ಅಮಿತ್‌ ಶಾಗೆ ಸ್ಟಿಂಗ್‌ ಬಗ್ಗೆ ಶೀಘ್ರವೇ ದೂರು - 14 ವರ್ಷದ ಬಾಲಕಿ ಬಗ್ಗೆ ಮಾಹಿತಿ: ಎಚ್‌ಡಿಕೆ

Published : Oct 14, 2026, 05:08 AM IST
hd kumaraswamy

ಸಾರಾಂಶ

ರಾಜ್ಯದಲ್ಲಿ ‘ಸ್ಟಿಂಗ್ ಆಪರೇಷನ್‌’ಗಳ ಹೆಸರಲ್ಲಿ ರಾಜಕೀಯ ನಾಯಕರು ಮತ್ತು ಅವರ ಕುಟುಂಬಗಳನ್ನು ಗುರಿ ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ‘ಸ್ಟಿಂಗ್ ಆಪರೇಷನ್‌’ಗಳ ಹೆಸರಲ್ಲಿ ರಾಜಕೀಯ ನಾಯಕರು ಮತ್ತು ಅವರ ಕುಟುಂಬಗಳನ್ನು ಗುರಿ ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮಂಗಳವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಸ್ಟಿಂಗ್ ಆಪರೇಷನ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಮತ್ತು ಅವರಿಗೆ ದೂರನ್ನೂ ನೀಡುತ್ತೇನೆ. ಈ ಪ್ರಕರಣಗಳ ಹಿಂದೆ ಯಾರಿದ್ದಾರೆ? ಕಾರ್ಯಾಚರಣೆಗಳನ್ನು ಯಾರು ನಡೆಸಿದ್ದಾರೆ? ಯಾರ ಯಾರ ಪಾತ್ರವಿದೆ? ಎಂಬುದನ್ನು ತನಿಖೆಯಿಂದ ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆ ಅಗತ್ಯ ಎಂದು ಪ್ರತಿಪಾದಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ನಡೆಸಿರುವ ಷಡ್ಯಂತ್ರಕ್ಕೆ ಹೆದರುವ ಅಗತ್ಯವಿಲ್ಲ. ಅವರು ಈಗಿನ ಸಿದ್ದರಾಮಯ್ಯ ಆಗಿರಬಾರದು. ಅವರು ಹಿಂದಿನ ಹೋರಾಟ ಮನೋಭಾವದ ಸಿದ್ದರಾಮಯ್ಯ ಆಗಿ ಮಾತನಾಡಬೇಕು. ಇದರ ಬಗ್ಗೆ ಮೌನ ವಹಿಸುವುದು ಸರಿಯಲ್ಲ. ನಾನೊಬ್ಬನೇ ಮಾತನಾಡಿದರೆ ಸಾಕಾಗುವುದಿಲ್ಲ ಎಂದು ಹೇಳಿದರು.

ಹಿಂದೆ ಮಾಜಿ ಮುಖ್ಯಮಂತ್ರಿ ಒಬ್ಬರ ವಿರುದ್ಧ ಸ್ಟಿಂಗ್ ಮಾಡಿದರು, ನಂತರ ರಮೇಶ್ ಜಾರಕಿಹೊಳಿ ಅವರನ್ನು ಮುಗಿಸಿದರು. ಬಳಿಕ ಅದೇ ಸಮುದಾಯದ ಕೆ.ಎನ್.ರಾಜಣ್ಣ ಅವರನ್ನು ತೆಗೆದರು. ನಮ್ಮ ಪಕ್ಷದ ನಾಯಕನೇ ಸೀಡಿ ಪ್ಯಾಕ್ಟರಿ ನಡೆಸುತ್ತಿದ್ದಾನೆ ಎಂದು ರಾಜಣ್ಣ ಹೇಳಿದರೂ ನಂತರ ಅವರ ಬಾಯಿ ಮುಚ್ಚಿಸಿದರು. ಈಗ ಸಿದ್ದರಾಮಯ್ಯ ಅವರ ಸರದಿ ಬಂದಿದೆ ಎಂದರು.

ಸದಾಶಿವನಗರದ ಮನೆಯಲ್ಲಿ ಫೋನ್‌ ಟ್ಯಾಪಿಂಗ್‌:

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಸದಾಶಿವನಗರದ ಮನೆಯಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು, ಅತ್ಯಾಧುನಿಕ ಉಪಕರಣಗಳ ಮೂಲಕ ಸಚಿವರು ಹಾಗೂ ಇತರರು ಏನು ಚರ್ಚಿಸುತ್ತಾರೆ ಎಂಬ ಮಾಹಿತಿ ಸಂಗ್ರಹಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಈ ಫೋನ್‌ ಟ್ಯಾಪಿಂಗ್‌, ನಿಗಾ ವ್ಯವಸ್ಥೆ ಬಗ್ಗೆ ಪೊಲೀಸ್‌ ಇಲಾಖೆಯಲ್ಲೇ ದೊಡ್ಡಮಟ್ಟದ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿಯಾಗಿರುವ ವ್ಯಕ್ತಿ ತನ್ನ ಸ್ಥಾನ ಭದ್ರ ಮಾಡಿಕೊಳ್ಳಲು ಸ್ವಪಕ್ಷದ ಶಾಸಕರು, ಸಚಿವರ ಮೇಲೆಯೇ ನಿಗಾ ಇಟ್ಟರೆ ಕಥೆ ಏನು? ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಸಿಬಿಐ ತನಿಖೆ ಅಗತ್ಯವಿದೆ ಎಂದು ಕುಮಾರಸ್ವಾಮಿ ಹೇಳಿದರು.

