ಕೋಲಾರ ಮಾದರಿ ಜಿಲ್ಲೆಯನ್ನಾಗಿಸಲು ಸಹಕರಿಸಿ

KannadaprabhaNewsNetwork |  
Published : Jun 21, 2024, 01:02 AM ISTUpdated : Jun 21, 2024, 04:53 AM IST
೨೦ಕೆಎಲ್‌ಆರ್-೫ಕೋಲಾರದಲ್ಲಿ ಸಂಸದ ಎಂ.ಮಲ್ಲೇಶಬಾಬುರನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕೋಲಾರ ಜಿಲ್ಲೆ ಹಿಂದುಳಿದಿದೆ ಎಂಬ ಅಪವಾದದಿಂದ ಮುಕ್ತವಾಗಿಸಲು ಸಂಸದ ಮಲ್ಲೇಶ್‌ಬಾಬು ಸಂಕಲ್ಪ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಸಿಗಬಹುದಾದ ಸೌಲಭ್ಯ ದೊರಕಿಸಲು ಪ್ರಯತ್ನಿಸಲಿದ್ದಾರೆ.

 ಕೋಲಾರ : ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ನೆರವಾಗಿ ಹಾಗೂ ಕೋಲಾರಕ್ಕೆ ಅಂಟಿಕೊಂಡಿರುವ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಅಳಿಸಿಹಾಕಿ ರಾಜ್ಯಕ್ಕೆ ಮಾದರಿಯಾಗಿಸುವ ತಮ್ಮ ಪ್ರಯತ್ನಕ್ಕೆ ಎಲ್ಲಾ ಇಲಾಖೆಗಳ ನೌಕರರು ಸಹಕಾರ ನೀಡಿ ಎಂದು ನೂತನ ಸಂಸದ ಎಂ.ಮಲ್ಲೇಶಬಾಬು ಕರೆ ನೀಡಿದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ನೌಕರರ ಸಂಘದ ಪದಾಧಿಕಾರಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯ ಜನತೆ ನನಗೊಂದು ಉತ್ತಮ ಅವಕಾಶ ನೀಡಿದ್ದಾರೆ, ಅವರ ನಂಬಿಕೆಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಿದ್ದೇನೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಪಡಿಸುವ ತಮ್ಮ ಪ್ರಯತ್ನಕ್ಕೆ ಸರ್ಕಾರಿ ನೌಕರರು ಕೈಜೋಡಿಸುವಂತೆ ಮನವಿ ಮಾಡಿದರು.

ಜಿಲ್ಲೆಗೆ ಸೌಲಭ್ಯ ಕಲ್ಪಿಸಲು ಯತ್ನ

ಕೋಲಾರ ಜಿಲ್ಲೆ ಹಿಂದುಳಿದಿದೆ ಎಂಬ ಅಪವಾದದಿಂದ ಮುಕ್ತವಾಗಿಸಲು ನಾನು ಸಂಕಲ್ಪ ತೊಟ್ಟಿದ್ದೇನೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಸಿಗಬಹುದಾದ ಎಲ್ಲಾ ರೀತಿಯ ನೆರವು, ಸೌಲಭ್ಯಗಳನ್ನು ನನ್ನ ಕೈಲಾದಷ್ಟು ಒತ್ತಡ ಹಾಕಿ ತರುವ ಪ್ರಯತ್ನ ಮಾಡುತ್ತೇನೆ. ನನ್ನ ಪ್ರಯತ್ನಗಳಿಗೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರು ಬೆಂಬಲವಾಗಿದ್ದು, ಅವರು ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ದಿ ಜತೆಗೆ ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ತಮ್ಮ ಪ್ರಯತ್ನಕ್ಕೆ ಸಹಕಾರ ನೀಡಲಿದ್ದಾರೆ ಎಂದರು.

