ಕಾವಲುಗಾರನೇ ಮತ ಕದ್ದರೆ ಹೇಗೆ?

Published : Oct 13, 2026, 12:21 PM IST
N Chaluvarayaswamy

ಸಾರಾಂಶ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಸ್ವತಃ ಚುನಾವಣಾ ಆಯೋಗದ ಅಕ್ರಮದ ವಿರುದ್ಧ ಪ್ರಖರವಾಗಿ ಧ್ವನಿ ಎತ್ತುತ್ತಿದ್ದಂತೆ ಫಾರ್ಮ್‌ 7 ಮುಖಾಂತರ ಮತದಾರರ ವಿರುದ್ಧ ಸಲ್ಲಿಕೆಯಾದ ಆಕ್ಷೇಪ ಅರ್ಜಿಗಳನ್ನು ವಾಪಸ್‌ ಪಡೆಯಲಾಗುತ್ತಿದೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಸ್ವತಃ ಚುನಾವಣಾ ಆಯೋಗದ ಅಕ್ರಮದ ವಿರುದ್ಧ ಪ್ರಖರವಾಗಿ ಧ್ವನಿ ಎತ್ತುತ್ತಿದ್ದಂತೆ ಫಾರ್ಮ್‌ 7 ಮುಖಾಂತರ ಮತದಾರರ ವಿರುದ್ಧ ಸಲ್ಲಿಕೆಯಾದ ಆಕ್ಷೇಪ ಅರ್ಜಿಗಳನ್ನು ವಾಪಸ್‌ ಪಡೆಯಲಾಗುತ್ತಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಫಾರ್ಮ್‌ 7 ಹೇಗೆ ದುರುಪಯೋಗ ಆಗುತ್ತಿದೆ ಎಂಬುದನ್ನು ತೋರಿಸಿಕೊಡಲಾಯಿತು. ಚುನಾವಣಾ ಆಯೋಗದ ಆಯುಕ್ತರ ನೇಮಕವೇ ಅಕ್ರಮ.

-ಎನ್.ಚಲುವರಾಯಸ್ವಾಮಿ

ಬೃಹತ್ ಮತ್ತು ಭಾರಿ ನೀರಾವರಿ ಸಚಿವರು, ಕರ್ನಾಟಕ ಸರ್ಕಾರ

ಪ್ರಜಾಪ್ರಭುತ್ವದ ಶಕ್ತಿಯ ಮೂಲ ಮತದಾನ. ಆ ಮತದಾನ ಪ್ರಜಾಪ್ರಭುತ್ವದ ಉಸಿರಾದರೆ, ಆ ಉಸಿರನ್ನು ಕಾಪಾಡುವ ಕಾವಲುಗಾರ ಚುನಾವಣಾ ಆಯೋಗ. ಆದರೆ ಕಾವಲುಗಾರನೇ ಮತದಾನದ ಉಸಿರನ್ನು ನಿಲ್ಲಿಸಲು ಮುಂದಾದರೆ?

ಮತದಾನದ ಉಸಿರನ್ನು ನಿಲ್ಲಿಸುವುದು ಮಾತ್ರವಲ್ಲ, ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡುತ್ತಿದೆ.

SIR ಪ್ರಕ್ರಿಯೆ ದೇಶದ ನಾಗರಿಕನ ಮತದಾನದ ಹಕ್ಕನ್ನೇ ಕಸಿದುಕೊಳ್ಳುವಂತೆ ಮಾಡುತ್ತಿದೆ. ಕರ್ನಾಟಕದ 1.08 ಕೋಟಿ ಸೇರಿದಂತೆ ದೇಶದಲ್ಲಿ 13 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಮತಪಟ್ಟಿ ಪರಿಷ್ಕರಣೆ ಕುರಿತಂತೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಬಳಿಕ ಬಿಹಾರದಲ್ಲಿ ಕೈಬಿಟ್ಟಿದ್ದ 65 ಲಕ್ಷಕ್ಕೂ ಅಧಿಕ ಮತದಾರರ ಪೈಕಿ 21 ಲಕ್ಷಕ್ಕೂ ಅಧಿಕ ಮತದಾರರನ್ನು ಹೊಸದಾಗಿ ಸೇರಿಸಲಾಯಿತು. ಪಶ್ಚಿಮ ಬಂಗಾಳದಲ್ಲಿ ಕೈಬಿಟ್ಟಿದ್ದ 60 ಲಕ್ಷ ಮತದಾರರಲ್ಲಿ 22 ಲಕ್ಷಕ್ಕೂ ಅಧಿಕ ಮತದಾರರನ್ನು ಅರ್ಹರೆಂದು ಸೇರಿಸಲಾಯಿತು.

