ನಾಲ್ಕು ವಿಧಾನಪರಿಷತ್‌ ಸ್ಥಾನಗಳಿಗೆ ಕಾಂಗ್ರೆಸ್ಸಲ್ಲಿ ಭಾರೀ ಲಾಬಿ - 50 + ಮಂದಿ ಪೈಪೋಟಿ

Published : Oct 25, 2024, 10:38 AM IST
Janata Curfew Vidhansoudha

ಸಾರಾಂಶ

ಸಿ.ಪಿ.ಯೋಗೇಶ್ವರ್‌ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವೂ ಸೇರಿ ಶೀಘ್ರ ಕಾಂಗ್ರೆಸ್‌ಗೆ ಲಭ್ಯವಾಗಲಿರುವ ನಾಮನಿರ್ದೇಶನ ಮಾಡಬಹುದಾದ ನಾಲ್ಕು ವಿಧಾನಪರಿಷತ್‌ ಸ್ಥಾನಗಳಿಗೆ ಕಾಂಗ್ರೆಸ್‌ನಲ್ಲಿ ಭರ್ಜರಿ ಪೈಪೋಟಿ ಆರಂಭವಾಗಿದೆ.

ಬೆಂಗಳೂರು : ಸಿ.ಪಿ.ಯೋಗೇಶ್ವರ್‌ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವೂ ಸೇರಿ ಶೀಘ್ರ ಕಾಂಗ್ರೆಸ್‌ಗೆ ಲಭ್ಯವಾಗಲಿರುವ ನಾಮನಿರ್ದೇಶನ ಮಾಡಬಹುದಾದ ನಾಲ್ಕು ವಿಧಾನಪರಿಷತ್‌ ಸ್ಥಾನಗಳಿಗೆ ಕಾಂಗ್ರೆಸ್‌ನಲ್ಲಿ ಭರ್ಜರಿ ಪೈಪೋಟಿ ಆರಂಭವಾಗಿದೆ.

ಸಿ.ಪಿ.ಯೋಗೇಶ್ವರ್‌ ಅವರು ಹಾಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಾಮನಿರ್ದೇಶನಗೊಂಡಿದ್ದ ಅವರ ಅವಧಿ ಇನ್ನೂ ಎರಡು ವರ್ಷವಿದೆ. ಗಣ್ಯ ಸಾಧಕರಿಗೆ ಸರ್ಕಾರ ನಾಮನಿರ್ದೇಶನ ಮಾಡುವ ಸ್ಥಾನಗಳಿಂದ ಪರಿಷತ್ತಿಗೆ ಅವಕಾಶ ಪಡೆದಿದ್ದ ಕಾಂಗ್ರೆಸ್ಸಿನ ಪ್ರಕಾಶ್‌ ರಾಥೋಡ್, ಹಾಗೂ ಯು.ಬಿ.ವೆಂಕಟೇಶ್‌ ಅವರ ಅವಧಿ ಈ ಮಾಸಾಂತ್ಯದಲ್ಲಿ ಕೊನೆಗೊಳ್ಳಲಿದೆ. ಜೆಡಿಎಸ್‌ನ ತಿಪ್ಪೇಸ್ವಾಮಿ ಅವರ ಅವಧಿ ಜನವರಿ ಮಾಸಕ್ಕೆ ಅಂತ್ಯಗೊಳ್ಳಲಿದೆ.

ಹೀಗೆ ನಾಲ್ಕು ಸ್ಥಾನಗಳು ಶೀಘ್ರ ಲಭ್ಯವಾಗಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಭರ್ಜರಿ ಪೈಪೋಟಿ ಆರಂಭವಾಗಿದೆ. ನಾಮನಿರ್ದೇಶಿತ ಸ್ಥಾನಕ್ಕೆ ವಿ.ಆರ್‌.ಸುದರ್ಶನ್‌, ವಿನಯ್ ಕಾರ್ತಿಕ್, ರಾಣಿ ಸತೀಶ್‌, ಎಸ್‌.ಆರ್‌.ಪಾಟೀಲ್‌ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಪೈಪೋಟಿ ಆರಂಭಿಸಿದ್ದಾರೆ.

ಸಿಎಂ ಆಪ್ತ ವೆಂಕಟೇಶ್‌ಗೆ ಅವಕಾಶ?:

ಕಳೆದ ಮೂರು ದಶಕಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಾಗಿರುವ ಹಾಗೂ ಹಾಲಿ ಮುಖ್ಯಮಂತ್ರಿಯವರ ವಿಶೇಷಾಧಿಕಾರಿಯಾದ ವೆಂಕಟೇಶ್‌ ಅವರ ಹೆಸರು ಪ್ರಧಾನವಾಗಿ ಕೇಳಿ ಬಂದಿರುವುದು ವಿಶೇಷವಾಗಿದೆ.

ಮುಖ್ಯಮಂತ್ರಿಯವರೊಂದಿಗೆ ದಶಕಗಳ ಕಾಲ ಕಾರ್ಯನಿರ್ವಹಿಸಿ ಉನ್ನತ ಹುದ್ದೆ ಪಡೆದವರ ಸಂಖ್ಯೆ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಇದೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ತಮ್ಮೊಂದಿಗೆ ದಶಕಗಳ ಕಾಲ ಇದ್ದ ತಿಪ್ಪೇಸ್ವಾಮಿ ಅವರಿಗೆ ಇಂತಹುದೇ ಹುದ್ದೆ ದೊರೆಯುವಂತೆ ಮಾಡಿದ್ದರು. ಯಡಿಯೂರಪ್ಪ ಅವರು ತಮ್ಮ ಆಪ್ತ ಸಿದ್ದಲಿಂಗಸ್ವಾಮಿಗೆ ಬಿಜೆಪಿ ಟಿಕೆಟ್‌ ಕೊಡಿಸಿ ಖುದ್ದು ಸಿದ್ದರಾಮಯ್ಯ ಅವರ ಸಮ್ಮುಖವೇ ವರುಣದಿಂದ ಸ್ಪರ್ಧೆ ಮಾಡುವಂತೆ ಮಾಡಿದ್ದರು.

ಈ ಎಲ್ಲ ಹಿನ್ನೆಲೆಯಲ್ಲಿ ವೆಂಕಟೇಶ್‌ ಹೆಸರು ಮಾಧ್ಯಮಗಳಲ್ಲಿ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್‌ ಅವರು, ಈ ಹುದ್ದೆಯ ಬಯಕೆ ಹಾಗೂ ಅರ್ಹತೆ ಎರಡೂ ತಮಗೆ ಇದೆ ಎಂದು ಭಾವಿಸಿ ಮಾಧ್ಯಮಗಳಲ್ಲಿ ಚರ್ಚೆಯಾಗಿರಬಹುದು. ಆದರೆ, ತಾವು ಈ ಹುದ್ದೆಗಾಗಿ ಪ್ರಯತ್ನಿಸಿಲ್ಲ ಹಾಗೂ ಮುಖ್ಯಮಂತ್ರಿಯವರನ್ನು ಮುಜುಗರಕ್ಕೆ ತಳ್ಳುವ ಉದ್ದೇಶ ತಮಗಿಲ್ಲ ಎಂದು ಪ್ರತಿಕ್ರಿಯಿಸಿದರು. 

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