ಶಿವಮೊಗ್ಗದಲ್ಲಿ ದಿಕ್ಕಾಪಾಲಾಗಿ ಓಡಿದ ಅಂಬಾರಿ ಆನೆ!

Published : Oct 22, 2026, 07:09 AM IST
Shivamogga elephant Dasara ambari fall

ಸಾರಾಂಶ

ಮೈಸೂರು ಮಾದರಿಯಲ್ಲೇ ಶಿವಮೊಗ್ಗ ದಸರಾ ವೇಳೆ ಹಮ್ಮಿಕೊಂಡಿದ್ದ ಜಂಬೂಸವಾರಿ ಮೆರವಣಿಗೆಯ ವೇಳೆ ಭಾರೀ ಆತಂಕದ ಘಟನೆಯೊಂದು ಸಂಭವಿಸಿದೆ. ಅಂಬಾರಿ ಹೊತ್ತ ಸೋಮಣ್ಣ ಹೆಸರಿನ ಆನೆ ಜನ ಸಂದಣಿ, ಶಬ್ಧಕ್ಕೆ ಬೆದರಿ ದಿಕ್ಕಾಪಾಲಾಗಿ ಓಡಿದ್ದು, ಈ ವೇಳೆ ಆನೆಯ ಮೇಲಿದ್ದ ಮಾವುತ ಮತ್ತು ಕಾವಾಡಿ ಕೆಳಗೆ ಉರುಳಿಬಿದ್ದಿದ್ದಾರೆ.

ಶಿವಮೊಗ್ಗ : ಮೈಸೂರು ಮಾದರಿಯಲ್ಲೇ ಶಿವಮೊಗ್ಗ ದಸರಾ ವೇಳೆ ಹಮ್ಮಿಕೊಂಡಿದ್ದ ಜಂಬೂಸವಾರಿ ಮೆರವಣಿಗೆಯ ವೇಳೆ ಭಾರೀ ಆತಂಕದ ಘಟನೆಯೊಂದು ಸಂಭವಿಸಿದೆ. ಅಂಬಾರಿ ಹೊತ್ತ ಸೋಮಣ್ಣ ಹೆಸರಿನ ಆನೆ ಜನ ಸಂದಣಿ, ಶಬ್ಧಕ್ಕೆ ಬೆದರಿ ದಿಕ್ಕಾಪಾಲಾಗಿ ಓಡಿದ್ದು, ಈ ವೇಳೆ ಆನೆಯ ಮೇಲಿದ್ದ ಮಾವುತ ಮತ್ತು ಕಾವಾಡಿ ಕೆಳಗೆ ಉರುಳಿಬಿದ್ದಿದ್ದಾರೆ.

ಬಳಿಕ ಆನೆ ತಾನು ಸಾಗಬೇಕಿದ್ದ ರಸ್ತೆ ಬಿಟ್ಟು ಉಲ್ಟಾ ಬಂದ ದಾರಿಯಲ್ಲೇ ಓಡಲು ಆರಂಭಿಸಿದೆ. ಈ ವೇಳೆ ಆನೆಯ ಮೇಲೆ ಕಟ್ಟಲಾಗಿದ್ದ ನಾಡದೇವಿ ಚಾಮುಂಡೇಶ್ವರಿ ಇರುವ ಬೆಳ್ಳಿಯ ಅಂಬಾರಿ ಕಾರೊಂದರ ಮೇಲೆ ಉರುಳಿಬಿದ್ದ ದುರ್ಘಟನೆ ಸಂಭವಿಸಿದೆ. ಹೀಗಾಗಿ ಬಾರಿ ಮೆರವಣಿಗೆ ಅರ್ಧಕ್ಕೆ ಮೊಟಕುಗೊಂಡಿದೆ.ಅಂಬಾರಿ ಮಂಟಪ ಕಾರಿನ ಮೇಲೆ ಉರುಳಿದ ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, ಜನರು ಯಾವುದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಂದ್ರಮೌಳೇಶ್ವರ ದೇವಾಲಯಗಳ ಆವರಣದಿಂದ ತಾಯಿ ಚಾಮುಂಡೇಶ್ವರಿಯ ಉತ್ಸವ

ಶಿವಮೊಗ್ಗದ ಕೋಟೆ ಭೀಮೇಶ್ವರ ಹಾಗೂ ಚಂದ್ರಮೌಳೇಶ್ವರ ದೇವಾಲಯಗಳ ಆವರಣದಿಂದ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿ, ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಗೆ ಅದ್ಧೂರಿ ಚಾಲನೆ ನೀಡಲಾಗಿತ್ತು. ಆನೆ ಸೋಮಣ್ಣ ಅಂಬಾರಿಯನ್ನು ಹೊತ್ತು ಸುಮಾರು 200 ಮೀಟರ್ ಸಾಗುತ್ತಿದ್ದಂತೆ, ಜನಸಂದಣಿ ಅಥವಾ ಶಬ್ದಕ್ಕೆ ಏಕಾಏಕಿ ಬೆದರಿದೆ.

