;Resize=(412,232))
ಬೆಂಗಳೂರು : ಬಿಡದಿ ಟೌನ್‌ಶಿಪ್ ಪ್ರಸ್ತಾಪದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಬಿಡದಿಯಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಿಸಿದ್ದಾರೆ.
ಶುಕ್ರವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾದಯಾತ್ರೆ ದಿನಾಂಕವನ್ನು ಜೆಡಿಎಸ್ ಮುಖಂಡರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು. ವಿಧಾನಮಂಡಲದ ಅಧಿವೇಶನ ಪ್ರಾರಂಭ ಆಗುವುದಕ್ಕಿಂತ ಮೊದಲೇ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಭಾಗದಲ್ಲಿ ಸ್ಯಾಟಲೈಟ್ ಟೌನ್‌ಶಿಪ್ ಹೆಸರಿನಲ್ಲಿ ರೈತರ ಫಲವತ್ತಾದ ಜಮೀನುಗಳನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದ್ದು, ಹೈಕಮಾಂಡ್ ಹೊಟ್ಟೆ ತುಂಬಿಸಲು ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದ್ದಾರೆ. ಶಿವಕುಮಾರ್ ಅವರು ರಿಯಲ್ ಎಸ್ಟೇಟ್ ಏಜೆಂಟ್ ಎಂದು ಜನರು ಮಾತನಾಡುತ್ತಿದ್ದಾರೆ. ಆ ಆರೋಪದಿಂದ ಹೊರಬರುವ ಅಪೇಕ್ಷೆ ನಿಮ್ಮಲ್ಲಿದ್ದರೆ ರಾಜ್ಯದಲ್ಲಿ ಹೋರಾಟ ಪ್ರಾರಂಭವಾಗುವ ಮೊದಲೇ ಎಚ್ಚೆತ್ತುಕೊಳ್ಳಿ. ರೈತರ ಕಣ್ಣೀರಿನಿಂದ ನಿಮಗೆ ಒಳ್ಳೆಯದಾಗಲು ಸಾಧ್ಯವಿಲ್ಲ. ಬಿಡದಿ ಟೌನ್‌ಶಿಪ್ ನಿರ್ಧಾರದಿಂದ ಮುಖ್ಯಮಂತ್ರಿಗಳು ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಸರ್ಕಾರ ಬಿಡದಿ ಭಾಗದಲ್ಲಿ ರೈತರ ಜಮೀನುಗಳನ್ನು ಒತ್ತಾಯಪೂರ್ವಕವಾಗಿ ಹಾಗೂ ಬಲವಂತವಾಗಿ ಕಸಿದುಕೊಳ್ಳುವ ಮೂಲಕ ಹುಚ್ಚಾಟಿಕೆ ನಡೆಸುತ್ತಿದೆ. ಈ ನಾಡಿಗೆ ಅನ್ನ ನೀಡುವ ರೈತರ ಹಿತ ಕಾಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೃಷಿ ಚಟುವಟಿಕೆಯನ್ನೇ ನೆಚ್ಚಿಕೊಂಡಿರುವ ಬಡ ರೈತ ಕುಟುಂಬಗಳ ನಾಲ್ಕೈದು ಎಕರೆ ಜಮೀನನ್ನು ಕಿತ್ತುಕೊಂಡು ಅವರನ್ನು ಬೀದಿಗೆ ತಳ್ಳಲಾಗುತ್ತಿದೆ. ಆದರೆ, ಇದೇ ಕಾಂಗ್ರೆಸ್ ನಾಯಕರು ಹಾಗೂ ಶಾಸಕರು ಬಿಡದಿ ಭಾಗದಲ್ಲಿ ನೂರಾರು, ಸಾವಿರಾರು ಎಕರೆ ಜಮೀನು ಹೊಂದಲು ಯಾವುದೇ ಅಡ್ಡಿಯಿಲ್ಲದಿರುವುದು ಇವರ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ವಿಜಯೇಂದ್ರ ಹರಿಹಾಯ್ದರು.
ತಮ್ಮನ್ನು ಮುಖ್ಯಮಂತ್ರಿ ಮಾಡಿದರೆ ಬಿಡದಿ ಟೌನ್‌ಶಿಪ್ ಮಾಡುತ್ತೇನೆ ಮತ್ತು ಡಿಎಲ್‌ಎಫ್ ಸಂಸ್ಥೆಗೆ ಅವಕಾಶ ಮಾಡಿಕೊಡುತ್ತೇನೆ ಎಂಬುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಇವತ್ತು ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ. ಜಮೀನು ನೀಡಲು ಒಪ್ಪದ ಅಮಾಯಕ ರೈತ ಕುಟುಂಬಗಳ ಮನೆಗೆ ರಾತ್ರೋರಾತ್ರಿ ಗೂಂಡಾಗಳನ್ನು ಕಳುಹಿಸಿ, ನಿಮಗೆ ಉಳಿಗಾಲವಿಲ್ಲ ಎಂದು ಪ್ರಾಣ ಬೆದರಿಕೆ ಹಾಕಲಾಗುತ್ತಿದೆ. ಒಂದೆಡೆ ರೈತರಿಂದ ಬಲವಂತವಾಗಿ ಜಮೀನು ಕಸಿದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಲೇ ಮತ್ತೊಂದೆಡೆ ತಮಗಾಗಿ ಹೋರಾಡುತ್ತಿರುವ ರೈತರ ಮೇಲೆಯೇ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಜೈಲಿಗಟ್ಟುವ ಕುತಂತ್ರವನ್ನು ಸರ್ಕಾರ ಮಾಡುತ್ತಿದೆ. ಅಧಿಕಾರದ ಮದ ಮತ್ತು ದರ್ಪದಿಂದ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವ ಮುಖ್ಯಮಂತ್ರಿಗಳು ತಮ್ಮ ಕೃಷಿ ಇಲಾಖೆಯನ್ನು ಸಂಪೂರ್ಣ ಬದಿಗಿಟ್ಟು, ತಮ್ಮ ಇಲಾಖೆಯ ಹೆಸರನ್ನು ‘ರಿಯಲ್ ಎಸ್ಟೇಟ್ ಕಾಂಗ್ರೆಸ್ ಇಲಾಖೆ’ ಎಂದು ಬದಲಾಯಿಸಿಕೊಂಡರೆ ಮಾತ್ರ ಇಲಾಖೆಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಲೇವಡಿ ಮಾಡಿದರು.
