೆ. ಇನ್ನು, ಕುಮಾರಸ್ವಾಮಿ ಅವರ ಕಾಲದಲ್ಲಿನ ಯೋಜನೆಯನ್ನು ನಾವು ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಅವರು ಖುಷಿ ಪಡಬೇಕಿತ್ತು ಎಂದರು.
ಬಿಎಸ್‌ವೈ ದುರ್ಬಲಗೊಳಿಸಲು ಎಚ್‌ಡಿಕೆ ಯೋಜನೆ
ಕೆಪಿಎಸ್ಸಿ ಕುರಿತು ಕುಮಾರಸ್ವಾಮಿ ಹೇಳಿಕೆಗಳ ಕುರಿತಂತೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕೆಪಿಎಸ್ಸಿ ವಿಚಾರವಾಗಿ ಕುಮಾರಸ್ವಾಮಿ ಅವರು ಮಾತನಾಡುತ್ತಾ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ಬಿಜೆಪಿಯಲ್ಲಿ ದುರ್ಬಲಗೊಳಿಸುವ ಯತ್ನದಲ್ಲಿದ್ದಾರೆ. ಏಕೆಂದರೆ ಕೆಪಿಎಸ್ಸಿ ಅಧ್ಯಕ್ಷರು ಸೇರಿ ಇತರರನ್ನು ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಮಿಸಲಾಗಿತ್ತು. ಜತೆಗೆ ಕೆಲ ವಿಚಾರಗಳಲ್ಲಿ ಕುಮಾರಸ್ವಾಮಿ ಅವರ ತಲೆಗೆ ಬರುತ್ತದೆ ಎಂದು ಕಳ್ಳನ ಮನಸ್ಸು ಹುಳ್ಳಗೆ ಎನ್ನುವಂತೆ ಮಾತನಾಡುತ್ತಿದ್ದಾರೆ. ಸದ್ಯ ತನಿಖೆ ಎದುರಿಸುತ್ತಿರುವವರು, ಬಂಧನಕ್ಕೊಳಗಾದವರೆಲ್ಲ ಬಿಜೆಪಿ ಬೆಂಬಲಿಗರೇ ಎಂದು ಹೇಳಿದರು.
ಈ ಹಿಂದೆ ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸದೇ ಮೋಸ ಮಾಡಿದ್ದನ್ನು ರಾಜ್ಯದ ಲಿಂಗಾಯತ ಸಮುದಾಯ ಅರಗಿಸಿಕೊಳ್ಳುತ್ತಿಲ್ಲ. ಸುಖಾಸುಮ್ಮನೆ ಮಾತನಾಡುವ ಕುಮಾರಸ್ವಾಮಿ ಬಿಜೆಪಿ ಮೈತ್ರಿ ಕಡಿದುಕೊಂಡು ಚುನಾವಣೆ ಎದುರಿಸಲಿ. ದೆಹಲಿಯ ಬಿಜೆಪಿ ನಾಯಕರನ್ನು ಮೆಚ್ಚಿಸಲು ಇಲ್ಲಿ ಬಂದು ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಲಿಂಗಾಯತ ಎಂಬ ಕಾರಣಕ್ಕೆ ವಿರೋಧ
ನೈಸ್ ರಸ್ತೆ ವಿಚಾರದಲ್ಲಿ ತಮ್ಮನ್ನು ಎಳೆದು ತಂದಿದ್ದಕ್ಕೆ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, ನೈಸ್ ರಸ್ತೆ ವಿಚಾರದಲ್ಲಿ ನನ್ನ ಪಾತ್ರವೇನಿದೆ. ಕುಮಾರಸ್ವಾಮಿ ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡ ಅವರು ಯೋಜನೆ ಜಾರಿಗೊಳಿಸಿತ್ತು. ಆದರೆ, ಅದನ್ನು ಪೂರ್ಣಗೊಳಿಸಲಿಲ್ಲ. ಇನ್ನು, ನಾನು ನೈಸ್ ರಸ್ತೆ ಯೋಜನೆ ಸ್ವಾಧೀನಪಡಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ. ನನಗೆ ಯೋಜನೆ ಪಡೆಯಲು ತಲೆ ಕೆಟ್ಟಿದೆಯೇ. ಹಿಂದೆ ಕುಮಾರಸ್ವಾಮಿ ಅವರು ನೈಸ್ ರಸ್ತೆ ಯೋಜನೆ ಪಡೆಯಲು ಮುಂದಾಗಿದ್ದರು. ಅದನ್ನು ನನ್ನ ತಲೆಗೆ ಕಟ್ಟಲು ನೋಡುತ್ತಿದ್ದಾರೆ ಎಂದರು.
ನೈಸ್ ರಸ್ತೆ ಸಮೀಪ ಭೂಮಿ ಖರೀದಿ ಮಾಡಿದ್ದರ ಬಗ್ಗೆಯೂ ಹೇಳುತ್ತಾರೆ. ಕಾನೂನು ಪ್ರಕಾರ ಎನ್‌ಒಸಿ ಪಡೆದು ಭೂಮಿ ಖರೀದಿಸಿದ್ದೇನೆ. ಕಾನೂನು ಉಲ್ಲಂಘಿಸಿದ್ದರೆ ಭೂಮಿ ವಾಪಾಸ್ ಪಡೆಯಲಿ. ನೈಸ್ ಸಂಸ್ಥೆಯ ಅಶೋಕ್ ಖೇಣಿಯನ್ನು ಕುಮಾರಸ್ವಾಮಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅಶೋಕ್ ಖೇಣಿ ಲಿಂಗಾಯತ ಎಂಬ ಕಾರಣಕ್ಕಾಗಿ ಅಸೂಯೆ ಪಟ್ಟು ವಿರೋಧ ಮಾಡುತ್ತಿದ್ದಾರೆ. ನೈಸ್ ರಸ್ತೆ ಸರಿಯಿಲ್ಲ ಎಂದಾಗಿದ್ದರೆ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ರದ್ದು ಮಾಡಬಹುದಿತ್ತು ಅಥವಾ ಬೇರೆ ಕ್ರಮ ಕೈಗೊಳ್ಳಬಹುದಿತ್ತು ಎಂದು ವಾಗ್ದಾಳಿ ನಡೆಸಿದರು.
ಮಾನವೀಯತೆ ಮುಖ್ಯ
ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು, ಏನೇ ಇದ್ದರೂ ಮಾನವೀಯತೆ ಇರಬೇಕು. ಚನ್ನಮ್ಮ ಅವರು ಮನೆಗೆ ಹೋದಾಗ ತಾಯಿಯಂತೆ ಗೌರವಯುತವಾಗಿ ನೋಡಿಕೊಂಡಿದ್ದಾರೆ, ಊಟ ಹಾಕಿದ್ದಾರೆ. ಸರ್ಕಾರಿ ಗೌರವ ನೀಡುವುದು ಬೇಕಿತ್ತೇ ಎಂದು ನನಗೆ ಹಲವರು ಹೇಳಿದರು. ಆದರೆ, ಮಾಜಿ ಪ್ರಧಾನಿ ಅವರ ಪತ್ನಿಗೆ ಗೌರವ ನೀಡಬೇಕಾದದ್ದು ನಮ್ಮ ಕರ್ತವ್ಯ. ಅದನ್ನು ಮಾಡಿದ್ದೇನೆ. ಮಾನವೀಯತೆಯಿಂದ ನಡೆದುಕೊಂಡಿದ್ದೇನೆ. ಹಾಗೆಯೇ, ಮಾಜಿ ಸಚಿವ ನಾಗೇಶ್ ಮೃತಪಟ್ಟಾಗ ಬಿಜೆಪಿ ಕಚೇರಿಗೆ ಹೋಗಿ ಗೌರವ ಸೂಚಿಸಿದೆ. ಅದು ಕೂಡ ಮಾನವೀಯತೆಯೇ ಎಂದರು.