ಬಿಜೆಪಿ ಎಂಎಲ್ಸಿ ಪ್ರಾಣೇಶ್‌ ಸದಸ್ಯತ್ವ ಸುಪ್ರೀಂನಲ್ಲಿ ರದ್ದು

Published : Jul 17, 2026, 06:37 AM IST
Gayathri Shanthegowda

ಸಾರಾಂಶ

ವಿಧಾನ ಪರಿಷತ್‌ ಉಪಸಭಾಪತಿಯೂ ಆಗಿರುವ ಎಂ.ಕೆ.ಪ್ರಾಣೇಶ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿಯೂ ಹಿನ್ನಡೆಯಾಗಿದ್ದು, ತಮ್ಮ ಎಂಎಲ್‌ಸಿ ಸ್ಥಾನವನ್ನು ರದ್ದುಗೊಳಿಸಿದ್ದ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ಚಿಕ್ಕಮಗಳೂರು :  ವಿಧಾನ ಪರಿಷತ್‌ ಉಪಸಭಾಪತಿಯೂ ಆಗಿರುವ ಎಂ.ಕೆ.ಪ್ರಾಣೇಶ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿಯೂ ಹಿನ್ನಡೆಯಾಗಿದ್ದು, ತಮ್ಮ ಎಂಎಲ್‌ಸಿ ಸ್ಥಾನವನ್ನು ರದ್ದುಗೊಳಿಸಿದ್ದ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ಇದರಿಂದಾಗಿ 6 ವರ್ಷದಲ್ಲಿ ಬಾಕಿ ಉಳಿದ 1.5 ವರ್ಷದ ಅವಧಿಗೆ ಪ್ರಾಣೇಶ್‌ ಅವರ ವಿರುದ್ಧ ಸ್ಪರ್ಧಿಸಿ ಕೇವಲ 6 ಮತಗಳಿಂದ ಪರಾಭವಗೊಂಡಿದ್ದ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಅವರು ಅಧಿಕಾರ ಅನುಭವಿಸುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್‌ ತೀರ್ಪಿನ ಬೆನ್ನಲ್ಲೇ ಗುರುವಾರ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.

ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ 2021ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ವಿರುದ್ಧ ಕೇವಲ 6 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ನಾಮನಿರ್ದೇಶಿತ ಸದಸ್ಯರೂ ಮತ ಹಾಕಿದ್ದರಿಂದ ಪ್ರಾಣೇಶ್‌ ಅವರು ಗೆದ್ದಿದ್ದಾರೆ ಎಂದು ಗಾಯತ್ರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ನಾಮ ನಿರ್ದೇಶಿತ ಸದಸ್ಯರಿಗೆ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ ಎಂದು ತೀರ್ಪು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಪ್ರಾಣೇಶ್ ಅವರು, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನಾಮನಿರ್ದೇಶಿತ ಸದಸ್ಯರ 12 ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮರುಮತ ಎಣಿಕೆ ಮಾಡಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು. ಅದರಂತೆ ಮರುಮತ ಎಣಿಕೆ ನಡೆಸಿದ್ದ ಅಂದಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಕೋರ್ಟ್ ಆದೇಶದಂತೆ ಮುಚ್ಚಿದ ಲಕೋಟೆಯಲ್ಲಿ 2025ರ ಮಾರ್ಚ್‌ನಲ್ಲಿ ಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಇದೀಗ ಮರು ಮತ ಎಣಿಕೆಗೆ ಆದೇಶಿಸಿದ್ದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಾಣೇಶ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಪ್ರಾಣೇಶ್ ಅವರ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದ ಹಿನ್ನೆಲೆಯಲ್ಲಿ ಪ್ರಾಣೇಶ್ ತಮ್ಮ ಸ್ಥಾನ ಕಳೆದುಕೊಳ್ಳುವಂತಾಗಿದೆ.

2021ರಲ್ಲಿ ಏನಾಗಿತ್ತು?

2021ರ ಡಿ.10ರಂದು ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು ಮತದಾನ ಮಾಡಿದ್ದರು. ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಲ್ಲದೆ ಪುರಸಭೆ, ಪಟ್ಟಣ ಪಂಚಾಯಿತಿಯ 12 ಮಂದಿ ನಾಮನಿರ್ದೇಶನ ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು. 2021ರ ಡಿ.14 ರಂದು ಮತಎಣಿಕೆ ನಡೆದು ಒಟ್ಟು 2,410 ಮತಗಳಲ್ಲಿ 39 ಅಸಿಂಧುವಾಗಿ 2,371 ಮತ ಸಿಂಧುವಾಗಿದ್ದವು. ಆಗ ಎಂ.ಕೆ.ಪ್ರಾಣೇಶ್ ಅವರು 1,188 ಮತಪಡೆದರೆ, ಗಾಯತ್ರಿ ಅವರು 1,182 ಮತಪಡೆದಿದ್ದರು. ಕೇವಲ 6 ಮತಗಳ ಅಂತರದಲ್ಲಿ ಪ್ರಾಣೇಶ್‌ ಗೆಲುವು ಸಾಧಿಸಿದ್ದರು. ಮರು ಮತ ಎಣಿಕೆಗೆ ಗಾಯತ್ರಿ ಶಾಂತೇಗೌಡ ಮನವಿ ಸಲ್ಲಿಸಿದ್ದರು.

ಕೊನೆಗೂ ನ್ಯಾಯ ಸಿಕ್ಕಿದೆ

ನಾಲ್ಕೂವರೆ ವರ್ಷದಿಂದ ನ್ಯಾಯಕ್ಕಾಗಿ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಲಾಗಿತ್ತು. ಈಗ ನ್ಯಾಯ ಸಿಕ್ಕಿದೆ.

- ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್‌ ಅಭ್ಯರ್ಥಿ

ಒಂದೇ ವರ್ಷದಲ್ಲಿ ಇಬ್ಬರ ಅಧಿಕಾರ ಅದಲು-ಬದಲು

ಕಾಫಿನಾಡು ಚಿಕ್ಕಮಗಳೂರು ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಎರಡು ಮರುಮತ ಎಣಿಕೆಗಳು ನಡೆದು ಫಲಿತಾಂಶವೇ ಅದಲು ಬದಲಾದ ವಿಶಿಷ್ಟ ಇತಿಹಾಸಕ್ಕೆ ಜಿಲ್ಲೆ ಸಾಕ್ಷಿಯಾಗಿದೆ. ಈ ಹಿಂದೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆಯೂ ಮತ ಮರುಎಣಿಕೆ ನಡೆದು ಮೊದಲು ಪರಾಭವಗೊಂಡಿದ್ದ ಡಿ.ಎನ್.ಜೀವರಾಜ್ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ ಟಿ.ಡಿ.ರಾಜೇಗೌಡ ನ್ಯಾಯಾಲಯದ ಮೊರೆ ಹೋಗಿ ಮತ ಮರು ಎಣಿಕೆಗೆ ತಡೆಯಾಜ್ಞೆ ತರುವ ಮೂಲಕ ಮತ್ತೆ ಅವರೇ ಶಾಸಕರಾಗಿ ಮುಂದುವರಿದಿದ್ದಾರೆ. ಇದೀಗ ವಿಧಾನ ಪರಿಷತ್ ಚುನಾವಣೆ ಮತ ಮರು ಎಣಿಕೆ ಬಳಿಕ ಗೆದ್ದವರು ಸೋಲುವಂತಾಗಿದೆ.

ಒಂದೂವರೆ ವರ್ಷ ಗಾಯತ್ರಿ ಎಂಎಲ್ಸಿ  

ವಿಧಾನ ಪರಿಷತ್‌ ಉಪಸಭಾಪತಿ ಆಗಿರುವ ಬಿಜೆಪಿಯ ಎಂ.ಕೆ.ಪ್ರಾಣೇಶ್‌ ಅವರ ಆಯ್ಕೆ ರದ್ದಾಗಿರುವ ಹಿನ್ನೆಲೆಯಲ್ಲಿ ಉಳಿದಿರುವ ಅವಧಿಗೆ ಕಾಂಗ್ರೆಸ್ಸಿನ ಪರಾಜಿತ ಅಭ್ಯರ್ಥಿ ಎಂ.ವಿ.ಗಾಯತ್ರಿ ಶಾಂತೇಗೌಡ ಸದಸ್ಯರಾಗಲಿದ್ದಾರೆ. ಪ್ರಾಣೇಶ್‌ ಅವರ ಸದಸ್ಯತ್ವ ರದ್ದಾಗಿರುವ ಆದೇಶ ವಿಧಾನ ಪರಿಷತ್‌ ಕಚೇರಿಗೆ ತಲುಪಿದ ನಂತರ ಸಹಜವಾಗಿ ಅವರ ಅವಧಿ ಕೊನೆಗೊಂಡಿದೆ ಎಂದು ಘೋಷಿಸಲಾಗುವುದು. ಗಾಯತ್ರಿ ಶಾಂತೇಗೌಡ ಅವರು ಪರಿಷತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಉಳಿದ ಅವಧಿಯ (2028 ಜನವರಿ 5) ಸದಸ್ಯರಾಗಿ ಅವರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪರಿಷತ್ತಿನ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?

- 2021ರ ಡಿಸೆಂಬರ್‌ನಲ್ಲಿ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ವಿಧಾನಪರಿಷತ್‌ ಸ್ಥಾನಕ್ಕೆ ಚುನಾವಣೆ

- ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಎದುರು 6 ಮತಗಳ ಅಂತರದಿಂದ ಗೆದ್ದಿದ್ದ ಬಿಜೆಪಿಯ ಎಂ.ಕೆ. ಪ್ರಾಣೇಶ್‌

- ನಾಮನಿರ್ದೇಶಿತ ಸದಸ್ಯರೂ ಚುನಾವಣೆಯಲ್ಲಿ ಮತ ಹಾಕಿದ್ದಾರೆ ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದ ಗಾಯತ್ರಿ

- ಆ ಸದಸ್ಯರಿಗೆ ಹಕ್ಕಿಲ್ಲ ಎಂದಿದ್ದ ಹೈಕೋರ್ಟ್‌. ಅದರ ವಿರುದ್ಧ ಸುಪ್ರೀಂಗೆ ಪ್ರಾಣೇಶ್. ಮರು ಎಣಿಕೆ ಬಳಿಕ ಅರ್ಜಿ ವಜಾ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯದ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ: ಕೇಂದ್ರಕ್ಕೆ ಪರಂ
ಸಚಿವ ಸಂಪುಟ ಸಸ್ಪೆನ್ಸ್‌ - ಖರ್ಗೆ ದಿಢೀರ್‌ ಬೆಂಗಳೂರಿಗೆ । ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಚರ್ಚೆ