ಸಚಿವ ಸಂಪುಟ ಸಸ್ಪೆನ್ಸ್‌ - ಖರ್ಗೆ ದಿಢೀರ್‌ ಬೆಂಗಳೂರಿಗೆ । ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಚರ್ಚೆ

Published : Jul 17, 2026, 04:58 AM IST
Mallikarjun Kharge

ಸಾರಾಂಶ

ಪುತ್ರನ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿಗೆ ಮರಳಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಪಸ್ಥಿತಿ ಹೊರತಾಗಿಯೂ ಕಾಂಗ್ರೆಸ್‌ ಹೈಕಮಾಂಡ್‌ ಸಂಪುಟ ವಿಸ್ತರಣೆ ಕುರಿತು ರಾಜ್ಯ ನಾಯಕರೊಂದಿಗೆ ಗುರುವಾರ ಗಂಭೀರ ಚರ್ಚೆ ನಡೆಸಿದ್ದು, ರಾಜ್ಯ ನಾಯಕರ ಅಭಿಪ್ರಾಯವನ್ನು ಸಂಪೂರ್ಣವಾಗಿ ಸಂಗ್ರಹಿಸಿದೆ.

ಬೆಂಗಳೂರು :  ಪುತ್ರನ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಮರಳಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಪಸ್ಥಿತಿ ಹೊರತಾಗಿಯೂ ಕಾಂಗ್ರೆಸ್‌ ಹೈಕಮಾಂಡ್‌ ಸಂಪುಟ ವಿಸ್ತರಣೆ ಕುರಿತು ರಾಜ್ಯ ನಾಯಕರೊಂದಿಗೆ ಗುರುವಾರ ಗಂಭೀರ ಚರ್ಚೆ ನಡೆಸಿದ್ದು, ರಾಜ್ಯ ನಾಯಕರ ಅಭಿಪ್ರಾಯವನ್ನು ಸಂಪೂರ್ಣವಾಗಿ ಸಂಗ್ರಹಿಸಿದೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಸೇರಬೇಕಾದವರ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ.

ಈ ಪಟ್ಟಿಯ ಬಗ್ಗೆ ಖರ್ಗೆ ಅವರು ದೆಹಲಿಗೆ ಹಿಂತಿರುಗಿದ ನಂತರ ಹೈಕಮಾಂಡ್‌ ಮತ್ತೊಮ್ಮೆ ಚರ್ಚೆ ನಡೆಸಲಿದೆ. ಈ ವೇಳೆ ಅಗತ್ಯಬಿದ್ದರೆ ರಾಜ್ಯ ನಾಯಕರನ್ನು ಮತ್ತೊಮ್ಮೆ ದೆಹಲಿಗೆ ಕರೆಸಬಹುದು. ಒಂದು ವೇಳೆ ತೀವ್ರ ಭಿನ್ನಾಭಿಪ್ರಾಯವಿಲ್ಲದ ಪಕ್ಷದಲ್ಲಿ ಹೈಕಮಾಂಡ್‌ ತಾನೇ ಪಟ್ಟಿ ಅಂತಿಮಗೊಳಿಸಿ ಒಪ್ಪಿಗೆ ಮುದ್ರೆ ನೀಡಿ ರಾಜ್ಯಕ್ಕೆ ರವಾನಿಸಬಹುದು.

ಒಟ್ಟಾರೆ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಹೈಕಮಾಂಡ್‌ ದೃಢ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಖರ್ಗೆ ಬೆಂಗಳೂರಿಗೆ:

ಸಂಪುಟ ವಿಸ್ತರಣೆ ಬಗ್ಗೆ ಗಂಭೀರ ಚರ್ಚೆ ನಡೆಸಲು ರಾಜ್ಯದ ತ್ರಿವಳಿ ನಾಯಕರಿಗೆ ದೆಹಲಿಗೆ ಬುಲಾವ್‌ ನೀಡಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪುತ್ರನ ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹಿಂತಿರುಗಿದ್ದರು.

