;Resize=(412,232))
ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಪಸ್ಥಿತಿ ನಡುವೆಯೇ ಸತತ ಎರಡು ದಿನಗಳ ಸರಣಿ ಸಭೆ ನಂತರ ರಾಜ್ಯ ನಾಯಕತ್ವ ಮಂಡಿಸಿದ ಪಟ್ಟಿಗೆ ಹೈಕಮಾಂಡ್ ಕೆಲ ಬದಲಾವಣೆ ಸೂಚಿಸಿದೆ. ಈ ಬದಲಾವಣೆಗಳೊಂದಿಗೆ ಪರಿಷ್ಕೃತ ಪಟ್ಟಿಯನ್ನು ಸೋಮವಾರದ ವೇಳೆಗೆ ದೆಹಲಿಗೆ ತಲುಪಿಸಲು ರಾಜ್ಯ ನಾಯಕತ್ವಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ತನ್ಮೂಲಕ ಸಂಪುಟ ವಿಸ್ತರಣೆ ವಿಚಾರ ನಿರ್ಣಾಯಕ ಹಂತ ಮುಟ್ಟಿದೆ. ಮೂಲಗಳ ಪ್ರಕಾರ, ಮಲ್ಲಿಕಾರ್ಜುನ ಖರ್ಗೆ ದೆಹಲಿ ತಲುಪಿದ ನಂತರ ಅಂದರೆ ಬಹುತೇಕ ಸೋಮವಾರ ಅಥವಾ ನಂತರದ ಒಂದೆರಡು ದಿನಗಳಲ್ಲಿ ಮತ್ತೆ ಹೈಕಮಾಂಡ್ ನಾಯಕರು ಈ ಪಟ್ಟಿ ಬಗ್ಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ವೇಳೆ ಅಗತ್ಯ ಕಂಡು ಬಂದರೆ ರಾಜ್ಯ ನಾಯಕರಿಗೆ ಮತ್ತೆ ದೆಹಲಿಗೆ ಬುಲಾವ್ ನೀಡಬಹುದು ಅಥವಾ ತಮ್ಮ ಸೂಚನೆ ಪ್ರಕಾರವೇ ಪಟ್ಟಿ ಇದ್ದರೆ ದೂರವಾಣಿಯಲ್ಲೇ ಸಮಾಲೋಚನೆ ನಡೆಸಿ ಒಪ್ಪಿಗೆ ಮುದ್ರೆ ನೀಡುವ ಸಾಧ್ಯತೆಯಿದೆ.
ಬೆಂಗಳೂರಿಗೆ ಆಗಮಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಸಂಜೆ ವೇಳೆಗೆ ದೆಹಲಿ ತಲುಪಲಿದ್ದು, ಕೇರಳಕ್ಕೆ ತೆರಳಿರುವ ಕೆ.ಸಿ.ವೇಣುಗೋಪಾಲ್ ಅವರು ಭಾನುವಾರ ಸಂಜೆ ದೆಹಲಿ ತಲುಪಲಿದ್ದಾರೆ. ಈ ನಾಯಕರು ದೆಹಲಿ ತಲುಪಿದ ನಂತರ ಅಂದರೆ ಸೋಮವಾರದ ನಂತರ ಪಟ್ಟಿಗೆ ಅಂತಿಮ ಮುದ್ರೆ ನೀಡುವ ನಿರ್ಣಾಯಕ ಸಭೆಗಳು ನಡೆಯಲಿವೆ ಎಂದು ಹೇಳಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರೊಂದಿಗೆ ಎಐಸಿಸಿ ವರಿಷ್ಠರಾದ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಸಾದ್ಯಂತವಾಗಿ ಚರ್ಚೆ ನಡೆಸಿದ್ದಾರೆ.
ಈ ವೇಳೆ ರಾಜ್ಯ ನಾಯಕರು ಮಂಡಿಸಿದ ಪಟ್ಟಿಗೆ ಕೆಲ ಮಾನದಂಡಗಳೊಂದಿಗೆ ಬದಲಾವಣೆ ಸೂಚನೆ ನೀಡಿದ್ದಾರೆ. ಮೂಲಗಳ ಪ್ರಕಾರ, ಹಿಂದಿನ ಸರ್ಕಾರ (ಸಿದ್ದರಾಮಯ್ಯ ಸಂಪುಟ)ದಲ್ಲಿದ್ದ ಮೂರರಿಂದ ಐದು ಮಂದಿಗೆ ಮಾತ್ರ ಸಂಪುಟದಲ್ಲಿ ಅವಕಾಶ ದೊರೆಯಬಹುದು. ಉಳಿದಂತೆ ಹೊಸ ಮುಖಗಳಿಗೆ ಆದ್ಯತೆ ಸಿಗಬೇಕು. ಹೊಸ ಮುಖಗಳ ಆಯ್ಕೆ ವೇಳೆಯೂ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.
ರಾಜ್ಯ ನಾಯಕರು ಒಯ್ದಿದ್ದ ಪಟ್ಟಿಯಲ್ಲಿ ಮೇಲ್ವರ್ಗಕ್ಕೆ ಸೇರಿದ ಶಾಸಕರಿಗೆ ಪ್ರಾಧಾನ್ಯತೆ ದೊರಕಿದ್ದರಿಂದ ಇದರಲ್ಲಿ ಬದಲಾವಣೆ ಮಾಡುವಂತೆ ಹಾಗೂ ಜಿಲ್ಲಾವಾರು- ಜಾತಿವಾರು ಪ್ರಾತಿನಿಧ್ಯ ನೀಡುವಾಗ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿರುವ ಸಮುದಾಯಗಳಿಗೆ ಯಾವುದೇ ಕಾರಣಕ್ಕೂ ಆದ್ಯತೆ ಕಡಿಮೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಇದರಿಂದಾಗಿಯೇ ಪಟ್ಟಿಯಲ್ಲಿದ್ದ ಕೆಲ ಹೆಸರುಗಳಿಗೆ ಹೈಕಮಾಂಡ್ ಆಕ್ಷೇಪ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಗುರುವಾರ ಇಡೀ ದಿನ ಸರಣಿ ಸಭೆ ನಡೆದಿತ್ತು. ಮುಖ್ಯವಾಗಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ತ್ರಿವಳಿ ನಾಯಕರು ತಡರಾತ್ರಿಯವರೆಗೂ ಚರ್ಚೆ ನಡೆಸಿದ್ದರು. ಶುಕ್ರವಾರ ಸಿದ್ದರಾಮಯ್ಯ ಅವರು ಬೆಳಗ್ಗೆ ನಗರಕ್ಕೆ ಹಿಂತಿರುಗಿದರೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲೇ ಉಳಿದುಕೊಂಡು ನಾಯಕರೊಂದಿಗೆ ಚರ್ಚೆ ಮುಂದುವರೆಸಿದರು.
ಶಿವಕುಮಾರ್ ಅವರು ಸುರ್ಜೇವಾಲಾ ಅವರೊಂದಿಗೆ ಪ್ರತ್ಯೇಕವಾಗಿ ಸುಮಾರು ಒಂದೂವರೆ ತಾಸಿನವರೆಗೂ ಚರ್ಚೆ ನಡೆಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಸಾಧ್ಯವಾಗದ ಕಾರಣ, ಅವರನ್ನು ಬೆಂಗಳೂರಿನಲ್ಲಿ ಶನಿವಾರ ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಚರ್ಚೆ ನಡೆಸಿದ್ದು, ವರಿಷ್ಠರಿಂದ ಮಾರ್ಗದರ್ಶನ ಪಡೆದು ಸಚಿವ ಸಂಪುಟ ವಿಸ್ತರಣೆಗೆ ಅಂತಿಮ ಸಿದ್ಧತೆ ಮಾಡಲಾಗುವುದು ಎಂದರು.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅಥವಾ ಸಿದ್ದರಾಮಯ್ಯ ಅವರ ಆಪ್ತ ಬಿ.ಆರ್. ಪಾಟೀಲ್ ಅವರಿಗೆ ವಿಧಾನಸಭೆ ಸಭಾಧ್ಯಕ್ಷರ ಹುದ್ದೆ ಸಿಗುವ ಸಾಧ್ಯತೆಯಿದೆ. ಈ ಬಗ್ಗೆಯೂ ವರಿಷ್ಠರೊಂದಿಗೆ ಚರ್ಚಿಸಿದ್ದು, ಇಬ್ಬರಲ್ಲಿ ಯಾರ ಹೆಸರು ಅಂತಿಮವಾಗಲಿದೆ ಎಂಬುದನ್ನು ನೋಡಬೇಕಿದೆ.