ಫೋನ್‌ ಟ್ಯಾಪ್‌ ಗಂಭೀರ ವಿಷಯ:

ಸಚಿವರು ಮತ್ತು ರಾಜಕೀಯ ನಾಯಕರ ಫೋನ್‌ಗಳನ್ನು ಟ್ಯಾಪ್ ಮಾಡುತ್ತಾರೆ ಎಂಬುದು ಗಂಭೀರ ವಿಷಯ. ಅವರ ಚಟುವಟಿಕೆಗಳನ್ನು ಗಮನಿಸಲು ಪ್ರತ್ಯೇಕ ವ್ಯವಸ್ಥೆ ಅಥವಾ ಘಟಕವಿದೆ ಎಂಬುದು ಆಘಾತಕಾರಿ ಸಂಗತಿ. ಆದರೆ ಮುಖ್ಯಮಂತ್ರಿ ಸ್ವತಃ ಇದಕ್ಕೆ ಆದೇಶಿಸಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತನಿಖೆಯಿಂದ ಪರಿಶೀಲಿಸಬೇಕು ಎಂದರು. ನಿಮ್ಮ ಫೋನ್‌ ಟ್ಯಾಪ್ ಆಗಿದೆಯೇ ಎಂಬ ಪ್ರಶ್ನೆಗೆ, ತಾವು ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸುವುದರಿಂದ ಮರೆಮಾಚುವುದೇನೂ ಇಲ್ಲ ಎಂದು ಉತ್ತರಿಸಿದರು.

14 ವರ್ಷದ ಬಾಲಕಿ ಬಗ್ಗೆ ಮಾಹಿತಿ:

ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆ ಅ.9ರಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಬಾಲನ್ಯಾಯಕ್ಕೆ ಸಂಬಂಧಿಸಿದ ಸಮಿತಿ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ ಎಂಬ ಮಾಹಿತಿ ಇದೆ. ಆ ದೂರಿನಲ್ಲಿ ಹದಿನಾಲ್ಕು ವರ್ಷದ ಬಾಲಕಿ ಬಗ್ಗೆ ಮಾಹಿತಿ ಇದೆ. ಈಗ ಆ ಬಾಲಕಿ ಈಗ ವಯಸ್ಕಳಾಗಿದ್ದು, ಆಕೆಯನ್ನು ಪ್ರೇರೇಪಿಸಿ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂಬ ಆರೋಪವಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಈ ದೂರಿನಲ್ಲಿರುವ ಆರೋಪಗಳೂ ತನಿಖೆಯಿಂದ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

2024ರ ಲೋಕಸಭಾ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಮಂಡ್ಯ ಮತ್ತು ಹಾಸನ ಭಾಗಗಳಲ್ಲಿ ವಿಡಿಯೋಗಳನ್ನು ಪೆನ್‌ಡ್ರೈವ್‌ಗಳಲ್ಲಿ ಹಂಚಲಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು 400 ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಆ 400 ಜನ ಮಹಿಳೆಯರಲ್ಲಿ ಎಷ್ಟು ಜನ ಬಂದು ಕೇಸು ದಾಖಲು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಪೆನ್‌ಡ್ರೈವ್‌ಗಳಲ್ಲಿ ಹಲವು ಮಹಿಳೆಯರ ವಿಡಿಯೋಗಳನ್ನು ಹಂಚಿ ಅವರ ಕುಟುಂಬಗಳ ಗೌರವಕ್ಕೆ ಧಕ್ಕೆ ಉಂಟು ಮಾಡಿದರು. ವಿಡಿಯೋಗಳನ್ನು ಹೊರಕ್ಕೆ ಬಿಟ್ಟಾಗ ಆ ಮಹಿಳೆಯರ ಮುಖಗಳನ್ನು ಮಸುಕುಗೊಳಿಸಿ ಗೌಪ್ಯತೆ ಕಾಪಾಡಲಿಲ್ಲ. ಆ ವಿಡಿಯೋಗಳನ್ನು ಸಿದ್ಧಪಡಿಸಿ ಹಂಚಿದವರು ಯಾರು? ಯಾವ ಸ್ಥಳದಲ್ಲಿ ಅದನ್ನು ಸಿದ್ಧಪಡಿಸಲಾಯಿತು? ಅವುಗಳನ್ನು ಹಂಚಿದವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಯಿತು? ಅವರೆಲ್ಲರೂ ದಿನವೂ ಹಾಸನದಲ್ಲಿ ಡಾನ್ಸ್ ಮಾಡಿಕೊಂಡು ತಿರುಗುತ್ತಿದ್ದಾರೆ. ಇದಕ್ಕೆ ಈ ಸರ್ಕಾರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ನನ್ನ ತಾಯಿ ವಿರುದ್ಧವೂ ಸುದ್ದಿ ಪ್ರಸಾರ:

ನಮ್ಮ ಕುಟುಂಬದ ಬಗ್ಗೆ, ನಮ್ಮ ತಾಯಿ ವಿರುದ್ಧವೂ ಸುದ್ದಿಗಳನ್ನು ಪ್ರಸಾರ ಮಾಡಲಾಯಿತು. ಕುಟುಂಬದವರು ಹಲವು ರೀತಿಯ ನಿಂದನೆಗಳನ್ನು ಎದುರಿಸಿದ್ದಾರೆ. ಆದರೂ ನಾವು ಯಾರೂ ಕೋರ್ಟ್ ಮೊರೆ ಹೋಗಿ ರಕ್ಷಣೆ ಪಡೆಯಲು ಹೋಗಲಿಲ್ಲ. ನಾನು ಈ ವ್ಯಕ್ತಿಯನ್ನು ಇಂದಿಗೂ ಮುಖ್ಯಮಂತ್ರಿ ಎಂದು ಹೇಳಲು ಸಿದ್ಧನಿಲ್ಲ. ನಮ್ಮ ರಾಜ್ಯಕ್ಕೆ ಇಂಥ ಸ್ಥಿತಿ ಬರಬಾರದಾಗಿತ್ತು. ನನ್ನ ತಾಯಿಯನ್ನೂ ಬಿಡಲಿಲ್ಲ ಇವರು. ದಿನವೂ ದೇವರ ಕೋಣೆಯಲ್ಲಿ ಬದುಕಿದವರು ನನ್ನ ತಾಯಿ. ಅವರ ಬಗ್ಗೆಯೂ ಸರಣಿ ಕಥೆಗಳನ್ನು ಸೃಷ್ಟಿಸಿದಿರಿ, ಈ ರೀತಿಯ ವಾತಾವರಣ ನಿರ್ಮಾಣ ಮಾಡಿರುವ ವ್ಯಕ್ತಿಯ ನಿರಂತರ ಕಸುಬೇ ಅಂಥದ್ದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಕುತಂತ್ರಕ್ಕೆ ಹೆದರಬೇಡಿ ಸಿದ್ದು-ಎಚ್‌ಡಿಕೆ:

ಯಾವುದೇ ಕಾರಣಕ್ಕೂ ಈ ಕುತಂತ್ರಕ್ಕೆ ನೀವು ಹೆದರಬಾರದು. ನಿಮಗೆ ಕಳಂಕ ಬರಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

ನೀವು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ದಿವಂಗತ ದೇವರಾಜ ಅರಸು ಅವರ ದಾಖಲೆ ಮುರಿದ ನಾಯಕ ನೀವು. ಇಂಥ ಹಿನ್ನೆಲೆ ಹೊಂದಿರುವ ನೀವು ನಿಮ್ಮ ವಿರುದ್ಧ ನಿಮ್ಮ ಪಕ್ಷದಲ್ಲಿ ನಡೆದಿರುವ ಸಂಚಿಗೆ ಹೆದರುವ ಅಗತ್ಯವಿಲ್ಲ ಎಂದರು.

- ರಾಜ್ಯದಲ್ಲಿ ಸ್ಟಿಂಗ್‌ ಆಪರೇಷನ್‌ಗಳ ಹೆಸರಿನಲ್ಲಿ ರಾಜಕೀಯ ನಾಯಕರು, ಕುಟುಂಬಗಳ ಟಾರ್ಗೆಟ್‌

- ಈ ಆರೋಪಗಳ ಕುರಿತು ಸಮಗ್ರ, ನಿಷ್ಪಕ್ಷಪಾತ ತನಿಖೆ ಆಗಬೇಕು. ತನಿಖೆಯನ್ನು ಸಿಬಿಐ ನಡೆಸಬೇಕು

- ಸ್ಟಿಂಗ್‌ ಪ್ರಕರಣ ಬಗ್ಗೆ ಅಮಿತ್‌ ಶಾ ಭೇಟಿಯಾಗಿ ಚರ್ಚೆ ಮಾಡುವೆ. ತನಿಖೆಗಾಗಿ ದೂರನ್ನೂ ನೀಡುವೆ

- ಪ್ರಕರಣದ ಹಿಂದೆ ಯಾರ ಪಾತ್ರವಿದೆ ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು: ಕುಮಾರಸ್ವಾಮಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ತನಿಖೆ ಆಗಲಿ, ದಾಖಲೆಗಳ ಕೊಡುವೆ : ಎಚ್‌ಡಿಕೆಗೆ ಡಿಕೆ
ಕಾವಲುಗಾರನೇ ಮತ ಕದ್ದರೆ ಹೇಗೆ?