ಖರ್ಗೆ ಅವರ ಅನುಪಸ್ಥಿತಿಯಲ್ಲಿ ರಾಜ್ಯ ನಾಯಕರು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರೊಂದಿಗೆ ಒಟ್ಟಾಗಿ ಹಾಗೂ ಪ್ರತ್ಯೇಕವಾಗಿ ಈ ನಾಯಕರು ಚರ್ಚೆ ನಡೆಸಿದರು. ಅಲ್ಲದೆ, ವರಿಷ್ಠ ರಾಹುಲ್ ಗಾಂಧಿ ಅವರೊಂದಿಗೆ ಅನೌಪಚಾರಿಕ ಸಭೆ ಕೂಡ ನಡೆಸಿದರು.

ಇಡೀ ದಿನ ನಡೆದ ಸರಣಿ ಸಭೆಗಳ ನಂತರ ತಮ್ಮ ಅಭಿಪ್ರಾಯ ಹಾಗೂ ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸರಣಿ ಸಭೆ ಬಳಿಕ ರಾಹುಲ್‌ ಜತೆ ಔಪಚಾರಿಕ ಭೇಟಿ:

ಬುಧವಾರವೇ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಗುರುವಾರ ಬೆಳಗ್ಗೆಯಿಂದಲೇ ವೇಣುಗೋಪಾಲ್‌, ಸುರ್ಜೇವಾಲಾ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಬಳಿಕ ಒಟ್ಟಾಗಿಯೂ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪಟ್ಟಿಯನ್ನು ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ. ಸಂಜೆ ರಾಹುಲ್‌ ಗಾಂಧಿ ಅವರೊಂದಿಗೆ ಶಿವಕುಮಾರ್‌, ಸಿದ್ದರಾಮಯ್ಯ, ಹರಿಪ್ರಸಾದ್‌, ಸುರ್ಜೇವಾಲಾ ಅವರು ಔಪಚಾರಿಕ ಮಾತುಕತೆ ನಡೆಸಿದರು. ಈ ವೇಳೆ ಸಂಪುಟ ವಿಸ್ತರಣೆ ಕುರಿತ ಅಂತಿಮ ನಿರ್ಧಾರದ ಬಗ್ಗೆ ಚರ್ಚೆಯಾಗಿಲ್ಲ ಎಂದು ತಿಳಿದುಬಂದಿದೆ.

ಮತ್ತೆ ಸಂಜೆ ಕೆ.ಸಿ.ವೇಣುಗೋಪಾಲ್ ಅವರನ್ನು ಈ ನಾಯಕರು ಭೇಟಿ ಮಾಡಿದ್ದು, ಪ್ರತ್ಯೇಕ ಮಾತುಕತೆ ನಡೆಸಿದರು. ಈ ಸಭೆಗಳು ಗುರುವಾರ ತಡರಾತ್ರಿಯವರೆಗೂ ನಡೆದಿತ್ತು.

ಖರ್ಗೆ ಅನುಪಸ್ಥಿತಿಯಿಂದ ನಿರ್ಧಾರ ಮಾಡಿಲ್ಲ:

ಸಭೆ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಅವರು ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಗೆ ತೆರಳಿದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ವಿಸ್ತರಣೆ ಮುಂದೂಡಲ್ಪಟ್ಟಿದೆ. ಖರ್ಗೆ ಇಲ್ಲದ ಕಾರಣಕ್ಕೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಧಿವೇಶನದೊಳಗೆ ವಿಸ್ತರಣೆ-ಸುರ್ಜೇವಾಲ:

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಮಾತನಾಡಿ, ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗಿದೆ. ಮುಂದಿನ ಅಧಿವೇಶನದ ಒಳಗೆ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದ್ದಾರೆ.

ಅಧಿವೇಶನಕ್ಕೆ ಮುನ್ನ ವಿಸ್ತರಣೆ?

- ಪುತ್ರನ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಮರಳಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

- ಅವರ ಅನುಪಸ್ಥಿತಿ ಹೊರತಾಗಿಯೂ ಕಾಂಗ್ರೆಸ್‌ ಹೈಕಮಾಂಡ್‌ನಿಂದ ರಾಜ್ಯ ನಾಯಕರ ಜತೆ ಚರ್ಚೆ

- ರಾಜ್ಯ ನಾಯಕರಿಂದ ಸಂಪುಟ ವಿಸ್ತರಣೆ ಕುರಿತು ಅಭಿಪ್ರಾಯ ಸಂಗ್ರಹ. ನಾಯಕರಿಂದ ಪಟ್ಟಿ ಸ್ವೀಕಾರ

- ಖರ್ಗೆ ದಿಲ್ಲಿಗೆ ಮರಳಿದ ಬಳಿಕ ಮತ್ತೊಮ್ಮೆ ಚರ್ಚೆ. ಅಗತ್ಯ ಬಿದ್ದರೆ ರಾಜ್ಯ ನಾಯಕರಿಗೆ ಬುಲಾವ್‌ ಸಾಧ್ಯತೆ

- ತೀವ್ರ ಭಿನ್ನಾಭಿಪ್ರಾಯ ಇಲ್ಲದೇ ಹೋದರೆ ಹೈಕಮಾಂಡೇ ಪಟ್ಟಿ ಅಂತಿಮಗೊಳಿಸಿ ಕಳುಹಿಸುವ ಸಂಭವ

- ನಿನ್ನೆ ಏನೇನಾಯ್ತು?

- ಡಿಕೆಶಿ, ಸಿದ್ದು ಜತೆ ಸುರ್ಜೇವಾಲಾ ಮಾತುಕತೆ. ಬಳಿಕ ವೇಣುಗೋಪಾಲ್‌ ಜತೆ ಚರ್ಚೆ

- ರಾಹುಲ್‌ ಗಾಂಧಿ ಅವರನ್ನು ಭೇಟಿಯಾದ ಡಿಕೆಶಿ, ಸಿದ್ದು, ಹರಿಪ್ರಸಾದ್‌ ಸುರ್ಜೇವಾಲಾ

- ರಾಹುಲ್‌ ಜತೆ ಔಪಚಾರಿಕ ಮಾತುಕತೆ. ಆದರೆ ಸಂಪುಟ ಬಗ್ಗೆ ಅಂತಿಮ ನಿರ್ಧಾರ ಇಲ್ಲ

- ಸಂಜೆ ಕೆ.ಸಿ. ವೇಣುಗೋಪಾಲ್‌ ಜತೆ ಮತ್ತೊಂದು ಸುತ್ತಿನ ಪ್ರತ್ಯೇಕ ಸಮಾಲೋಚನೆ

ಆಕಾಂಕ್ಷಿಗಳಿಂದ ದಿಲ್ಲಿಯಲ್ಲಿ ಲಾಬಿ

ಸಂಪುಟ ವಿಸ್ತರಣೆ ಚರ್ಚೆ ಹಿನ್ನೆಲೆಯಲ್ಲಿ ಶಾಸಕರಾದ ಲಕ್ಷ್ಮಣ ಸವದಿ, ಅಶೋಕ ಪಟ್ಟಣ, ಅಪ್ಪಾಜಿ ನಾಡಗೌಡ, ರಹೀಂಖಾನ್, ಟಿ.ಬಿ.ಜಯಚಂದ್ರ, ವಿಜಯಾನಂದ ಕಾಶಪ್ಪನವರ್ ದೆಹಲಿಯಲ್ಲೇ ಬೀಡು ಬಿಟ್ಟಿದ್ದರು. ಕಾಂಗ್ರೆಸ್‌ ವರಿಷ್ಠರನ್ನು ನೇರವಾಗಿ ಭೇಟಿ ಆಗಲು ಅವಕಾಶ ಸಿಗದಿದ್ದರೂ, ತಾವು ನೆಚ್ಚಿಕೊಂಡಿರುವ ರಾಜ್ಯ ನಾಯಕರ ಮೂಲಕ ಒತ್ತಡ ಹೇರುವ ತಂತ್ರ ಮಾಡಿದರು ಎನ್ನಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅಮೆರಿಕ, ಇರಾನ್‌ನಿಂದ ಮತ್ತೆ ಹೋರ್ಮುಜ್‌ ಮಾರ್ಗ ಬಂದ್‌
ಎಐ ಮೂಲಕವೇ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಹೊಸ ಟೆಕ್‌!