ಅಂದರೆ ಇಲ್ಲಿ ವಿಷಯ ಸ್ಪಷ್ಟವಾಗುತ್ತದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುವುದು. ನಂತರ ನ್ಯಾಯಾಂಗ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಕೈಬಿಟ್ಟ ಮತದಾರರ ಹೆಸರನ್ನು ಮತಪಟ್ಟಿಗೆ ಸೇರಿಸುವುದು. ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿಲ್ಲ. ನಿರ್ದಿಷ್ಟ ಮತದಾರರನ್ನು ಗುರಿಯಾಗಿಸಿ ಗುರುತಿಸಿ, ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಮಾಡುತ್ತಿದೆ. Special Intensive Revision (SIR) ಈಗ Selective Identification & Removal of Voters (SIR) ಎಂಬಂತಾಗಿದೆ.

ಫಾರಂ 7 ಸಂಪೂರ್ಣ ದುರ್ಬಳಕೆ:

ಫಾರಂ 7 ಮೂಲಕ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅರ್ಹ ಮತದಾರ ಹೆಸರನ್ನು ಅಳಿಸಲು ಮುಂದಾಗಿದೆ. ಮತದಾರರ ಪಟ್ಟಿ ಕೇವಲ ಹೆಸರುಗಳ ಪಟ್ಟಿ ಅಲ್ಲ. ಅದು ಪ್ರಜಾಪ್ರಭುತ್ವದ ಧ್ವನಿ. ಆ ಧ್ವನಿಯನ್ನು ಕೇಳುವುದು ಆಳುವ ಸರ್ಕಾರದ ಕರ್ತವ್ಯ. ಆದರೆ ಇಲ್ಲಿ ಮತದಾರನ ಧ್ವನಿ ಕೇಳುತ್ತಿಲ್ಲ. ಬದಲಿಗೆ ಚುನಾವಣಾ ಆಯೋಗದ ಹೆಗಲಿನ ಮೇಲೆ ಎಸ್‌ಐಆರ್ ಎಂಬ ಬಂದೂಕನ್ನು ಇಟ್ಟು ಮತದಾರನ ಧ್ವನಿಯನ್ನು ದಮನಿಸಲಾಗುತ್ತಿದೆ.

2023ರ ಕಾಯ್ದೆಯ ಪ್ರಕಾರ ಚುನಾವಣಾ ಆಯುಕ್ತರ ನೇಮಕವಾದಾಗಿನಿಂದ ಹಿಡಿದು ಎಸ್‌ಐಆರ್‌ ಪ್ರಕ್ರಿಯೆಯ ಮೊದಲ ಹಂತ ಬಿಹಾರದಲ್ಲಿ ಆರಂಭವಾದಗಲೇ ಕಾಂಗ್ರೆಸ್‌ ಈ ದೇಶವನ್ನು ಎಚ್ಚರಿಸುವ ಕೆಲಸ ಮಾಡಲಾರಂಭಿಸಿತು. ಇದರ ಫಲವಾಗಿ ಇಂದು ದೇಶದಾದ್ಯಂತ ಎಸ್‌ಐಆರ್ ಅಕ್ರಮಗಳು ಹೊರಬೀಳುವುದರ ಜೊತೆಗೆ ಸಾಂವಿಧಾನಿಕ ಸಂಸ್ಥೆ ಒಂದು ಆಳುವ ಪಕ್ಷದ ಕೈಗೊಂಬೆಯಾಗಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಜಗಜ್ಜಾಹೀರಾಗಿದೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಸ್ವತಃ ಚುನಾವಣಾ ಆಯೋಗದ ಅಕ್ರಮದ ವಿರುದ್ಧ ಪ್ರಖರವಾಗಿ ಧ್ವನಿ ಎತ್ತುತ್ತಿದ್ದಂತೆ ಫಾರ್ಮ್‌ 7 ಮುಖಾಂತರ ಮತದಾರರ ವಿರುದ್ಧ ಸಲ್ಲಿಕೆಯಾದ ಆಕ್ಷೇಪ ಅರ್ಜಿಗಳನ್ನು ವಾಪಸ್‌ ಪಡೆಯಲಾಗುತ್ತಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಫಾರ್ಮ್‌ 7 ಹೇಗೆ ದುರುಪಯೋಗ ಆಗುತ್ತಿದೆ ಎಂಬುದನ್ನು ತೋರಿಸಿಕೊಡಲಾಯಿತು. ಚುನಾವಣಾ ಆಯೋಗದ ಆಯುಕ್ತರ ನೇಮಕವೇ ಅಕ್ರಮ. ಮತಗಳ್ಳತನಕ್ಕೆ ಚುನಾವಣಾ ಆಯೋಗವೇ ನೇರವಾಗಿ ಬೆಂಬಲ ನೀಡುತ್ತಿದೆ ಎಂಬುದಕ್ಕೆ ಎಸ್‌ಐಆರ್‌ ಲೋಪದೋಷಗಳು ಸಾಬೀತುಪಡಿಸುತ್ತಿವೆ.

ಚುನಾವಣಾ ಆಯೋಗ 5ಜಿ ವೇಗದಲ್ಲಿ ಮತಪಟ್ಟಿಯಲ್ಲಿನ ಹೆಸರನ್ನು ತೆಗೆಯುತ್ತದೆ. ಆದರೆ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಆಮೆ ನಡಿಗೆಯನ್ನಿಡುತ್ತದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವುದು ಕೇವಲ ಒಂದು ಆಡಳಿತಾತ್ಮಕ ತಿದ್ದುಪಡಿಯಲ್ಲ. ಅದರ ಪರಿಣಾಮ ನೇರವಾಗಿ ಮತದಾನದ ಹಕ್ಕಿನ ಮೇಲೆ ಬೀಳುತ್ತದೆ. ಆದ್ದರಿಂದ ‘ಹೆಸರು ಏಕೆ ತೆಗೆದುಹಾಕಲಾಯಿತು?’ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಕೊಡುವ ಕೆಲಸ ಚುನಾವಣಾ ಆಯೋಗ ಮಾಡುತ್ತಿಲ್ಲ.

ಮತದಾರರ ಪಟ್ಟಿಯ ಶುದ್ಧೀಕರಣಕ್ಕೆ ಹಲವು ನ್ಯಾಯಸಮ್ಮತ ಕಾರಣಗಳಿವೆ. ಆದರೆ ಇದೇ ಪ್ರಕ್ರಿಯೆಯಲ್ಲಿ ಜೀವಂತವಾಗಿರುವ, ಅದೇ ವಿಳಾಸದಲ್ಲಿ ವಾಸಿಸುವ, ಅರ್ಹತೆ ಹೊಂದಿರುವ ಮತದಾರನ ಹೆಸರೇ ಅಳಿಸಲ್ಪಟ್ಟರೆ? ಅದು ಕೇವಲ ತಪ್ಪಾಗುವುದಿಲ್ಲ. ಅದು ಚುನಾವಣಾ ಹಕ್ಕಿನ ಮೇಲೆ ಪರಿಣಾಮ ಬೀರುವ ಆಡಳಿತಾತ್ಮಕ ತಪ್ಪಾಗುತ್ತದೆ. ಹೀಗಾಗಿ ಒಂದು ಮತ ಅಳಿಸಬೇಕೆಂದರೂ ಅದಕ್ಕೆ ಕಾರಣ, ಪರಿಶೀಲನೆ, ನೋಟಿಸ್, ಆಕ್ಷೇಪಣೆ ಸಲ್ಲಿಸುವ ಅವಕಾಶ ಮತ್ತು ಮೇಲ್ಮನವಿ ವ್ಯವಸ್ಥೆ ಇರಬೇಕು. ಆದರೆ ಆಯೋಗ ಈ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದೇ ಈಗ ದೇಶದ ಜನರನ್ನು ಕಾಡುತ್ತಿರುವ ಪ್ರಶ್ನೆ.

ಮತದಾನದ ಹಕ್ಕು ಕಸಿಯುವ ಯತ್ನ:

ಒಬ್ಬ ಅರ್ಹ ಮತದಾರನ ಹೆಸರು ತಪ್ಪಾಗಿ ಅಳಿಸಿದರೆ, ಚುನಾವಣೆ ಮುಗಿದ ನಂತರ ಅದನ್ನು ಸರಿಪಡಿಸುವುದರಿಂದ ಆತನ ಕಳೆದುಹೋದ ಮತದಾನದ ಅವಕಾಶ ಮರಳಿ ಬರುವುದಿಲ್ಲ. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನೆಪದಲ್ಲಿ ನೈಜ ಮತದಾರನೇ ತನ್ನ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ದಾಖಲೆಗಳೊಂದಿಗೆ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ತುರ್ತಾಗಿ ಆಗಬೇಕಿರುವುದು ಚುನಾವಣಾ ಆಯೋಗದ ‘ಶುದ್ಧೀಕರಣ’.

ಕೇಂದ್ರ ಸರ್ಕಾರ 2023ರಲ್ಲಿ ಜಾರಿಗೆ ತಂದಿರುವ ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿರುವ The Chief Election Commissioner and Other Election Commissioners (Appointment, Conditions of Service and Term of Office) Act, 2023 ಈ ಕರಾಳ ಕಾಯ್ದೆ ರದ್ದಾಗುವವರೆಗೂ ಜ್ಞಾನೇಶ್ ಕುಮಾರ್ ಅವರಂತಹವರು ಬದಲಾದರೂ ವ್ಯವಸ್ಥೆ ಬದಲಾಗುವುದಿಲ್ಲ. ಚುನಾವಣಾ ಆಯೋಗವು ಯಾವುದೇ ಸರ್ಕಾರದ ಸಂಸ್ಥೆಯಲ್ಲ. ಅದು ಸಾಂವಿಧಾನಿಕ ಸಂಸ್ಥೆ. ಚುನಾವಣಾ ಆಯುಕ್ತರ ನಡೆ ಬಗ್ಗೆ ಪ್ರಶ್ನಿಸುವುದರ ಜೊತೆಗೆ ನೇಮಕಾತಿ ಪ್ರಕ್ರಿಯೆ, ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಸಂಸ್ಥೆಯ ಸ್ವಾಯತ್ತತೆ ಕುರಿತಂತೆ ಚರ್ಚಿಸುವ ಸಮಯವಿದು.

ಪ್ರಜಾಪ್ರಭುತ್ವದಲ್ಲಿ ಚುನಾವಣಾ ಆಯೋಗವು ಅಧಿಕಾರದಲ್ಲಿರುವವರ ಉಪಕಾರಕ್ಕೆ ಋಣಿಯಾಗಿರುವ ಸಂಸ್ಥೆ ಎಂಬ ಭಾವನೆ ಮೂಡಬಾರದು. ಚುನಾವಣಾ ಆಯೋಗದ ಮೇಲಿನ ಅಂತಿಮ ಹಕ್ಕು ಸರ್ಕಾರಕ್ಕಾಗಲಿ, ಪ್ರತಿಪಕ್ಷಕ್ಕಾಗಲಿ ಅಲ್ಲ, ಮತದಾರನದು. ಪೌರತ್ವ ನಿರ್ಧರಿಸುವುದು ಭಾರತೀಯ ಚುನಾವಣಾ ಆಯೋಗದ ಕೆಲಸವಲ್ಲ.

ಇನ್ನು ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಇದುವರೆಗೂ ಯಾವುದೇ ನಿಲುವು ಪ್ರಕಟಿಸಿಲ್ಲ. ಎಸ್ಐಆರ್‌ನಿಂದ ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ಯಾವ ನಿರ್ದಿಷ್ಟ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ? ತಪ್ಪಾಗಿ ಹೆಸರು ಅಳಿಸಿದರೆ ಪರಿಹಾರ ಹೇಗೆ ಸಿಗುತ್ತದೆ? ಮತ್ತು ದೂರುಗಳ ವಿಲೇವಾರಿಗೆ ಎಷ್ಟು ಸಮಯ ಬೇಕು? ಎಂಬುದನ್ನು ಕೇಂದ್ರ ಸರ್ಕಾರ ದೇಶದ ಜನತೆಗೆ ತಿಳಿಸುವ ಕೆಲಸವನ್ನು ಇದುವರೆಗೂ ಮಾಡಿಲ್ಲ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಎಸ್ಐಆರ್ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಮುಖ್ಯ ಚುನಾವಣಾ ಆಯುಕ್ತರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ. ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಮೂಲಕ ಕೇಂದ್ರ ಸರ್ಕಾರ, ಪ್ರಶ್ನಿಸುವ ಹಕ್ಕನ್ನು ದಮನಿಸುವ ಕೆಲಸಕ್ಕೆ ಮುಂದಾಗಿದೆ.

ಕೇಂದ್ರ ಸರ್ಕಾರದ ನಡೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಚುನಾವಣಾ ವ್ಯವಸ್ಥೆಯನ್ನೇ ಶಂಕಿಸುವಂತೆ ಮಾಡಿದೆ. ಇತ್ತೀಚಿನ ಚುನಾವಣೆಗಳಲ್ಲಿನ ಗೆಲುವು ಸೋಲಿನಲ್ಲಿ ಎಸ್‌ಐಆರ್ ಪಾತ್ರವಿದೆ ಎಂಬುದು ಕಾಣುತ್ತಿದ್ದು, ಈ ಕುರಿತು ಸಮಗ್ರ ತನಿಖೆ ಈ ಕೂಡಲೇ ಆಗಬೇಕು. ಆಗ ಮಾತ್ರ ಮತಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಈ ಅಕ್ರಮ ಕೊನೆಯಾಗಲು ಸಾಧ್ಯ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಓಟ್‌ ಚೋರಿ ವಿರುದ್ಧ ದೆಹಲಿಯಲ್ಲಿ ಕೆಪಿಸಿಸಿ ಧರಣಿ
''ಕರ್ನಾಟಕದ ಸಚಿವರೂ ಸೇರಿ 25ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರು ಬಿಜೆಪಿಯತ್ತ''