ಜಿಲ್ಲೆಗೆ ನೀರಾವರಿ ಯೋಜನೆ

ಕೋಲಾರ ಜಿಲ್ಲೆಯ ಜನತೆ ಶ್ರಮಜೀವಿಗಳಾಗಿದ್ದಾರೆ, ಅವರಿಗೆ ನೀರಾವರಿ ಸಿಕ್ಕರೆ ಸರ್ಕಾರದ ಯಾವುದೇ ಬಿಟ್ಟಿ ಯೋಜನೆಗಳಿಗೆ ಕಾಯುವುದಿಲ್ಲ, ದುಡಿದು ಇಡೀ ದೇಶಕ್ಕೆ ತರಕಾರಿ, ಹಾಲು,ರೇಷ್ಮೆ ನೀಡುವ ಶಕ್ತಿ ಹೊಂದಿದ್ದಾರೆ ಆದ್ದರಿಂದ ಜಿಲ್ಲೆಗೆ ನೀರಾವರಿ ಯೋಜನೆ ಬರಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದರು.ನನ್ನ ತಂದೆ ಐಎಎಸ್ ಅಧಿಕಾರಿಯಾಗಿ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದ ಗೌರವಕ್ಕೆ ಪಾತ್ರರಾಗಿದ್ದಾರೆ, ಅವರ ಆಶಯಗಳಿಗೆ ಧಕ್ಕೆ ಬಾರದಂತೆ ತಾವು ಕೆಲಸ ಮಾಡುವುದಾಗಿ ಭರವಸೆ ನೀಡಿ ಅ‍ವರು, ಜಿಲ್ಲೆಯ ಜನತೆಯ ಋಣ ನನ್ನ ಮೇಲಿದ್ದು, ಶಕ್ತಿಮೀರಿ ಜಿಲ್ಲೆಗಾಗಿ ಶ್ರಮಿಸುವೆ ಎಂದು ತಿಳಿಸಿದರು.ನೌಕರರ ಸಂಘದ ಬೆಂಬಲ

ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ಜಿಲ್ಲಾ ಸರ್ಕಾರಿ ನೌಕರರ ಸಂಘ ಜಿಲ್ಲೆಯ ಅಭಿವೃದ್ದಿಗೆ ನಡೆಯುವ ತಮ್ಮ ಪ್ರಯತ್ನಕ್ಕೆ ಸದಾ ತಮ್ಮೊಂದಿಗೆ ಇರುತ್ತದೆ, ತಾವು ತಂದ ಯೋಜನೆಗಳನ್ನು ಜನತೆಗೆ ತಲುಪಿಸುವ ಕಾರ್ಯದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ. ನೌಕರರು ಸಹಾ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ, ವೇತನ ಆಯೋಗದ ವರದಿ ಜಾರಿಯಾಗಿಲ್ಲ ಎಂಬ ನೋವು ನಮ್ಮ ನೌಕರರಲ್ಲಿದ್ದು, ಇದರ ಕುರಿತು ರಾಜ್ಯ ಸರ್ಕಾರದ ಗಮನಸೆಳೆಯಲು ಮನವಿ ಮಾಡಿದರು.

ಕೈಗಾರಿಕೆಗಳ ಅಭಿವೃದ್ದಿಗೆ ಸಲಹೆ

ಡಿಐಸಿಯ ಉಪನಿರ್ದೇಶಕ ಹಾಗೂ ಸಂಘದ ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್ ಮಾತನಾಡಿ, ಶ್ರೀನಿವಾಸಪುರದಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಕೋಚ್‌ ಫ್ಯಾಕ್ಟರಿಗಾಗಿ 500 ಎಕರೆ ಭೂಸ್ವಾಧೀನದ ಕುರಿತು ಹಾಗೂ ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಮಾಡಬಹುದಾದ ಕಾರ್ಯಗಳ ಕುರಿತು ಸಲಹೆ ನೀಡಿದರು.ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಕೃಷಿ ಕ್ಷೇತ್ರದ ಅಭಿವೃದ್ದಿಗೆ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಲವು ಸಲಹೆ ನೀಡಿ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು, ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ್, ಸರ್ವೇ ಇಲಾಖೆಯ ವಿಜಯ್, ರಾಮರೆಡ್ಡಿ, ರವಿ,ಚಂದು,ಸುನೀಲ್ ಮತ್ತಿತರರಿದ್ದರು.

PREV

Recommended Stories

''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ಶೇ.40 ಕಮಿಷನ್‌ ಆರೋಪ : ನ್ಯಾ. ದಾಸ್‌ ವರದಿ ಪರಿಶೀಲನೆಗೆ ಮತ್ತೊಂದು ಸಮಿತಿ