ಓಟ್‌ ಚೋರಿ ವಿರುದ್ಧ ದೆಹಲಿಯಲ್ಲಿ ಕೆಪಿಸಿಸಿ ಧರಣಿ

Published : Oct 13, 2026, 12:00 PM IST
Congress

ಸಾರಾಂಶ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಸೋಮವಾರ ಇಂಡಿಯಾ ಒಕ್ಕೂಟದ ನಾಯಕರು ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಸಚಿವರು ಸೇರಿ ರಾಜ್ಯದ 80ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರು ಪಾಲ್ಗೊಂಡಿದ್ದರು.

ನವದೆಹಲಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಸೋಮವಾರ ಇಂಡಿಯಾ ಒಕ್ಕೂಟದ ನಾಯಕರು ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಸಚಿವರು ಸೇರಿ ರಾಜ್ಯದ 80ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರು ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಓಟ್ ಚೋರಿ ಆಗ್ತಿದೆ. ಕಾನೂನುಬಾಹಿರವಾಗಿ ಅಲ್ಪಸಂಖ್ಯಾತರು, ದೀನ ದಲಿತರ ಮತ ಕಳ್ಳತನ ಮಾಡಿದ್ದಾರೆ. ಹೀಗಾಗಿ, ಇಂಡಿಯಾ ಒಕ್ಕೂಟದಿಂದ ಒಟ್ಟಾಗಿ ಪ್ರತಿಭಟನೆ ನಡೆಸಿದ್ದೇವೆ. ಕರ್ನಾಟಕದಿಂದಲೂ ಸಾಕಷ್ಟು ಮುಖಂಡರು ಬಂದಿದ್ದರು. ಸುಪ್ರೀಂಕೋರ್ಟ್‌ಗೆ ಎಲ್ಲ ಪಕ್ಷಗಳ ಪರವಾಗಿ ಅರ್ಜಿ ಸಲ್ಲಿಸಿದ್ದೇವೆ. ಮಂಗಳವಾರ ವಿಚಾರಣೆಗೆ ಬರಬಹುದು. ಮತಗಳ್ಳತನ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ಅರಾಜಕತೆ ಸೃಷ್ಟಿ ಮಾಡಿದ್ದು ಬಿಜೆಪಿ

ಕಾಂಗ್ರೆಸ್‌ ಅರಾಜಕತೆ ಸೃಷ್ಟಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಮಾಡಬಾರದ್ದನ್ನು ಮಾಡಿ ಅರಾಜಕತೆ ಸೃಷ್ಟಿ ಮಾಡಿದ್ದು ಬಿಜೆಪಿಯವರು. ಮತದಾರರ ಹಕ್ಕನ್ನು ಕಿತ್ತು ಹಾಕಿದ್ದು ಅವರು ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ವೇಳೆ ಅರ್ಹ ಮತದಾರರನ್ನು ಕೈ ಬಿಡಲಾಗಿದೆ. ಇದಕ್ಕೆ ಜ್ಞಾನೇಶ್ ಕುಮಾರ್ ಅವರೇ ಕಾರಣ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಜ್ಞಾನೇಶ್ ಕುಮಾರ್ ಅವರು ಸರ್ವಾಧಿಕಾರಿ ಧೋರಣೆ ಹೊಂದಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆ ಆರ್‌ಎಸ್‌ಎಸ್ ಕಚೇರಿಯಲ್ಲಾಗುತ್ತಿದೆ. ಚುನಾವಣಾ ಆಯೋಗ ಏಕಪಕ್ಷೀಯವಾಗಿದೆ. ಸುಪ್ರೀಂಕೋರ್ಟ್ ಕೂಡಾ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ತಟಸ್ಥವಾಗಿದೆ ಎಂದು ಆರೋಪಿಸಿದರು. ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಲೇಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಅರಾಜಕತೆ ಸೃಷ್ಟಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಅರಾಜಕತೆ ಸೃಷ್ಟಿ ಮಾಡುತ್ತಿರುವುದು ನಾವಲ್ಲ, ಬಿಜೆಪಿ. ಬಿಜೆಪಿ ಹುಟ್ಟಿರುವುದೇ ಅರಾಜಕತೆಯಿಂದ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗಳು ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಇವೆ ಎಂದು ಆರೋಪಿಸಿದರು.

ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಇದು ಕಾಂಗ್ರೆಸ್ ನ ಶಕ್ತಿ ಪ್ರದರ್ಶನ ಅಲ್ಲ. ಸಾಮಾನ್ಯ ಜನರ ಓಟ್ ಉಳಿಸಲು ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ರಾಜ್ಯದಲ್ಲಿ ಫಾರಂ-7ನ ದುರುಪಯೋಗ ನಡೆದಿದೆ. ಇದಕ್ಕೆ ಚುನಾವಣಾ ಆಯೋಗವನ್ನೇ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಸಚಿವ ಶಿವಲಿಂಗೇಗೌಡ ಮಾತನಾಡಿ, ಕೇಂದ್ರ ಸರ್ಕಾರ ಚುನಾವಣಾ ಆಯುಕ್ತರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ, ಜ್ಞಾನೇಶ ಕುಮಾರ್ ರಾಜೀನಾಮೆ ಕೊಡಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ. ಚುನಾವಣಾ ವ್ಯವಸ್ಥೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಇಡೀ ದೇಶಾದ್ಯಂತ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ಇಂಡಿಯಾ ಒಕ್ಕೂಟದ ಪ್ರತಿಭಟನೆ ಕೇವಲ ಎಸ್‌ಐಆರ್‌ಗೆ ಸೀಮಿತವಾಗಿಲ್ಲ. ಇವಿಎಂ ಹ್ಯಾಕಿಂಗ್ ನಡೆಯುತ್ತಿದೆ. ಇದರ ವಿರುದ್ಧವೂ ಈ ಹೋರಾಟ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಬಹಳ ಮುಖ್ಯ. ಮತದಾರ ಹಾಕುವ ಮತ ಖಾತ್ರಿಯಾಗಬೇಕು. ಅದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಮತದಾನ, ಸಂವಿಧಾನಬದ್ದ ಹಕ್ಕಾಗಿದೆ. ಆದರೆ, ಅದನ್ನು ಕಿತ್ತುಕೊಳ್ಳಲಾಗುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ಎಂದು ಹೇಳಿದರು.

ಸಚಿವರಾದ ಎಂ.ಬಿ.ಪಾಟೀಲ್, ಸಂತೋಷ್ ಲಾಡ್, ಮಾಗಡಿ ಬಾಲಕೃಷ್ಣ, ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ್, ಸಿಎಂ ರಾಜಕೀಯ ಸಲಹೆಗಾರ ಪೊನ್ನಣ್ಣ, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ, ಎಂಎಲ್ ಸಿ ಆರತಿ ಕೃಷ್ಣ, ಮಾಜಿ ಸಚಿವ ಬೋಸರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರತಿಭಟನೆ:

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಹಾಗೂ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್‌ ಹಾಗೂ ವಿವಿಧ ಸಂಘಟನೆಗಳಿಂದ ಸೋಮವಾರ ಹುಬ್ಬಳ್ಳಿ, ಬೀದರ್‌, ರಾಯಚೂರು, ಚಿತ್ರದುರ್ಗ, ಶಿವಮೊಗ್ಗ, ಬಾಗಲಕೋಟೆ, ಮಡಿಕೇರಿ, ವಿಜಯನಗರ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿವೆ.

ರಾಯಚೂರಿನಲ್ಲಿ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದಿಂದ ಪ್ರತಿಭಟಿಸಿ ಕೇಂದ್ರ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಸಿಇಸಿ ಹಾಗೂ ಎಸ್‌ಐಆರ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಮಾನ್ವಿ ಪಟ್ಟಣದಲ್ಲಿ ಮಶಾಲ್ ರ್‍ಯಾಲಿಯನ್ನು ನಡೆಸಲಾಯಿತು. ಎಸ್ಐಆರ್‌ ವಿರೋಧಿ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕೈಯಲ್ಲಿ ಮೇಣದ ಬತ್ತಿಯನ್ನು ಹಿಡಿದು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.

ಬೀದರ್‌ನಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಡಾ.ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಹಾಯಕ ಆಯುಕ್ತರ ಕಚೇರಿವರೆಗೆ ಮೆರವಣಿಗೆ ತೆರಳಿದರು. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಹುಬ್ಬಳ್ಳಿಯಲ್ಲಿ ಡಾ। ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸಂವಿಧಾನದ 326ನೇ ವಿಧಿ ಓದುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಪ್ರತಿಭಟನೆ ವೇಳೆ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು. ಇನ್ನು ಉತ್ತರ ಕನ್ನಡದ ಶಿರಸಿಯಲ್ಲಿ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿಜಯನಗರ ಜಿಲ್ಲೆಯ ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್ ಸಮಿತಿಯಿಂದ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

''ಕರ್ನಾಟಕದ ಸಚಿವರೂ ಸೇರಿ 25ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರು ಬಿಜೆಪಿಯತ್ತ''
ನಮ್ಮ ಸಂಪರ್ಕಕ್ಕೆ ಜ್ಞಾನೇಶ್ ಯತ್ನ : ರಾಹುಲ್‌ ಬಾಂಬ್