ಕ್ಷಣಾರ್ಧದಲ್ಲಿ ಶಾಂತವಾಗಿದ್ದ ಸೋಮಣ್ಣ ಆನೆ ಹಿಮ್ಮುಖವಾಗಿ ತಿರುಗಿ ಅತ್ತಿತ್ತ ಓಡಲಾರಂಭಿಸಿದೆ. ಆನೆಯ ಈ ದಿಢೀರ್ ವರ್ತನೆಯಿಂದ ಗಾಬರಿಗೊಂಡ ಅದರ ಮೇಲಿದ್ದ ಮಾವುತ ಹಾಗೂ ಕಾವಾಡಿಗರು ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ಇದಾದ ಬಳಿಕ ಅಡ್ಡಾದಿಡ್ಡಿ ಓಡಿ ಬಂದಿದ್ದು, ಆನೆಯ ಬೆನ್ನ ಮೇಲಿದ್ದ ತಾಯಿ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿ ಕಳಚಿ, ರಸ್ತೆ ಬದಿ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಬಿದ್ದಿದೆ. ಅಂಬಾರಿಯ ಭಾರಕ್ಕೆ ಕಾರಿನ ಮೇಲ್ಭಾಗ ಜಖಂಗೊಂಡು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಅಂಬಾರಿ ಹೊತ್ತ ಆನೆ ಹೆದರಿ ನಗರದ ಕಿರಿದಾದ ಗಲ್ಲಿಗಳತ್ತ ಓಡುತ್ತಿದ್ದಂತೆ, ಮೆರವಣಿಗೆ ನೋಡಲು ಜಮಾಯಿಸಿದ್ದ ಸಾವಿರಾರು ಸಾರ್ವಜನಿಕರು ಹಾಗೂ ಭಕ್ತರು ಜೀವಭಯದಿಂದ ದಿಕ್ಕಾಪಾಲಾಗಿ ಓಡಿದರು. ಕೆಲಕಾಲ ಸ್ಥಳದಲ್ಲಿ ತೀವ್ರ ಗೊಂದಲ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವೈದ್ಯರು ಸೋಮಣ್ಣ ಆನೆಗೆ ಅರವಳಿಕೆ ಮದ್ದು ನೀಡಿದ ಬಳಿಕ ಸುಧಾರಿಸಿಕೊಂಡಿತು.

ಅಂಬಾರಿ ಉತ್ಸವ ರದ್ದು

ಶಿವಮೊಗ್ಗ: ದಸರಾದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಐತಿಹಾಸಿಕ ದಸರಾ ಜಂಬೂಸವಾರಿ ಮೆರವಣಿಗೆ ನಡೆದ ಅವಘಡ ಹಿನ್ನೆಲೆಯಲ್ಲಿ ಈ ಬಾರಿ ಅಂಬಾರಿ ಉತ್ಸವ ರದ್ದು ಮಾಡಲಾಗಿತ್ತು. ನಂತರ ಸಾಂಪ್ರದಾಯಿಕ ದೇವಾನುದೇವತೆಗಳ ಉತ್ಸವದಲ್ಲಿ ಪರಂಪರೆಯ ದೇವಾನುದೇವತೆಗಳ ಧಾರ್ಮಿಕ ಉತ್ಸವಗಳು ಹಾಗೂ ನಗರದ ಐತಿಹಾಸಿಕ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ನಡೆಯಲಿರುವ ಬನ್ನಿ ಮುಡಿಯುವ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಸಾಗರನ ಬದಲಿಗೆ ಬಂದಿದ್ದ ಸೋಮಣ್ಣ

ಸತತ 6 ಬಾರಿ ಅಂಬಾರಿ ಹೊತ್ತಿದ್ದ ಸಾಗರ ಆನೆಗೆ ಕಾಲು ನೋವು ಕಾಣಿಸಿಕೊಂಡ ಕಾರಣ ಈ ಬಾರಿ ಜಂಬೂಸವಾರಿಯ ಕೊನೆಯ ಕ್ಷಣದಲ್ಲಿ ಅರಣ್ಯ ಇಲಾಖೆಯು ಅಂಬಾರಿ ಹೊರುವ ಆನೆ ಬದಲಾಯಿಸಿತ್ತು. ಸಕ್ರೆಬೈಲು ಆನೆ ಬಿಡಾರದ ಸೋಮಣ್ಣ ಆನೆ ಇದೇ ಮೊದಲ ಬಾರಿಗೆ ಬೆಳ್ಳಿ ಮಂಟಪದಲ್ಲಿ ತಾಯಿ ಚಾಮುಂಡೇಶ್ವರಿಯ ಮೂರ್ತಿಯನ್ನು ಹೊತ್ತಿತ್ತು. ಸೋಮಣ್ಣಗೆ ಬಹದ್ದೂರು ಆನೆ ಸಾಥ್ ನೀಡಿತ್ತು. ಸೋಮಣ್ಣ ಅಂಬಾರಿ ಹೊತ್ತು ಸುಮಾರು 200 ಮೀಟರ್ ಸಾಗುತ್ತಿದ್ದಂತೆ, ಜನಸಂದಣಿ ಅಥವಾ ಶಬ್ದಕ್ಕೆ ಏಕಾಏಕಿ ಬೆದರಿದ್ದು ಈ ಅವಘಡಕ್ಕೆ ಕಾರಣವಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕಷ್ಟವೋ, ಸುಖವೋ ಗ್ಯಾರಂಟಿ ಮಾತ್ರ ನಿಲ್ಲಿಸಲ್ಲ: ಡಿಕೆ
ಮೋದಿಗೆ ₹5400 ಕೋಟಿ ಕೇಳಿದೆ, ಈ ಸಲ ನೋಡೋಣ ಡಿಕೆ ಅಂದ್ರು