ದೇಶಾದ್ಯಂತ ‘ಭಾರತ್ ಜೋಡೋ’ ಯಾತ್ರೆ ನಡೆಸಿ ರೈತರ ರಕ್ಷಣೆ ಮಾಡುತ್ತೇನೆ ಎಂದಿದ್ದ ರಾಹುಲ್ ಗಾಂಧಿ ಅವರು ಕರ್ನಾಟಕದ ರೈತರ ಮೇಲಾಗುತ್ತಿರುವ ಇಷ್ಟೊಂದು ದೊಡ್ಡ ದೌರ್ಜನ್ಯದ ವಿರುದ್ಧ ಇವತ್ತು ಸಂಪೂರ್ಣ ಮೌನ ವಹಿಸಿ ನಾಪತ್ತೆಯಾಗಿದ್ದಾರೆ. ರಾಹುಲ್ ಗಾಂಧಿ ಅವರು ತಕ್ಷಣವೇ ತಮ್ಮ ಪರಮಾಪ್ತ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿ ರೈತರ ಮೇಲಿನ ಮೊಕದ್ದಮೆಗಳನ್ನು ಕೈಬಿಡಬೇಕು ಹಾಗೂ ಬಿಡದಿ ಟೌನ್‌ಶಿಪ್ ಯೋಜನೆಯಿಂದ ಸರ್ಕಾರ ಹಿಂದೆ ಸರಿಯುವಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ರೈತರ ಶಾಪಕ್ಕೆ ಒಳಗಾದ ಯಾವುದೇ ಸರ್ಕಾರಗಳು ಇತಿಹಾಸದಲ್ಲಿ ಬದುಕುಳಿದಿಲ್ಲ. ಬಿಡದಿ ಭಾಗದ ರೈತರಿಗೆ ನ್ಯಾಯ ಸಿಗುವವರೆಗೂ ಭಾರತೀಯ ಜನತಾ ಪಾರ್ಟಿ ವಿಶ್ರಮಿಸುವುದಿಲ್ಲ. ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಡೀ ಬಿಜೆಪಿ ಒಗ್ಗಟ್ಟಾಗಿ ನಿಂತಿದ್ದು, ಸದನದ ಒಳಗೂ ಮತ್ತು ಹೊರಗೂ ಸರ್ಕಾರದ ವಿರುದ್ಧ ನಿರಂತರವಾಗಿ ಈ ಹೋರಾಟ ಮುಂದುವರಿಯಲಿದೆ ಎಂದು ವಿಜಯೇಂದ್ರ ಘೋಷಿಸಿದರು.
ಮುಖ್ಯಮಂತ್ರಿಯಾಗಿ ಎಷ್ಟು ದಿನ ಆ ಕುರ್ಚಿಯಲ್ಲಿ ಕುಳಿತಿದ್ದೀರಿ ಎಂಬುದು ಮುಖ್ಯವಲ್ಲ; ಮುಖ್ಯಮಂತ್ರಿಯಾಗಿ ಎಷ್ಟು ಸಂಪಾದನೆ ಮಾಡಿದ್ದೀರೆಂಬುದು ಮುಖ್ಯವಲ್ಲ; ರಾಜ್ಯದ ಮುಖ್ಯಮಂತ್ರಿಯಾಗಿ ಕರ್ನಾಟಕದ ಅಭಿವೃದ್ಧಿಗೆ ತಮ್ಮ ಕೊಡುಗೆ ಏನೆಂಬುದನ್ನು ಜನರು ಮುಂದೆ ಮಾತನಾಡುತ್ತಾರೆ. ಬಿಡದಿ ಟೌನ್‌ಶಿಪ್, ಕನಕಪುರ ವಿಮಾನ ನಿಲ್ದಾಣದ ಬಗ್ಗೆ ತಲೆ ಕೆಡಿಸಿಕೊಂಡಿದ್ದೀರಲ್ಲವೇ? ಅದರ ಶೇ.20ರಷ್ಟು ಸಮಯವನ್ನು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೊಡಿ. ಆಗ ಉತ್ತರ ಕರ್ನಾಟಕದ ಜನರೂ ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಹೇಳಿದರು.